ಹುಳಿಯಾರು ಮತ್ತು ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ ಡಾ. ಬಿ.ಆರ್.ಅಂಬೇಡ್ಕರ್’ರವರ 69’ನೇ ಪರಿನಿರ್ವಾಣ ದಿನವನ್ನು, ಚಿ ನಾ ಹಳ್ಳಿ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್’ರವರ ನೇತೃತ್ವದಲ್ಲಿ ಆಚರಿಸಲಾಯಿತು.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಸಿ ಡಿ ಚಂದ್ರಶೇಖರ್, ದೇಶದ ದೀನ-ದಲಿತರ ಏಳ್ಗೆಯಲ್ಲಿ ಯುಗ-ಪ್ರವರ್ತಕ ಚೈತನ್ಯವನ್ನು ಮೂಡಿಸಿದ ಡಾ ಅಂಬೇಡ್ಕರ್’ರವರು ದೇಶಕಂಡ ಮಹಾನ್ ಚೇತನ. ಅಂಥ ಚೇತನ ಮಹಾ-ಪರಿನಿರ್ವಾಣವಾಗಿ ಈಗ್ಗೆ 69 ವರ್ಷಗಳು ಸಂದಿವೆ. ಇಂಥ ಮಹಾನ್ ಪುರುಷರು ನಮಗೆ ನೀಡಿಹೋದ ಅತ್ಯಮೂಲ್ಯ ಸಂವಿಧಾನ ಎಂದೆಂದೂ ನಮ್ಮ ಪಾಲಿನ ‘ಸತ್ಯಮೇವ ಜಯತೇ’ಯಾಗಿ ನಮ್ಮನ್ನು ಸದಾ ರಕ್ಷಿಸುತ್ತಿದೆ. ಇದನ್ನು ನಾವು ಜೋಪಾನವಾಗಿ ಕಾಪಾಡಿಕೊಂಡು ನಮ್ಮ ಮುಂದಿನ ಪೀಳಿಗೆಗೂ ದಾಟಿಸಬೇಕು. ಇಲ್ಲದಿದ್ದರೆ, ಮತ್ತದೇ ತಾರತಮ್ಯ ಮತ್ತು ಅಸಮಾನತೆಯಿಂದ ಕೂಡಿದ ಪುರೋಹಿತಶಾಹಿ ಶೋಷಣೆಗೆ ಮತ್ತೆ ನಾವೇ ಹೋಗಿ ಕೊರಳೊಡ್ಡಿದಂತಾಗುತ್ತದೆ. ಈ ಎಚ್ಚರ ನಮ್ಮ ಯುವಕರೆಲ್ಲರಿಗೂ ಬರಲಿ ಎಂದು ಅವರು ಯುವಜನಾಂಗಕ್ಕೆ ಕರೆ ಕೊಟ್ಟರು.

ತಾರತಮ್ಯ, ಅಸಮಾನತೆ, ಅಸಹಿಷ್ಣುತೆ, ಅವಮಾನ, ಮೇಲು-ಕೀಳು ಹಾಗೂ ಭಿನ್ನಬೇಧಗಳ ಮೂಲಕ ಶತಶತಮಾನಗಳ ಕಾಲ ದೀನ-ದಲಿತರನ್ನು ನಿರಂತರವಾಗಿ ಶೋಷಿಸಿಕೊಂಡು ಬರುತ್ತಿದ್ದ ಧರ್ಮದಲ್ಲಿ ನಾನು ಸಾಯಲು ಎಂದೂ ಇಷ್ಟಪಡುವುದಿಲ್ಲ…. ಎಂದು ವಚನ ನೀಡಿದ್ದ ಬಾಬಾ ಸಾಹೇಬರು, ತಾವು ನುಡಿದಂತೆಯೇ ನಡೆದುಕೊಂಡು ಬುದ್ಧಗುರುವಿನಲ್ಲಿ ಮಹಾ-ಪರಿನಿರ್ವಾಣಗೊಂಡವರು. ಇದು ನುಡಿದಂತೆ ನಡೆದುಕೊಳ್ಳುವ ನಮ್ಮ ಆದಿಮ ಪರಂಪರೆಯ ದ್ಯೋತಕ ಎಂದು ಅವರು ಶ್ಲಾಘಿಸಿದರು.
ಸಂವಿಧಾನ ಮತ್ತು ಬಾಬಾ ಸಾಹೇಬರ ಮಕ್ಕಳು ನಾವು :
ಸಂವಿಧಾನ ಬದಲಾಯಿಸುತ್ತೇವೆ ಎಂದು ಯಾರು ದಿನಾಬೆಳಗ್ಗೆದ್ದು ಹೇಳಿಕೆ ನೀಡುತ್ತಿದ್ದಾರೋ, ಅವರೆಲ್ಲರೂ ಇಂದು ಮಹಾರಾಷ್ಟ್ರದ ಮಣ್ಣ ಕಣಕಣದಲ್ಲೂ ಲೀನವಾಗಿರುವ ಚೈತ್ಯಭೂಮಿಯತ್ತ ಹೊರಳಿ ನೋಡಿ ತಲೆ-ತಗ್ಗಿಸುವಂತಾಗಿದೆ. ಸಂವಿಧಾನವನ್ನು ಬದಲಿ ಮಾಡಲು ಲಜ್ಜೆಗೆಟ್ಟು ಯತ್ನಿಸುತ್ತಿರುವವರಿಗೆ, ಸಂವಿಧಾನದಲ್ಲೇ ಅಡಕವಾಗಿರುವ ಅಗಾಧ ಶಕ್ತಿಚೈತನ್ಯದಿಂದಲೇ ನಿತ್ಯ ಸೋಲಾಗುತ್ತಿದೆ. ಇವೆಲ್ಲಕ್ಕೂ ಸಾಕ್ಷಿಯಾಗುತ್ತಿರುವ ನಮ್ಮಂಥ ಸಹಸ್ರಾರು ಮಂದಿ ‘ಸಂವಿಧಾನದ ಮಕ್ಕಳು’ ಸಂವಿಧಾನದ ಚೌಕಿದಾರಿಕೆಗೆ ಸದಾ ಕಟಿಬದ್ಧರಾಗಿ ನಿಂತಿದ್ದೇವೆ. ನುಡಿದಂತೆ ನಡೆದು ಮಹಾ-ಪರಿನಿರ್ವಾಣಗೊಂಡ ಬಾಬಾ ಸಾಹೇಬರ ಮಕ್ಕಳು ನಾವು ಎಂಬ ಹೆಮ್ಮೆಯಿದೆ ನಮಗೆ ಮತ್ತು ನಾವದನ್ನು ಸಾರ್ಥಕಗೊಳಿಸಿಯೇ ತೀರುತ್ತೇವೆ ಎಂದು ಬೇವಿನಹಳ್ಳಿ ಚನ್ನಬಸವಯ್ಯರು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಲಕಪ್ಪ, ರಾಷ್ಟ್ರೀಯ ಸೇವಾದಳದ ಅಧ್ಯಕ್ಷ ಗೋವಿಂದರಾಜು, ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಕಾಂಗ್ರೆಸ್ ಮೀನುಗಾರ ಕೋಶದ ಅಧ್ಯಕ್ಷ ರಂಗನಾಥ್, ಬಗರ್ ಹುಕುಂ ಸಮಿತಿ ಸದಸ್ಯ ಬೇವಿನಹಳ್ಳಿ ಚನ್ನಬಸವಯ್ಯ, ಪುರಸಭೆ ಸದಸ್ಯ ಸಿ.ಜಿ.ಚಂದ್ರಶೇಖರ್, ಕೆಂಪಮ್ಮ, ಓಬಿಸಿ ಘಟಕದ ಅಧ್ಯಕ್ಷ ಗೋಡೆಕೆರೆ ಸುರೇಶ್ ಮತ್ತು ಲಿಂಗದೇವರು, ರಾಷ್ಟ್ರೀಯ ಸೇವಾದಳದ ಪ್ರಸನ್ನಕುಮಾರ್, ಹೊನ್ನೇಬಾಗಿ ಜಾಫರ್, ಬೆನಕನಕಟ್ಟೆ ರಮೇಶ್, ಕಂಟ್ಲಗೆರೆ ರಂಗನಾಥ್ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ – ಸಂಚಲನ
ಚಿಕ್ಕನಾಯಕನ ಸೀಮೆಯಿಂದ
