ಅಂಗನವಾಡಿ ಶೌಚಾಲಯದ ಬೀಗದ ಕೀಲಿ ಎರಡು ವರ್ಷದಿಂದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷನ ಕೈಯಲ್ಲೇ ಉಳಿದಿದ್ದು, ಮಕ್ಕಳಿಗೆ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲದಾಗಿದೆ. ಮಕ್ಕಳು ಶೌಚಾಲಯಕ್ಕೆ ಹೋಗಬೇಕೆಂದರೆ ಆ ಕಾಡಿನ ಮಧ್ಯೆ ಹಾಗೂ ಹಸಿರು ಗಿಡಗಂಟಿ, ಪೊದೆಗಳ ಮಧ್ಯೆ ಹೋಗಬೇಕಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿರುವ ದೊಡ್ಡಮಾಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಬೆಳಗೋಡು ಗ್ರಾಮ. ಈ ಗ್ರಾಮದಲ್ಲಿ ಸುಮಾರು 35ರಿಂದ 40ಕ್ಕೂ ಅಧಿಕ ಕುಟುಂಬಗಳು ವಾಸವಾಗಿವೆ. ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಈ ಬೆಳಗೋಡು ಗ್ರಾಮದಿಂದ 15ಕ್ಕಿಂತ ಹೆಚ್ಚು ಮಕ್ಕಳು ಅಂಗನವಾಡಿಗೆ ಬರುತ್ತಾರೆ.

ಸ್ಥಳೀಯ ನಿವಾಸಿಗಳು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಆ ಜಾಗಗಳಲ್ಲಿ ಹಾವು ಉಪಟಳಗಳು ಹಾಗೂ ಕೀಟಗಳ ಕಾಟ ಎದುರಾಗಿದೆ. ನಾವು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದೇವೆ. ನಮ್ಮ ಮಕ್ಕಳಿಗೆ ಸುರಕ್ಷತೆ ಹಾಗೂ ಅಕ್ಷರಭ್ಯಾಸ ಮಾಡಿಸುತ್ತಾರೆಂದು ಅಂಗನವಾಡಿಗೆ ಕಳುಹಿಸುತ್ತೇವೆ. ಆದರೆ ಇಲ್ಲಿ ಸರಿಯಾದ ಶೌಚಾಲಯದ ವ್ಯವಸ್ಥೆ ಹಾಗೂ ವಿದ್ಯುತ್ ವ್ಯವಸ್ಥೆ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಅಂಗನವಾಡಿ ಶಿಕ್ಷಕಿ ದಾಕ್ಷಾಯಿಣಿ ಈ ದಿನ.ಕಾಮ್ ಜತೆಗೆ ಮಾತನಾಡಿ, “ಅಂಗನವಾಡಿಯಲ್ಲಿ ಸರಿಯಾಗಿ ಕುರ್ಚಿ, ಟೇಬಲ್ ವ್ಯವಸ್ಥೆ ಇಲ್ಲ. ಅಡುಗೆ ಮನೆಯ ಪಕ್ಕದಲ್ಲಿಯೇ ಅರ್ಧಂಬರ್ದ ನಿರ್ಮಿಸಿರುವ ಶೌಚಾಲಯವಿದೆ. ಇದರ ನೀರು ಹಾಗೂ ತೆರೆದಿರುವ ಪಿಟ್ ಗುಂಡಿಯಲ್ಲಿನ ನೀರು ಸೋರಿಕೆಯಿಂದ ದುರ್ವಾಸನೆ ಬೀರುತ್ತದೆ. ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ. ಇಲ್ಲಿನ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಎರಡು ವರ್ಷದಿಂದ ಶೌಚಾಲಯದ ಬೀಗದ ಕೀ ಕೊಡದೆ ಅವರೇ ಇಟ್ಟುಕೊಂಡಿದ್ದಾರೆ” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಲಾಡ್ಜ್‌ನಲ್ಲಿ ಕುಕ್ಕರ್ ಸ್ಫೋಟ; ದೇವಿ ಯಲ್ಲಮ್ಮನ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ಗಾಯ
“ಇತ್ತೀಚಿನ ದಿನಗಳಲ್ಲಿ ಡೆಂಘೀ ಹಾಗೂ ಮಲೇರಿಯಾದಂತಹ ರೋಗಗಳು ಎಲ್ಲೆಡೆ ಹರಡುತ್ತಿವೆ. ರಾಜ್ಯದೆಲ್ಲೆಡೆ ರೋಗಗಳು ಉಲ್ಬಣಗೊಳ್ಳುತ್ತಿವೆ. ಇಂತಹ ಸಮಯದಲ್ಲಿ ಇಲ್ಲಿನ ಅಂಗನವಾಡಿ ಸ್ಥಿತಿ ಹೇಳತೀರದಾಗಿದೆ. ಹಾಗಾಗಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸಂಬಂದಪಟ್ಟ ಅಧಿಕಾರಿಗಳು ಕೂಡಲೇ ಬೆಳಗೋಡು ಅಂಗನವಾಡಿಯತ್ತ ಹರಿಸಬೇಕು. ಸೂಕ್ತ ಕ್ರಮ ಕೈಗೊಂಡು ಅಂಗನವಾಡಿಗೆ ಮತ್ತು ಬೆಳಗೋಡು ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದರು.

ಗಿರಿಜಾ ಎಸ್ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.