ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಬೆಳಗಾವಿಯಲ್ಲಿ ಖಾಯಂ ವಿಳಾಸ ಕುರಿತು ಚರ್ಚೆಯಾಗಿತ್ತು. ಆ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್, ‘ಜಗದೀಶ್ ಶೆಟ್ಟರ್ ಹೊರಗಿನಿಂದ ಬಂದವರು. ಅವರಿಗೆ ಬೆಳಗಾವಿಯಲ್ಲಿ ಖಾಯಂ ವಿಳಾಸ ಇಲ್ಲ’ ಎಂದು ವ್ಯಂಗ್ಯವಾಡಿದ್ದರು.
ಇದಕ್ಕೆ ಉತ್ತರಿಸಿದ್ದ ಜಗದೀಶ್ ಶೆಟ್ಟರ್, “ಬೆಳಗಾವಿ ನನ್ನ ಕರ್ಮ ಭೂಮಿ. ನಾನು ಬೆಳಗಾವಿಯಲ್ಲಿ ಮನೆ ಮಾಡಿದ್ದು ಖಾಯಂ ವಿಳಾಸಕ್ಕಾಗಿ. ಇಲ್ಲಿಯೇ ಇರುವುದಾಗಿ ತಿಳಿಸಿದ್ದರು. ಮತ್ತು ಆ ಸಂದರ್ಭದಲ್ಲಿ ಶೆಟ್ಟರ್ ಅವರು ಬೆಳಗಾವಿ ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿ ಬಾಡಿಗೆ ಮನೆಯೊಂದನ್ನು ಮಾಡಿ, ಅಲ್ಲಿಯೇ ಕುಟುಂಬ ಸಮೇತ ವಾಸವಿದ್ದರು. ಆದರೆ ಲೋಕಸಭಾ ಚುನಾವಣೆಯಲ್ಲಿ ಗೆದ್ದು, ಸಂಸದರಾದ ನಂತರ ಸದ್ದಿಲ್ಲದೆಯೇ ಮನೆ ಖಾಲಿ ಮಾಡಿದ್ದಾರೆ.
ಶೆಟ್ಟರ್ ಇದ್ದ ಮನೆಯನ್ನು ಮಾಲೀಕ ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ. ಈ ಸಂಬಂಧ ಆ ಮನೆಯಲ್ಲಿ ಬಾಡಿಗೆ ಇರುವ ವ್ಯಕ್ತಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಜಗದೀಶ್ ಶೆಟ್ಟರ್ ಅವರ ಈ ನಡೆಗೆ ಬೆಳಗಾವಿ ಜಿಲ್ಲೆಯಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಚುನಾವಣೆಯಲ್ಲಿ ಬಾಡಿಗೆ ಮನೆ ಮಾಡಿ ಗೆದ್ದ ಮೇಲೆ ಮನೆ ಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ ಮಾತನಾಡಿರುವ ಜಗದೀಶ್ ಶೆಟ್ಟರ್, “ಒಂದು ಖಾಯಂ ಮನೆ ನಿರ್ಮಾಣ ಮಾಡುವ ಉದ್ದೇಶದಿಂದ ಸೈಟ್ ನೋಡುತ್ತಿದ್ದೇನೆ. ಆದಷ್ಟು ಬೇಗನೆ ಸೈಟ್ ಖರೀದಿಸಿ, ಮನೆ ಕಟ್ಟುವ ಕೆಲಸ ಆರಂಭಿಸುತ್ತೇನೆ. ಜನರಿಗೆ ಲಭ್ಯವಾಗುವ ನಿಟ್ಟಿನಲ್ಲಿ ವಾರದಲ್ಲಿ ಮೂರ್ನಾಲ್ಕು ದಿನ ಬೆಳಗಾವಿಯಲ್ಲೇ ಇರುವ ಜೊತೆಗೆ ಪ್ರತಿ ತಾಲೂಕಿಗೂ ಭೇಟಿ ನೀಡುವ ಕೆಲಸ ಮಾಡುತ್ತೇನೆ” ಎಂದು ಹೇಳಿಕೆ ನೀಡಿದ್ದಾರೆ.