- ವಿಡಿಯೋ ಕಾನ್ಫರೆನ್ಸ್ ಮೂಲಕ ಚಿಕ್ಕಮಗಳೂರಿನ ಪ್ರವಾಹ ಪರಿಸ್ಥಿತಿ ಕುರಿತು ಸಮಾಲೋಚನೆ
- ಪರಿಹಾರ ಕಾರ್ಯಾಚರಣೆಯನ್ನು ತ್ವರಿತಗತಿಯಲ್ಲಿ ನಡೆಸಲು ಉಸ್ತುವಾರಿ ಸಚಿವರ ನಿರ್ದೇಶನ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಕುರಿತು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ, ಸಕಲ ರೀತಿಯಲ್ಲಿ ಸನ್ನದ್ಧರಾಗುವಂತೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಗುರುವಾರ ತಡರಾತ್ರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದ ಸಚಿವರು, ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ, ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಸಂತ್ರಸ್ತರಿಗೆ ತ್ವರಿತ ಪರಿಹಾರ ಒದಗಿಸುವ ಬಗ್ಗೆ ಸಲಹೆ ನೀಡಿದರು.
“ಜಿಲ್ಲೆಯ ಜನರ ಸುರಕ್ಷತೆಗೆ ಒತ್ತು ನೀಡುವಂತೆ ನಿರ್ದೇಶಿಸಿದ ಸಚಿವರು, ಪ್ರವಾಹದ ನಂತರದ ಪರಿಣಾಮಗಳನ್ನು ನಿರ್ವಹಿಸಲು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಬೇಕು. ಜತೆಗೆ ಪರಿಹಾರ ಕಾರ್ಯಾಚರಣೆಯನ್ನು ತ್ವರಿತಗತಿಯಲ್ಲಿ ನಡೆಸಬೇಕು” ಎಂದರು.
Today I chaired a #VideoConference with the senior officials today to review the #flood situation in #Chikkamagalur. During the video conference, I directed the officials to take all steps to mitigate difficulties faced by the general public, attend to their needs on priority and… pic.twitter.com/vr6CdIHg8E
— KJ George (@thekjgeorge) July 18, 2024
ವಿಡಿಯೋ ಕಾನ್ಫರೆನ್ಸ್ನಲ್ಲಿ ಪಾಲ್ಗೊಂಡ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ ಸಿ.ಎನ್, ಜಿಲ್ಲಾ ಪಂಚಾಯತ್ ಸಿಇಓ ಶ್ರೀಮತಿ ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಆಮ್ಟೆ, ಪ್ರವಾಹದಿಂದ ಉಂಟಾಗಿರುವ ಹಾನಿಯ ಪ್ರಮಾಣ ಮತ್ತು ಪ್ರಸ್ತುತ ನಡೆಯುತ್ತಿರುವ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಸ್ಥಿತಿಯನ್ನು ವಿವರಿಸಿದರು. ಜಿಲ್ಲಾಡಳಿತ, ಪರಿಹಾರ ತಂಡಗಳು ಮತ್ತು ಸ್ವಯಂಸೇವಕರ ಅವಿರತ ಪ್ರಯತ್ನಗಳಿಗೆ ಸಚಿವ ಕೆ.ಜೆ.ಜಾರ್ಜ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಮಂಡ್ಯ | ರೈತ ವಿರೋಧಿ ನೀತಿ ಖಂಡಿಸಿ ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘದಿಂದ ಪ್ರತಿಭಟನೆ
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಘೀ ಪ್ರಕರಣಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವ ಜಾರ್ಜ್, ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು. “ಸರ್ಕಾರದ ಕಡೆಯಿಂದ ಎಲ್ಲ ರೀತಿಯ ಸಹಕಾರ ಒದಗಿಸಲಾಗುವುದು. ಅಧಿಕಾರಿಗಳು ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು” ಎಂದರು.