ಆರೋಗ್ಯ ಸಮಸ್ಯೆಯಿಂದ ತೀವ್ರ ಅಸ್ವಸ್ಥರಾಗಿದ್ದ ವೃದ್ಧೆ ಶೇಷಮ್ಮ(70) ಎಂಬುವವರನ್ನು ಆಸ್ಪತ್ರೆಗೆ ಸೇರಿಸಲು ಜೋಳಿಗೆಯಲ್ಲಿ ಹೊತ್ತು ತಂದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸಾ ತಾಲೂಕಿನ ಸಂಸೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಈಚಲಹೊಳೆ ಗಿರಿಜನ ಕಾಲೋನಿಯಲ್ಲಿ ಸಮರ್ಪಕ ರಸ್ತೆ ಇಲ್ಲದೆ ಸ್ಥಳೀಯ ನಿವಾಸಿಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಮುಖ್ಯರಸ್ತೆಗೆ ಬರಲು ಸಮರ್ಪಕ ರಸ್ತೆ ಇಲ್ಲದ ಕಾರಣ ವಯಸ್ಸಾದವರನ್ನು ಆಸ್ಪತ್ರೆಗೆ ಕರೆತರಲು ಜೋಳಿಗೆಯಲ್ಲಿ ಹೊತ್ತು ತರುವ ಪರಿಸ್ಥಿತಿ ಎದುರಾಗಿದೆ.
ಈಚಲಹೊಳೆ ಗಿರಿಜನ ಕಾಲೋನಿಯಲ್ಲಿ 10 ರಿಂದ 12 ಕುಟುಂಬಗಳು ವಾಸವಿದ್ದು, ಅಲ್ಲಿನ ಜನರು ವೃದ್ದೆಯನ್ನು ಜೋಳಿಗೆಯಲ್ಲಿ ಹೊತ್ತು ತಂದು ಕಳಸ ಆಸ್ಪತ್ರೆಗೆ ಸೇರಿಸಿದ್ದಾರೆ.
ಗಿರಿಜನ ಕುಟುಂಬಗಳು ವಾಸವಾಗಿರುವ ಈಚಲಹೊಳೆ ಕಾಲೋನಿ ಕಳಕೋಡದಿಂದ 3 ಕಿಮೀ ದೂರದಲ್ಲಿದೆ. ಈ ಕಾಲೋನಿಗೆ ಈಗಲೂ ರಸ್ತೆ ಸಂಪರ್ಕವಿಲ್ಲ. ಗಿರಿಜನರು ಅನಾರೋಗ್ಯದಂತಹ ಸ್ಥಿತಿಯಲ್ಲಿ ರೋಗಿಗಳನ್ನು ಕಳಕೋಡವರೆಗೂ ಜೋಳಿಗೆಯಲ್ಲೇ ಹೊತ್ತು ತರಬೇಕಾದ ಪರಿಸ್ಥಿದೆ ಇದೆ.
ಗಿರಿಜನ ಕಾಲೋನಿ ನಿವಾಸಿಗಳು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕಳಕೋಡದಿಂದ ಈಚಲಹೊಳೆಗೆ ಸಂಪರ್ಕ ರಸ್ತೆ ಕಲ್ಪಿಸಬೇಕೆಂಬ ಗಿರಿಜನರ ಬೇಡಿಕೆ ದಶಕಗಳಿಂದ ಅರಣ್ಯರೋಧನ ಆಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನದ ನಡುವೆ ಪ್ರಸ್ತಾಪಿತ ರಸ್ತೆಯ ಅರ್ಧ ಕಿಮೀ ಹಾದು ಹೋಗುವುದರಿಂದ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯವರು ತಡೆ ಒಡ್ಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ‘ಡಿಸಿ ಮನ್ನಾ ಭೂಮಿ’ಯಲ್ಲಿ ಅಕ್ರಮ ಕಟ್ಟಡ ತೆರವಿಗೆ ದಸಂಸ ಆಗ್ರಹ
“ನ್ಯಾಷನಲ್ ಪಾರ್ಕ್ ಹೆಸರಿನಲ್ಲಿ ನಮಗೆ ಅರಣ್ಯ ಇಲಾಖೆಯವರು ಕಿರುಕುಳ ಕೊಡುತ್ತಿದ್ದಾರೆ. ನಮಗೆ ಈವರೆಗೆ ಯಾವುದೇ ಮೂಲಭೂತ ಸೌಕರ್ಯವೂ ದೊರೆತಿಲ್ಲ. ಹಿಂದಿನ ಶಾಸಕರಿಗೆ ಮನವಿ ಕೊಟ್ಟಿದ್ದೆವು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ಇಂದಿನ ಸ್ಥಿತಿ ನೋಡಿ ಈಗಿನ ಶಾಸಕರಾದರೂ ರಸ್ತೆ ಮಾಡಿಸಿಕೊಡಬೇಕು. ಆದಷ್ಟು ಬೇಗ ಇಲ್ಲಿನ ಸಮಸ್ಯೆ ಬಗೆಹರಿಸಬೇಕು” ಎಂದು ಸ್ಥಳೀಯ ಗಿರಿಜನರು ಒತ್ತಾಯಿಸಿದ್ದಾರೆ.