ಸುಮಾರು 15 ವರ್ಷಗಳಿಂದ ರಾಜಕೀಯ ಪಕ್ಷಗಳು, ರಾಜಕಾರಣಿಗಳಿಂದ ಭರವಸೆಗಳು ಬಿಟ್ಟರೆ ಅಗತ್ಯವಿರುವ ನೀರಾವರಿ ಸೌಲಭ್ಯ ದಕ್ಕಿಲ್ಲ. ಹಾಗಾಗಿ ನೀರಿನ ಗ್ಯಾರಂಟಿ ಕೊಡುವ ವ್ಯಕ್ತಿಗೆ ಮತ ನೀಡಬೇಕು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯ ರೆಡ್ಡಿ ಕರೆಕೊಟ್ಟರು.
ಚಿಕ್ಕಬಳ್ಳಾಪುರ ನಗರದ ಪತ್ರಿಕಾ ಭವನದಲ್ಲಿ ಬುಧವಾರ ಆಯೋಜಿಸಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, “2009ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಜಲಮೂಲಗಳ ಸಂರಕ್ಷಣೆ, ರೈತರ ಹೊಲ ಗದ್ದೆಗಳಿಗೆ ನೀರು ಕೊಡುವ ಬಿಟ್ಟಿ ಭರವಸೆಗಳನ್ನು ನೀಡಿದ್ದರು. ಆದರೆ ಇವತ್ತಿನವರೆಗೆ ಯಾವುದೇ ಪರಿಹಾರ ಕಂಡುಕೊಳ್ಳುವ, ಪರಿಹಾರ ಕೊಡುವ ಕೆಲಸವಾಗಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕ್ಷೇತ್ರದ ಪ್ರತಿಯೊಬ್ಬರ ನಾಗರಿಕನ ಮೇಲೂ ಈ ಜವಾಬ್ದಾರಿ ಇದೆ. ಅಭ್ಯರ್ಥಿಗಳು ಮತ ಕೇಳಲು ಬಂದಾಗ ನೀರಾವರಿ ಕುರಿತು ಗಟ್ಟಿಯಾಗಿ ಪ್ರಶ್ನೆ ಮಾಡಿ, ಖಚಿತ ಭರವಸೆಯನ್ನು ಪಡೆಯಿರಿ. ವಿಫಲರಾದಲ್ಲಿ ಮುಂದಿನ ಚುನಾವಣೆಯಲ್ಲಿ ಬರಬಾರದು ಎಂದು ಹೇಳಬೇಕು. ಯಾರೇ ಮತ ಕೇಳಲು ಬಂದಾಗ ಕತ್ತಿನ ಪಟ್ಟಿ ಹಿಡಿದು ಕೇಳಿ” ಎಂದು ಕರೆಕೊಟ್ಟರು.
“ಅವೈಜ್ಞಾನಿಕ ನೀರಾವರಿ ಯೋಜನೆಗಳಿಂದ ಹಣ ವ್ಯಯವಾಯಿತೇ ವಿನಃ ಯಾವುದೇ ಉಪಯೋಗವಾಗಲಿಲ್ಲ. ಬಾಣಲೆಯಿಂದ ಬೆಂಕಿಗೆ ಬಿದ್ದ ಪರಿಸ್ಥಿತಿ ನಮ್ಮ ಜಿಲ್ಲೆಗೆ ಬಂದಿದೆ” ಎಂದು ಬೇಸರಗೊಂಡರು.
“ಯುರೇನಿಯಂ, ಆರ್ಸೆನಿಕ್‌ನಂತಹ ವಿಷಕಾರಿ ನೀರು ನಮ್ಮ ಜಿಲ್ಲೆಗೆ ಪೂರೈಕೆಯಾಗುತ್ತಿದೆ. ಇದರಿಂದ ಪ್ಯಾರಾಲಿಸಿಸ್, ಮಿದುಳಿನ ಸಮಸ್ಯೆ ಇತ್ಯಾದಿ ಸಮಸ್ಯೆಗಳು ಉಲ್ಬಣವಾಗುತ್ತಿವೆ. ಆದ್ದರಿಂದ, ಕೇಂದ್ರ ಸರ್ಕಾರ ಕೂಡಲೇ ಗಂಭೀರ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಫಲವತ್ತಾದ ಭೂಮಿ ಇರುವವರಿಗೆ ನೀರಿಲ್ಲದೆ ಲಕ್ಷಾಂತರ ಎಕರೆ ಭೂಮಿ ಪಾಳುಬಿದ್ದಿದೆ. ಆರ್ಥಿಕವಾಗಿ ಸುಧಾರಣೆ ಹೊಂದಿರುವ ರೈತರು ಮಾತ್ರ ಕೊಳವೆ ಬಾವಿ ಮೊರೆಹೋಗುತ್ತಾರೆ. ಆದರೆ, ರೈತರಿಗೆ ಶಾಶ್ವತ ನೀರಾವರಿ ಭದ್ರತೆ ಇಲ್ಲ. ಕುಡಿಯಲು ಯೋಗ್ಯವಿಲ್ಲ, ಕೃಷಿಗೂ ಯೋಗ್ಯವಿಲ್ಲ” ಎಂದು ಕಳವಳ ವ್ಯಕ್ತಪಡಿಸಿದರು.
“ಯುರೇನಿಯಂ, ಆರ್ಸೆನಿಕ್ ಯುಕ್ತ ನೀರಿನಿಂದ ಮಲ್ಟಿ ಆರ್ಗನ್ ಡ್ಯಾಮೇಜ್ ಆಗುತ್ತದೆ ಎಂದು ಬೆಂಗಳೂರಿನ ಎಂ2ಎಂ ಸಂಸ್ಥೆ ಸರ್ಕಾರಕ್ಕೆ ವರದಿ ನೀಡಿದೆ. ಆದರೂ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ” ಎಂದರು.
ಕೇಂದ್ರ ಸರ್ಕಾರದ Drought Manual ಅನುಸಾರ ಬರ ಪರಿಹಾರಕ್ಕೆ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದರು. ಆದರೆ ನೀರಾವರಿ ಯೋಜನೆಯ ಸಿವೆಜ್ ಮ್ಯಾನುವಲ್ ಅನುಸಾರ ಪರಿಹಾರ ಶಾಶ್ವತ ನೀರಾವರಿ ಯೋಜನೆ ತರಲು ಏಕೆ ಸಾಧ್ಯವಿಲ್ಲ. ಸರ್ಕಾರದ ಈ ರೀತಿಯ ವರ್ತನೆ ಜಿಲ್ಲೆಗೆ ಆಗಿರುವ ಘೋರ ಅನ್ಯಾಯ. CPHEEO(Central Public Health Engineering Organisation) Guideline ಪ್ರಕಾರ ಪರಿಹಾರ ಕೊಡಿ” ಎಂದು ಒತ್ತಾಯಿಸಿದರು.
“Guideline ಪ್ರಕಾರ ಪರಿಹಾರ ಕೊಡಲೇಬೇಕು. ನೀರಿನ ಸಮಸ್ಯೆಗೆ ಕಾಲಮಿತಿ ಇಟ್ಟುಕೊಂಡು ಜಿಲ್ಲೆಗೆ ಸೂಕ್ತ ಸಮಯಕ್ಕೆ ಕೃಷಿ ಮತ್ತು ಕುಡಿಯುವ ನೀರಾವರಿ ಯೋಜನೆ ತರಬೇಕು. ಇದರಿಂದ ನಮ್ಮ ಜಿಲ್ಲೆಗಳ ಉಳಿವು ಸಾಧ್ಯ. ಪಕ್ಕದ ಜಿಲ್ಲೆಗೆ ಉತ್ತಮ ಗುಣಮಟ್ಟದ ತರಕಾರಿ ರಫ್ತು ಮಾಡಲು ಸಾಧ್ಯ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಮುಂದಿನ ದಿನದಲ್ಲಿ ಕ್ಷೇತ್ರದ ರಕ್ಷಣೆ ನನ್ನದು: ಗೀತಾ ಶಿವರಾಜ್‌ಕುಮಾರ್
ನನ್ನ ಮತ ನೀರಿಗೆ : “ಜಿಲ್ಲೆಯ ಅಳಿವು ಉಳಿವು ನೀರಿನ ಮೇಲಿದೆ ಎಂಬುದನ್ನು ಎಲ್ಲ ಮತದಾರರು, ಮತದಾರ್ತಿಯರು ಅರಿತು ಪ್ರಜ್ಞಾವಂತರಾಗಿ, ಬದ್ಧತೆಯಿಂದ ಮತಚಲಾವಣೆಗೆ ಮುಂದಾಗಬೇಕು” ಎಂದು ಕರೆ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮಮತಾ, ಹರೀಶ್, ಶ್ರೀರಾಮೆಗೌಡ, ನಾರಾಯಣ ಸ್ವಾಮಿ, ಕೃಷ್ಣಪ್ಪ, ಸುಷ್ಮಾ ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.
