ಚೌತಿ ಹಬ್ಬದ ದಿನದಂದೇ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಅಪಘಾತ ಸಂಭವಿಸಿ, ಇಬ್ಬರು ಯುವಕರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಗಣೇಶ ಮೂರ್ತಿ ತರಲು ಹೋಗುತ್ತಿದ್ದ ವೇಳೆ ಟಾಟಾ ಏಸ್ ಪಲ್ಟಿಯಾಗಿ ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ಈ ಅಪಘಾತ ಸಂಭವಿಸಿದೆ. ಇದರಿಂದಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟ ಯುವಕರನ್ನು ಶ್ರೀಧರ್ (20) ಹಾಗೂ ಧನುಷ್ (20) ಎಂದು ಗುರುತಿಸಲಾಗಿದೆ.

ಗಣಪತಿ ತರಲು 8 ಜನ ಯುವಕರು ಹೋಗುತ್ತಿದ್ದರು. ಭೈರಾಪುರ ಗೇಟ್ ಬಳಿ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಪಲ್ಟಿಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇಬ್ಬರು ಯುವಕರ ತಲೆಗೆ ಗಂಭೀರ ಗಾಯವಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಯುವಕರನ್ನು ತರೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಹಾಗೂ ಗಾಯಾಳುಗಳೆಲ್ಲರೂ ಲಿಂಗದಹಳ್ಳಿ ನಿವಾಸಿಗಳು ಎಂದು ತಿಳಿದು ಬಂದಿದೆ. ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನು ಓದಿದ್ದೀರಾ? ಹರಿಯಾಣ ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ಗೆ ಸೇರಿದ ದಿನವೇ ವಿನೇಶ್ ಫೋಗಟ್‌ಗೆ ಟಿಕೆಟ್
ಘಟನೆಯ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ವಾಹನದ ಮಾಲೀಕ ಪ್ರದೀಪ್, “ಲಿಂಗದಹಳ್ಳಿಯ ಪರಿಚಯದ ಕೆಲವು ಯುವಕರು ಗಣೇಶ ಮೂರ್ತಿ ತರಲು ವಾಹನ ಬೇಕೆಂದು ರಾತ್ರಿ ಕರೆ ಮಾಡಿದ್ದರು.ಡೀಸೆಲ್ ಇಲ್ಲ, ಮನೆಗೆ ಬಂದು ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದೆ. ಬೆಳಗ್ಗೆ ಬಂದು ತೆಗೆದುಕೊಂಡು, ಡೀಸೆಲ್ ಹಾಕಿಸಿ, ತರೀಕೆರೆಗೆ ಹೋಗುತ್ತಿರಬೇಕಾದರೆ ಈ ಅಪಘಾತ ಆಗಿದೆ ಅಂತ ನನಗೆ ಕರೆ ಬಂತು” ಎಂದು ತಿಳಿಸಿದರು.
