ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಸ ಕಲ್ಮಕ್ಕಿ ಗ್ರಾಮದ ನಿವಾಸಿ ಸ್ನೇಕ್ ರಿಜ್ವಾನ್ ಅವರ ಮನೆಯ ಬಳಿ ಅಪರೂಪದ ರಕ್ತಗನ್ನಡಿ ಹಾವು ಕಾಣಿಸಿಕೊಂಡಿದೆ.
ರಕ್ತಗನ್ನಡಿ ಹಾವು ವಿಷಕಾರಿ ಹಾವುಗಳಲ್ಲಿ ಒಂದಾಗಿದ್ದು, ಉರಗ ತಜ್ಞರೊಬ್ಬರ ಮನೆಯಂಗಳದಲ್ಲಿ, ಹಾವನ್ನು ನೋಡಿದ ಅವರ ಪತ್ನಿ ಪತಿಗೆ ತಿಳಿಸಿದ್ದಾರೆ. ಇದನ್ನು ಗಮನಿಸಿದ ರಿಜ್ವಾನ್ ಹಾವನ್ನು ಜೋಪಾನವಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ರಿಜ್ವಾನ್, “ಇದು ಅಪರೂಪದ ಮತ್ತು ವಿಷಕಾರಿ ಹಾವುಗಳಲ್ಲಿ ಒಂದಾದ ಕೋರಲ್ ಸ್ನೇಕ್, ಹವಳದ ಹಾವು ಎಂದು ಗುರುತಿಸಿಕೊಂಡಿದೆ. ಮಲೆನಾಡಲ್ಲಿ ಹಪ್ಪಟೆ ಹಾವು ಹಾಗೂ ರಕ್ತಗನ್ನಡಿ ಹಾವು ಎಂದೇ ಪ್ರಚಲಿತದಲ್ಲಿದೆ” ಎಂದು ತಿಳಿಸಿದರು.
“ರಕ್ತಗನ್ನಡಿ ಹಾವು ಅತ್ಯಂತ ವಿಷಕಾರಿ. ಆದರೆ ಈ ಹಾವು ಕಚ್ಚಿ ಸತ್ತವರ ಪ್ರಕರಣ ಕಡಿಮೆ. ಇದರ ಹಲ್ಲುಗಳು ಮುಂಭಾಗದಲ್ಲಿ ತುಸು ಹೆಚ್ಚೇ ಬಾಗಿರುವ ಕಾರಣ ಇದು ಕಚ್ಚುವ ಸಂದರ್ಭದಲ್ಲಿ ವಿಷ ದೇಹಕ್ಕೆ ಸೇರುವುದು ಕಡಿಮೆ. ಪಶ್ಚಿಮಘಟ್ಟದಲ್ಲಿ ಈ ಹಾವು ಕಂಡು ಬರುತ್ತವೆ. ವಿಶೇಷವೆಂದರೆ ಹಾವಿನ ಕೆಳಭಾಗ ಕೆಂಪು ಬಣ್ಣದಲ್ಲಿದ್ದು ಗಮನ ಸೆಳೆಯುತ್ತವೆ” ಎಂದು ಸ್ನೇಕ್ ರಿಜ್ವಾನ್ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಪುರಸಭೆ ಅಧಿಕಾರಿಗಳ ಏಕಾಏಕಿ ದಾಳಿ; ಪ್ಲಾಸ್ಟಿಕ್ ಬಳಸುತ್ತಿದ್ದ ಅಂಗಡಿ ಮಾಲೀಕರಿಗೆ ದಂಡ
ಸ್ನೇಕ್ ರಿಜ್ವಾನ್ ಅವರು ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿದ್ದಾರೆ ಇವರು ಎಲ್ಲ ತರಹದ ಹಾವುಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹೆಬ್ಬಾವು, ಕಾಳಿಂಗ ಸರ್ಪ, ನಾಗರಹಾವು, ಕನ್ನಡಿಯ ಹಾವು ಸೇರಿದಂತೆ ಇನ್ನೂ ಇತರ ಹಾವುಗಳನ್ನು ಹಿಡಿದು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಕಾಡಿಗೆ ಬಿಟ್ಟಿದ್ದಾರೆ.
