ಭಾರೀ ಮಳೆಗೆ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಸೇತುವೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಜೀಪಿನಲ್ಲಿ ಹುಚ್ಚಾಟ ಮೆರೆದ ವ್ಯಕ್ತಿಯ ಬಂಧನವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣ ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆಯು ಭದ್ರಾ ನದಿಯ ನೀರಿನಿಂದ ತುಂಬಿದ್ದು, ಸೇತುವೆ ಮೇಲೆ ನೀರು ಹರಿಯುತ್ತಿತ್ತು. ಕಳಸದಿಂದ ಹೊರನಾಡಿಗೆ ಹೋಗುವ ರಸ್ತೆಯು ಸಂಪರ್ಕ ಕಡಿತಗೊಂಡಿತ್ತು.
ಈ ಬಗ್ಗೆ ಮುಂಜಾಗೃತ ಕ್ರಮವಾಗಿ ಹೆಬ್ಬಾಳೆ ಸೇತುವೆಯ ಮೇಲೆ ಸಾರ್ವಜನಿಕರ ಹಾಗೂ ವಾಹನ ಸಂಚಾರವನ್ನು ನಿಷೇಧಿಸಿ ಯಾವುದೇ ಪ್ರಾಣ ಹಾನಿಯಾಗದಂತೆ ತಡೆಗಟ್ಟುವ ಸಲುವಾಗಿ ಕಳಸ ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆಯ ಎರಡೂ ಬದಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪೊಲೀಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕಳಸದಿಂದ ಹೊರನಾಡಿಗೆ ಹೊಗುವ ಮತ್ತು ಹೊರನಾಡಿನಿಂದ ಕಳಸಕ್ಕೆ ಬರುವ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಬದಲಿ ಮಾರ್ಗವನ್ನು ಕಲ್ಪಿಸಲಾಗಿತ್ತು. ಈ ವಿಚಾರವಾಗಿ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು.
ಜುಲೈ 25ರಂದು ಬೆಳಿಗ್ಗೆ ಸುಮಾರು 11ರಿಂದ 11-30ರ ಸಮಯ ಮಧ್ಯದಲ್ಲಿ, KA-18 P7284 ಸಂಖ್ಯೆಯ ಜೀಪ್‌ವೊಂದನ್ನು ಅದರ ಚಾಲಕ ಹೆಬ್ಬಾಳೆ ಸೇತುವೆ ಮೇಲೆ ಮುಂಜಾಗೃತ ಕ್ರಮವಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಸಂಚಾರ ನಿಷೇಧಿಸಿದ್ದರೂ ವಾಹನದ ಚಾಲಕ ಪವನ್ ಕುಮಾರ್ ಎಂಬಾತ ಮುಂಜಾಗೃತ ಕ್ರಮವಾಗಿ ಅಳವಡಿಸಿದ ಬ್ಯಾರಿಕೇಡ್‌ಗಳನ್ನು ತೆಗೆದು ಭದ್ರಾನದಿಯ ನೀರು ಹೆಬ್ಬಾಳೆ ಸೇತುವೆ ಮೇಲೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರೂ ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷ್ಯದಿಂದ ಪ್ರಾಣಕ್ಕೆ ಅಪಾಯವಿದೆಯೆಂದು ಗೊತ್ತಿದ್ದರೂ ವಾಹನ ಚಾಲನೆ ಮಾಡಿದ್ದರಿಂದ ಕಳಸ ಪೊಲೀಸ್ ಠಾಣೆಯಲ್ಲಿ ಕಲಂ 281 ಬಿಎನ್‌ಎಸ್ ಕಾಯಿದೆ ಅಡಿ ಪ್ರಕರಣ ದಾಖಲಿಸಿ ಜೀಪ್ ಸೀಜ಼್ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ; ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ಪೊಲೀಸ್ ಇಲಾಖೆಯವರು ಮುಂಜಾಗೃತ ಕ್ರಮವಾಗಿ ಯಾವುದೇ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ನಿರ್ದೇಶನ ನೀಡಿರುವುದನ್ನು ಸಾರ್ವಜನಿಕರು ಉಲ್ಲಂಘಿಸಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪ್ರತಿಯೊಬ್ಬ ಸಾರ್ವಜನಿಕರೂ ಇಲಾಖೆಯವರು ನೀಡಿರುವ ನಿರ್ದೇಶನಗಳನ್ನು ಪಾಲಿಸುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಕೋರಿದೆ.