ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ ಚಂದ್ರ ಅವರು ಮಂಗಳವಾರ ಹಲವು ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಚ್‍ಪಿಎಸ್ ಶಾಲೆಯೊಂದರ ಕಂಪ್ಯೂಟರ್ ಕೊಠಡಿಯಲ್ಲಿ ಆಹಾರ ದಾಸ್ತಾನು ಶೇಖರಿಸಿಟ್ಟಿರುವುದು ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದ ಎಚ್‌ಪಿಎಸ್ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದ್ದು, ಮಕ್ಕಳಿಗೆ ನೀಡುತ್ತಿದ್ದ ಆಹಾರ ಪದಾರ್ಥಗಳನ್ನು ಶಿಕ್ಷಕಿಯೊಬ್ಬರು ಮನೆಗೆ ಕೊಂಡೊಯ್ಯುತ್ತಿದ್ದರು ಎಂಬುದು ತಿಳಿದುಬಂದಿದೆ.
“ಮಕ್ಕಳಿಗಾಗಿ ಸರ್ಕಾರ ನೀಡುತ್ತಿದ್ದ ಆಹಾರ ಸಾಮಗ್ರಿಗಳನ್ನು ಕಿರುಗುಂದ ಶಾಲೆಯಲ್ಲಿ ಶಿಕ್ಷಕಿಯೋರ್ವರು ಮನೆಗೆ ಕೊಂಡೊಯ್ಯುತ್ತಿದ್ದ ಬಗ್ಗೆ ಈ ಹಿಂದೆಯೇ ದೂರು ಬಂದಿತ್ತು. ಈ ಬಗ್ಗೆ ಬಿಇಒ ಅವರ ಗಮನಕ್ಕೂ ತರಲಾಗಿತ್ತು. ಆದರೆ, ಅವರು ಗಮನ ಹರಿಸಿರಲಿಲ್ಲ” ಎಂದು ಎಸ್‍ಡಿಎಂಸಿ ಮಾಜಿ ಅಧ್ಯಕ್ಷ ಕೆ ಆರ್ ಲೋಕೇಶ್ ತಿಳಿಸಿದ್ದಾರೆ.
“ಬಿಒಒ ಮಂಗಳವಾರ ಶಾಲೆಗೆ ಭೇಟಿ ನೀಡುತ್ತಿದ್ದಾರೆಂಬ ಮಾಹಿತಿ ಮೇರೆಗೆ ಕಿರುಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವಾತಿಶ್ರೀ ಹಾಗೂ ಸ್ಥಳೀಯರುಗಳಾದ ರಾಮಯ್ಯ, ಮಂಜುನಾಥ್, ಚನ್ನಕೇಶವ ಎಲ್ಲರೂ ಶಾಲೆಗೆ ತೆರಳಿ, ಅಲ್ಲಿ ಕಂಪ್ಯೂಟರ್ ಕೊಠಡಿಯ ಬೀಗ ತೆಗೆಸಿದಾಗ ಹಾಲಿನಪುಡಿ, ಅಕ್ಕಿ, ಬೇಳೆ, ಎಣ್ಣೆ, ಗೋಧಿ ಹಾಗೂ ಶಾಲೆ ಮಕ್ಕಳ ಶೂಗಳು ಪತ್ತೆಯಾಗಿವೆ” ಎಂದು ಹೇಳಿದರು.
“ಶಾಲೆಗೆ ಬರುವ ಆಹಾರ ಪದಾರ್ಥಗಳನ್ನು ಇಲ್ಲಿನ ಶಿಕ್ಷಕಿಯೇ ಕೊಂಡೊಯ್ಯುತ್ತಿದ್ದರು. ಹೆಚ್ಚುವರಿ ಪದಾರ್ಥವನ್ನು ತರಕಾರಿ ಆಟೊದಲ್ಲಿ ಸಾಗಿಸುತ್ತಿದ್ದರೆಂಬ ಮಾಹಿತಿ ಕೂಡ ಬಂದಿತ್ತು. ಆಹಾರ ಪದಾರ್ಥಗಳನ್ನು ಕಂಪ್ಯೂಟರ್ ಕೊಠಡಿಯಿಂದ ಸಾಗಿಸಲು ಸುಲಭವಾಗುತ್ತದೆಂಬ ಕಾರಣಕ್ಕೆ ದಾಸ್ತಾನು ಕೊಠಡಿಯಲ್ಲಿದ್ದ ಆಹಾರ ಪದಾರ್ಥಗಳನ್ನು ಕಂಪ್ಯೂಟರ್ ಕೊಠಡಿಗೆ ವರ್ಗಾಯಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ; 3 ತಿಂಗಳು ಅವಧಿ ವಿಸ್ತರಣೆ
“ಕಿರುಗುಂದ ಶಾಲೆಯ ಕಂಪ್ಯೂಟರ್ ಕೊಠಡಿಯಲ್ಲಿ ಆಹಾರ ಪದಾರ್ಥ ಶೇಖರಿಸಿಟ್ಟಿರುವುದು ಮಂಗಳವಾರ ಕಂಡುಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ತಪ್ಪು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು” ಎಂದು ಬಿಇಒ ಹೇಮಂತಚಂದ್ರ ಮಾಹಿತಿ ನೀಡಿದ್ದಾರೆ.