ದೇವಸ್ಥಾನದ ವಿಗ್ರಹಗಳಿಗೆ ಕೋಳಿ ಮೊಟ್ಟೆ ಹೊಡೆದು ಅಪವಿತ್ರಗೊಳಿಸಿ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡುತ್ತಿದ್ದ ಅರೋಪಿಯೋರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ.
ಬಂಧಿತ ಯುವಕನನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ಕುರುಬರಹಳ್ಳಿ ಕಾಡೇನಹಳ್ಳಿಯ ನಿವಾಸಿ ಮಂಜುನಾಥ (29 ವರ್ಷ) ಎಂದು ಗುರುತಿಸಲಾಗಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿಯ ಗೋಡೇಕೆರೆ ಗ್ರಾಮದ ಶ್ರೀ ಸಿದ್ದರಾಮೇಶ್ವರ ದೇವಸ್ಥಾನ ಗರ್ಭಗುಡಿಯ ಪಕ್ಕದ ಬಲಭಾಗದ ವೀರಭದ್ರೇಶ್ವರ ವಿಗ್ರಹ ಮತ್ತು ಎಡಭಾಗದ ಗದ್ದುಗೆಯ ಲಿಂಗಕ್ಕೆ ಹಾಗೂ ಭಾವನಹಳ್ಳಿ ಶ್ರೀ ನಿರ್ವಾಣಸ್ವಾಮಿ ದೇವಸ್ಥಾನ, ದಬ್ಬೇಘಟ್ಟ ಗ್ರಾಮದ ಶ್ರೀ ಮರುಳ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ವಿಗ್ರಹಗಳಿಗೆ ಕೋಳಿ ಮೊಟ್ಟೆ ಹೊಡೆದು ಅಪವಿತ್ರಗೊಳಿಸಿದ ಘಟನೆ ನಡೆದಿತ್ತು. ಈ ಬಗ್ಗೆ ದೇವಸ್ಥಾನದ ಭಕ್ತರು, ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಈ ಕೇಸಿನ ಆರೋಪಿಯನ್ನು ಪತ್ತೆ ಮಾಡಲು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ, ಅಪರ ಪೊಲೀಸ್ ಅಧೀಕ್ಷಕ ವಿ ಮರಿಯಪ್ಪ, ಅಬ್ದುಲ್ ಖಾದರ್ ಅವರ ಮಾರ್ಗದರ್ಶನದಲ್ಲಿ ತಿಪಟೂರು ಉಪವಿಭಾಗದ ಡಿ.ಎಸ್.ಪಿ. ನೇತೃತ್ವದಲ್ಲಿ ಚಿಕ್ಕನಾಯಕನಹಳ್ಳಿ ವೃತ್ತದ ವೃತ್ತ ನಿರೀಕ್ಷಕ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ಪಿ.ಎಸ್.ಐ.. ಹುಳಿಯಾರು ಪೊಲೀಸ್ ಠಾಣಾ ಪಿ.ಎಸ್.ಐ ಮತ್ತು ಸಿಬ್ಬಂದಿಯ ತಂಡ ರಚಿಸಿದ್ದರು.
ಇದನ್ನು ಓದಿದ್ದೀರಾ? ಉಡುಪಿ | ಮುಗಿಯದ ಇಂದ್ರಾಳಿ ರೈಲ್ವೆ ಸೇತುವೆ ರಸ್ತೆ ಸಮಸ್ಯೆ; ಪ್ರತಿಭಟನೆಗೆ ಮುಂದಾದ ನಾಗರಿಕರು
ಅ.21ರಂದು ಆರೋಪಿ ಮಂಜುನಾಥನನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಕಡೆ ದೇವಸ್ಥಾನಗಳಲ್ಲಿ ದೇವಸ್ಥಾನಗಳ ವಿಗ್ರಹಗಳಿಗೆ ಕೋಳಿ ಮೊಟ್ಟೆ ಹೊಡೆದು ಅಪವಿತ್ರಗೊಳಿಸಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
