ರೋಗಿಯನ್ನು ನೋಡಲೆಂದು ಬಂದಿದ್ದ ವೇಳೆ ವೈದ್ಯರು ಅವಾಚ್ಯವಾಗಿ ನಿಂದಿಸಿದ್ದಾರೆಂದು ಆಕ್ರೋಶಗೊಂಡ ಮಹಿಳೆಯರು, ಕೊರಳಪಟ್ಟಿ ಹಿಡಿದು ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ನಗರದ ಅರಳುಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಮೂಳೆ ತಜ್ಞರಾಗಿರುವ ಡಾ. ವೆಂಕಟೇಶ್ ಎಂಬುವವರ ಮೇಲೆ ಆಸ್ಪತ್ರೆಯಲ್ಲೇ ಮಹಿಳೆಯೊಬ್ಬರು ಏಕಾಏಕಿ ಹಲ್ಲೆ ಮಾಡಿದ್ದಾರೆ. ವೈದ್ಯರ ಕೊರಳ ಪಟ್ಟಿ ಹಿಡಿದು ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಘಟನೆಯ ವಿಡಿಯೋವನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ.
ವೈದ್ಯರ ಮೇಲೆ ಹಲ್ಲೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾಸ್ಪತ್ರೆಯ ಒಪಿಡಿ ಬಂದ್ ಮಾಡಿ ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದು, ಹಲ್ಲೆಗೈದವರ ವಿರುದ್ಧ ಪ್ರಕರ ದಾಖಲಿಸುವಂತೆ ಆಗ್ರಹಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಚಿಕ್ಕಮಗಳೂರು ನಗರ ಡಿವೈಎಸ್‌ಪಿ ಹಾಗೂ ಎಸ್‌ಐ ಭೇಟಿ ನೀಡಿದ್ದು, ಪ್ರತಿಭಟನಾ ನಿರತ ವೈದ್ಯರನ್ನು ಸಮಾಧಾನಿಸಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಆಗಿದ್ದೇನು?
ಜಗಳವೊಂದರಲ್ಲಿ ಗಾಯಗೊಂಡಿದ್ದ ಇರ್ಫಾನ್ ಎಂಬುವವರು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದಾರೆ. ಈ ವೇಳೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ಮೂಳೆ ತಜ್ಞರಾಗಿರುವ ಡಾ. ವೆಂಕಟೇಶ್ ಅವರು ಚಿಕಿತ್ಸೆ ನೀಡುತ್ತಿದ್ದರು. ರೋಗಿಯ ತಪಾಸಣೆ ನಡೆಸುವಾಗ ಆತನ ಕುಟುಂಬಸ್ಥರು ಕೊಠಡಿಗೆ ತೆರಳಿದ್ದಾರೆ. ಇದನ್ನು ಗಮನಿಸಿದ ವೈದ್ಯರು ಕೊಠಡಿಯಿಂದ ಹೊರಹೋಗುವಂತೆ ಸೂಚಿಸಿದ್ದಾರೆ.

ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಮಾತಿನ ರಭಸದಲ್ಲಿ ವೈದ್ಯರು ಮಹಿಳೆಯನ್ನು ಅವಾಚ್ಯವಾಗಿ ನಿಂದಿಸಿರುವ ಆರೋಪ ಕೇಳಿಬಂದಿದೆ. ಮಾತಿನ ಭರದಲ್ಲಿ ‘ಈ ರೀತಿ ನುಗ್ಗಲು ಇದು ಸೂಳೆಗಳ ಮನೆಯಲ್ಲ’ ಎಂದು ವೈದ್ಯರು ಹೇಳಿರುವುದಾಗಿ ಹಲ್ಲೆ ನಡೆಸಿರುವ ಮಹಿಳೆಯರು ಆರೋಪಿಸಿದ್ದಾರೆ.

ವೈದ್ಯರ ಅವಾಚ್ಯ ಹೇಳಿಕೆಯಿಂದ ಆಕ್ರೋಶಗೊಂಡ ರೋಗಿಯ ಕುಟುಂಬದ ಮಹಿಳೆ ತಸ್ಲೀಮಾ ಎಂಬುವವರು ವೈದ್ಯ ಡಾ. ವೆಂಕಟೇಶ್ ಅವರ ಕೊರಳ ಪಟ್ಟಿ ಹಿಡಿದು ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿರುವ ದೃಶ್ಯವು ಮೊಬೈಲ್‌ನಲ್ಲಿ ಸೆರೆಯಾಗಿದೆ. ಕೂಡಲೇ ಹೊರರೋಗಿ ಬಂದ್ ಮಾಡಿ, ಉಳಿದ ವೈದ್ಯರು ಪ್ರತಿಭಟನೆ ನಡೆಸಿದರು.
ಘಟನೆಯ ಸಂಬಂಧ ವೈದ್ಯರು ಈಗಾಗಲೇ ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವೈದ್ಯರ ವಿರುದ್ಧವೂ ಕೂಡ ದೂರು ನೀಡುವುದಾಗಿ ಹಲ್ಲೆ ನಡೆಸಿರುವ ಮಹಿಳೆಯರು ತಿಳಿಸಿದ್ದಾರೆ.
ಕ್ರಮಕ್ಕೆ ಆಗ್ರಹಿಸಿದ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ
ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಕರ್ತವ್ಯ ನಿರತ ವೈದ್ಯಾಧಿಕಾರಿ, ಡಾಕ್ಟರ್ ವೆಂಕಟೇಶ್ ಅವರ ಮೇಲೆ ಹಲ್ಲೆಯಾದ ದುರದೃಷ್ಟಕರ ಘಟನೆ ನಡೆದಿದೆ. ಗೃಹ ಸಚಿವರಾದ ಡಾ ಜಿ ಪರಮೇಶ್ವರ್ ಅವರೇ ಇಂತಹ ಕೃತ್ಯ ಎಸಗಿದವರನ್ನು ಈ ಕೂಡಲೇ ಬಂಧಿಸಿ ವೈದ್ಯಕೀಯ ಸಿಬ್ಬಂದಿಗಳ ರಕ್ಷಣೆಗೆ ಕ್ರಮ ತೆಗೆದುಕೊಳ್ಳಿ. ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್ ಅವರೇ ತಾವು ಈ ಆರೋಪಿಗಳನ್ನು ಬಂಧಿಸಿ ವೈದ್ಯಕೀಯ ಸಿಬ್ಬಂದಿ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ವಿಶ್ವಾಸವಿಟ್ಟು ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಿ ಎಂದು ವಿಧಾನ ಪರಿಷತ್ ಸದಸ್ಯ, ಚಿಕ್ಕಮಗಳೂರಿನ ಬಿಜೆಪಿ ಮುಖಂಡ ಸಿ ಟಿ ರವಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ, ಆಗ್ರಹಿಸಿದ್ದಾರೆ.
