ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ ಮೀರಿ ಹೋಗಿದೆ. ಚಿಕ್ಕಮಗಳೂರು ತಾಲೂಕಿನ ಐದಳ್ಳಿ ಗ್ರಾಮದಲ್ಲಿ ಒಂಟಿ ಆನೆಯೊಂದು ಪದೇ ಪದೇ ಉಪಟಳ ನೀಡುತ್ತಿದ್ದು ಫಸಲಿಗೆ ಬಂದ ಅಡಿಕೆ, ಕಾಫಿ, ತೆಂಗಿನ ಮರ ಬಾಳೆ ಗಿಡಗಳನ್ನು ಮುರಿದು ಹಾಕುತ್ತಿದೆ.
ಚಿಕ್ಕಮಗಳೂರು ತಾಲೂಕು ಆವತಿ ಹೋಬಳಿ ಐದಳ್ಳಿ ಗ್ರಾಮದಲ್ಲಿ ಅರುಣ್ ಕುಮಾರ್, ಮಂಜುನಾಥ್, ಲೋಕೇಶ್, ರುದ್ರೇಗೌಡ ಇವರ ತೋಟದಲ್ಲಿ ಬಾಳೆ, ತೆಂಗು, ಅಡಿಕೆ, ಕಾಫಿ ಬೆಳೆ ನಾಶ ಮಾಡಿದೆ.
ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಹಲವು ತಿಂಗಳುಗಳಿಂದ ಓಡಾಟ ನಡೆಸುತ್ತಿರುವ ಈ ಆನೆಯ ಉಪಟಳಕ್ಕೆ ಜನ ಬೇಸತ್ತು ಹೋಗಿದ್ದಾರೆ. ಮಲೆನಾಡು ಭಾಗದ ಗದ್ದೆಗಳಲ್ಲಿ ಭತ್ತದ ನಾಟಿ ಕಾರ್ಯವು ಆರಂಭಗೊಂಡಿದ್ದು ಈ ರೀತಿ ಆನೆಗಳು ಉಪಟಳ ನೀಡುತ್ತಿರುವುದರಿಂದ ಕಾರ್ಮಿಕರು ಕೃಷಿ ಚಟುವಟಿಕೆಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ, ಆಲ್ದೂರು ಅರಣ್ಯ ವ್ಯಾಪ್ತಿಯಲ್ಲಿನ ಹಲವು ಗ್ರಾಮಗಳಲ್ಲಿ ಆನೆಗಳು ಬೆಳೆ ಹಾನಿ ಮಾಡುತ್ತಿದೆ.
ಈ ಕಾಡಾನೆಗಳು ಇತ್ತೀಚಿಗೆ ಐದಳ್ಳಿ ಗ್ರಾಮದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಪ್ರತೀ ದಿನ ಒಬ್ಬೊಬ್ಬರ ಮನೆಯ ತೋಟಕ್ಕೆ ರಾತ್ರಿಯ ವೇಳೆ ದಾಳಿ ಮಾಡುತ್ತಿದೆ. ಅಲ್ಲದೇ, ಬಾಳೆ, ತೆಂಗು, ಅಡಿಕೆ, ಕಾಫಿ ಸೇರಿದಂತೆ ರೈತರು ಬೆಳೆದಿರುವ ಬೆಳೆಗಳನ್ನು ನಾಶ ಮಾಡಿದೆ.
ಈ ಬಗ್ಗೆ ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡಿರುವ ಯುವ ರೈತ ಸನ್ಮಿತ್ ಐದಳ್ಳಿ, “ನಮ್ಮ ಐದಳ್ಳಿ ಗ್ರಾಮದಲ್ಲಿ ನಿರಂತರವಾಗಿ ಕಾಡಾನೆಗಳು ದಾಳಿ ಮಾಡುತ್ತಿದೆ. ರಾತ್ರಿ ವೇಳೆಯಲ್ಲೇ ದಾಳಿ ಮಾಡುತ್ತಿದೆ. ಈ ಬಗ್ಗೆ ಆಲ್ದೂರು ಭಾಗದಲ್ಲಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದ್ರೆ, ಬೆಳಗ್ಗೆ ಅಧಿಕಾರಿಗಳನ್ನು ಕಳುಹಿಸ್ತೀವಿ ಅಂತ ತಿಳಿಸ್ತಾರೆ. ರಾತ್ರಿ ಎಲ್ಲ ಆನೆಗಳು ದಾಳಿ ಮಾಡಿ, ಬೆಳೆಗಳನ್ನೆಲ್ಲ ನಾಶ ಮಾಡಿ ಹೋದ ನಂತರ ಕಳುಹಿಸಿ ಏನು ಪ್ರಯೋಜನ?” ಎಂದು ಆಕ್ರೋಶ ಹೊರಹಾಕಿದ್ದಾರೆ.

“ರಾತ್ರಿ ವೇಳೆ ಕಳುಹಿಸಿದರೆ ಆನೆಯನ್ನು ಓಡಿಸಬಹುದು. ರಾತ್ರಿಯೇ ಅಧಿಕಾರಿಗಳು ಬರ್ತಾರೆ ಅಂತ ರಸ್ತೆಯಲ್ಲಿ ಕಾದರೂ ಕೂಡ ಬರುವುದಿಲ್ಲ. ರಾತ್ರಿ ಫೋನ್ ಮಾಡಿದಾಗ ಬನ್ನೂರು ಗ್ರಾಮದಲ್ಲಿ ಕೂಡ ಆನೆ ಬಂದಿದೆ. ಅಲ್ಲಿಗೆ ಅಧಿಕಾರಿಗಳು ಹೋಗಿದ್ದಾರೆ ಅಂತ ತಿಳಿಸ್ತಾರೆ. ಹಾಗಾದ್ರೆ, ಐದಳ್ಳಿಯಲ್ಲಿರುವ ರೈತರು ಏನು ಮಾಡಬೇಕು? ಕಾಡಾನೆಗಳು ಬಹಳ ದಿನದಿಂದ ದಾಳಿ ಮಾಡ್ತಾ ಇದೆ ಎಂದು ತಿಳಿಸಿದ್ದರೂ ಕೂಡ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನ ವಹಿಸುತ್ತಿಲ್ಲ. ಇದೇ ರೀತಿಯಾದಲ್ಲಿ ಗ್ರಾಮಸ್ಥರೆಲ್ಲ ಸೇರಿ ಪ್ರತಿಭಟನೆ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಡಾನೆಗಳ ದಾಳಿಯಿಂದ ಬೇಸತ್ತು ಮಾತನಾಡಿರುವ ಮದನ್ ಐದಳ್ಳಿಯವರು, “ಕಳೆದ ಮೂರು ನಾಲ್ಕು ವರ್ಷಗಳಿಂದ ನಮ್ಮ ಗ್ರಾಮದಲ್ಲಿ ಕಾಡಾನೆಗಳ ದಾಳಿ ವಿಪರೀತಗೊಂಡಿದೆ. ಅರಣ್ಯ ಇಲಾಖೆಯವರು ಏನೂ ಕ್ರಮ ಕೈಗೊಳ್ಳುತ್ತಿಲ್ಲ. ನಾವು ಹೇಳೋದೇ ಆಯ್ತು, ಅವರು ಕೇಳೋದೇ ಆಯ್ತು. ದೂರು ಕೊಟ್ಟಾಗ ಬರ್ತಾರೆ, ಫೋಟೋ ತೆಗೀತಾರೆ, ಬೆಳೆ ನಾಶಕ್ಕೆ ಪರಿಹಾರ ಕೊಡ್ತೀವಿ ಅಂತಾರೆ. ಈವರೆಗೆ ಕಾಡಾನೆ ದಾಳಿಗೂ ಶಾಶ್ವತ ಪರಿಹಾರ ಕೊಟ್ಟಿಲ್ಲ, ಬೆಳೆ ನಾಶಕ್ಕೂ ಪರಿಹಾರ ಕೊಟ್ಟಿಲ್ಲ. ಕೇವಲ ಭರವಸೆಯಲ್ಲೇ ಕಾಲ ಕಳೆಯುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
“ಐದಳ್ಳಿ ಸೇರಿದಂತೆ ಸುತ್ತಮುತ್ತಲಿನ ಕೆಲವು ಗ್ರಾಮಗಳ ರೈತರ ಎಲ್ಲ ಬೆಳೆಗಳು ಸರ್ವನಾಶ ಆಗಿದೆ. ಕಾಡಾನೆಗಳ ದಾಳಿ ಇದೇ ರೀತಿ ಮುಂದುವರಿದರೆ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಯಾರ ತೋಟವೂ ಉಳಿಯುವುದಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳು ರಾತ್ರಿ ಊಟ ಮಾಡಿ, ಅಚ್ಚುಕಟ್ಟಾಗಿ ಮಲಗಿರ್ತಾರೆ. ಕೇವಲ ಎರಡು ಇಟಿಎಫ್ ತಂಡ ಮಾಡಿಕೊಂಡು ಸುಮ್ಮನಿದ್ದಾರೆ. ಈ ಸಮಸ್ಯೆ ಬೆಳೆಯುವುದಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳೂ ಕೂಡ ಕಾರಣ. ರಾತ್ರಿ ವೇಳೆ ಸಮಸ್ಯೆಯಾದಾಗ ನಮಗೂ ಕೂಡ ಸ್ಪಂದಿಸಬಹುದಲ್ಲವೇ?ಬೇರೆಯವರಂತೆ ನಾವೂ ಕೂಡ ರೈತರಲ್ಲವೇ? ” ಎಂದು ಅರಣ್ಯ ಇಲಾಖೆಯನ್ನು ರೈತ ಮದನ್ ತರಾಟೆಗೆ ತೆಗೆದುಕೊಂಡಿದ್ದಾರೆ.

“ಜನರ ತೆರಿಗೆಯನ್ನು ಬಳಸಿಕೊಳ್ಳುವ ಅರಣ್ಯ ಇಲಾಖೆಯ ಅಧಿಕಾರಿಗಳು ಐದಳ್ಳಿ ಗ್ರಾಮದ ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ರಾತ್ರಿ ವೇಳೆ ಫೋನ್ ಮಾಡಿ, ಅಲರ್ಟ್ ಸಂದೇಶ ಕಳುಹಿಸಿದರೂ ಸರಿಯಾದ ಸ್ಪಂದನೆ ಕೂಡ ನೀಡುತ್ತಿಲ್ಲ. ಕಾಡಾನೆಗಳ ದಾಳಿಯಿಂದ ನಾವು ಕಷ್ಟಪಟ್ಟು ಬೆಳೆಸಿದ ಬೆಳೆಗಳೆಲ್ಲ ನಾಶವಾಗುತ್ತಿದೆ. ಈವರೆಗೆ ಯಾವ ಪರಿಹಾರವೂ ದಕ್ಕಿಲ್ಲ. ಇದು ಇದೇ ರೀತಿ ಮುಂದುವರಿದಲ್ಲಿ ಎಲ್ಲ ರೈತರು ಸೇರಿಕೊಂಡು ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ
ಈ ಸಮಸ್ಯೆಯ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಫೋನ್ ಮಾಡಿದ್ರೆ ಸಿಬ್ಬಂದಿಗಳು ಬೇರೆ ಕಡೆ ಹೋಗಿದ್ದಾರೆ ಅನ್ನುತ್ತಾರೆ. ಬೆಳೆ ಹಾನಿ ಜೊತೆಗೆ ಮನೆಯಿಂದ ಹೊರಗೆ ಬರುವುದೇ ಕಷ್ಟ ಅನ್ನೋ ಪರಿಸ್ಥಿತಿ ಎದುರಾಗಿದೆ . ಎಲ್ಲಾ ಬೆಳೆಗಳು ನಾಶ ಆದರೆ ರೈತರು ಜೀವನ ಮಾಡುವುದು ಹೇಗೆ? ಶಾಸಕರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ದಯವಿಟ್ಟು ಗಮನಹರಿಸಬೇಕು. ಆನೆ ಹಾವಳಿಯಿಂದ ಶಾಶ್ವತ ಪರಿಹಾರ ನೀಡಬೇಕೆಂದು ಐದಳ್ಳಿ ಗ್ರಾಮದ ರೈತರು ಈದಿನ ಡಾಟ್ ಕಾಮ್ ಮೂಲಕ ಸರ್ಕಾರವನ್ನು ಆಗ್ರಹಿಸಿದ್ದಾರೆ.
