ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಅರಣ್ಯ ಭೂಮಿ ಒತ್ತುವರಿ ತೆರವು ಕೈಬಿಡುವಂತೆ ಭೂ ಸಾಗುವಳಿ ಹೋರಾಟ ಸಮಿತಿಯಿಂದ ಮಂಗಳವಾರದಂದು ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.
ಕಡವಂತಿ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದಪ್ರತಿಭಟನಾಕಾರರು ಗ್ರಾ.ಪಂ. ಅಧ್ಯಕ್ಷರು, ಪಿಡಿಒ ಮತ್ತು ಮುಖ್ಯಮಂತ್ರಿ ಸಿದ್ದರಾಮ್ಯನವರಿಗೆ ಮನವಿ ಸಲ್ಲಿಸಿದ್ದಾರೆ.
“ಕರ್ನಾಟಕದ ಕಾಂಗ್ರೆಸ್ ಸರ್ಕಾರ ಈಗಾಗಲೇ ಅರಣ್ಯ ಒತ್ತುವರಿ ತೆರವು ಕಾರ್ಯವನ್ನು ಕೈಗೆತ್ತಿಕೊಂಡಿದೆ. ಇದರಿಂದ ಜೀವನೋಪಾಯಕ್ಕಾಗಿ ಸಾಗುವಳಿ ಮಾಡಿಕೊಂಡಿರುವವರ ಬದುಕು ಆತಂತ್ರವಾಗಲಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ, ಕಾರ್ಪೊರೇಟ್ ಕುಟುಂಬಗಳಿಗೆ, ರಾಜಕಾರಣಿಗಳಿಗೆ ನೂರಾರು, ಸಾವಿರಾರು ಎಕರೆ ಭೂಮಿಯನ್ನು ಯಾವುದೇ ಷರತ್ತುಗಳಿಲ್ಲದೆ ಆಳೆದುಕೊಡುವ ಸರ್ಕಾರಗಳು, ಜೀವನೋಪಾಯಕ್ಕಾಗಿ ಸಾಗುವಳಿ ಮಾಡಿಕೊಂಡಿರುವವರನ್ನು, ಅರಣ್ಯ ಡೀಮ್ಸ್, ಸೆಕ್ಷನ್ 4(1) ಇತ್ಯಾದಿ ಹೆಸರಲ್ಲಿ ಸಣ್ಣ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿವೆ” ಎಂದು ಪ್ತಿಭಟನಾಕಾರರು ಆರೋಪಿಸಿದರು.
“ಓಟ್ ಬ್ಯಾಂಕ್‌ಗಾಗಿ ಬಳಸಿಕೊಳ್ಳುವ ರಾಜಕೀಯ ಪಕ್ಷಗಳು ಜನರ ಜೀವನ ಭದ್ರತೆ ವಿಷಯದಲ್ಲಿ ಜಾಣ ಕುರುಡು ಪ್ರದರ್ಶಿಸುತ್ತವೆ. ಅರಣ್ಯ ಕಂದಾಯ ಇಲಾಖೆಗಳ ನಡುವೆ ಭೂಮಿಗೊಂದಲವಿದ್ದು, ಜಂಟಿ ಸರ್ವೆ ನಡೆಸದೆ ಅರಣ್ಯ ಒತ್ತುವರಿ ತೆರವಿಗೆ ಮುಂದಾಗಿದೆ. ನೂರಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಫಾರಂ 53, 57ರ ಆಡಿ ಅರ್ಜಿ ಸಲ್ಲಿಸಿ ಸಾಗುವಳಿ ಪತ್ರಕ್ಕಾಗಿ ಹೋರಾಟ ನಡೆಸುತ್ತಿರುವ ಸಾಗುವಳಿದಾರರಿಗೆ ಸರ್ಕಾರ ಹಕ್ಕುಪತ್ರ ನೀಡದೆ, ಅರಣ್ಯ ತೆರವು ಕಾರ್ಯಕ್ಕೆ ಮುಂದಾಗಿರುವುದು ಅವೈಜ್ಞಾನಿಕವಾಗಿದೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ದೊಡ್ಡ ಮಟ್ಟದ ಹೋರಾಟವನ್ನು ನಡೆಸುತ್ತೇವೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಸೆ.5ರಂದು ಜಿ ಒ ಮಹಂತಪ್ಪನವರಿಗೆ ಶ್ರದ್ಧಾಂಜಲಿ, ನುಡಿನಮನ
ಭೂ ಸಾಗುವಳಿ ಹೋರಾಟ ಸಮಿತಿ ಉಮೇಶ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಜೀವನೋಪಾಯಕ್ಕಾಗಿ ಸಾಗುವಳಿ ಮಾಡಿದವರನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು. ಅರಣ್ಯ ಕಂದಾಯ ಜಂಟಿ ಸರ್ವೆ ನಡೆಸಿ, ಗಡಿ ಗುರುತಿಸಬೇಕು. ಡೀಮ್ಸ್ ಅಥವಾ ಸೆಕ್ಷನ್ 4(1) ಕೈ ಬಿಡಬೇಕು. ನೂರಾರು ವರ್ಷಗಳಿಂದ ಜೀವನೋಪಾಯಕ್ಕಾಗಿ ಸಾಗುವಳಿ ಮಾಡಿಕೊಂಡಿರುವವರಿಗೆ ಕೂಡಲೇ ಸಾಗುವಳಿ ಪತ್ರ ವಿತರಿಸಬೇಕು” ಎಂದು ಆಗ್ರಹಿಸಿದರು.
ಕಡವಂತಿ ಪಂಚಾಯಿತಿ ವ್ಯಾಪ್ತಿಯ ಬೊಗಸೆ, ಬಿಳುಗುಳ, ಕಡವಂತಿ, ಬಾಸಾಪುರ ಗ್ರಾಮದ ಗ್ರಾಮಸ್ಥರು, ಹೋರಾಟ ಸಮಿತಿಯ ಶಿವಣ್ಣ ಗೌಡ, ಶಿವಶಂಕರ ಗೌಡ, ಹಿರಿಯಣ್ಣ ಗೌಡ, ಮಂಜಪ್ಪ ಗೌಡ, ಬಾಸಾಪುರ ಅಣ್ಣಪ್ಪ, ಕೆ ಆರ್ ಅಣ್ಣೇಗೌಡ, ಬಿ ಎನ್ ವಿಶ್ವನಾಥ್, ಬೊಗಸೆ ಪರಮೇಶ್, ಉಮೇಶ್, ಮುಳ್ಳೇಶ್ ಗೌಡ, ಮುಕುಂದ ಶೆಟ್ಟಿ, ವಿನೋದ, ಬಿಳಗೊಳ ವಾಸು, ಬಸಾಪುರದ ಮನೋಜ್ ಸೇರಿದಂತೆ ಇತರರು ಇದ್ದರು.