ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ರೈತರು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ, ತೆಂಗು, ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಕಡೂರಿನಲ್ಲಿ ಉಷ್ಣಾಂಶ 40 ಡಿಗ್ರಿ ಸಮೀಪದಲ್ಲಿದ್ದು, ಬಿಸಿಲಿನ ಝಳಕ್ಕೆ ಜನರು ಹೈರಾಣಾಗಿದ್ದಾರೆ. ರೈತರಿಗೆ ತೋಟದ ಬೆಳೆಗಳಿಂದ ಫಸಲು ಬರೋದು ಬೇಡ, ಗಿಡವಾದರೂ ಉಳಿದುಕೊಳ್ಳಲಿ ಎನ್ನುತ್ತಿದ್ದಾರೆ.
ಮಳೆ ಬಾರದಿದ್ದರೆ ಮುಂದಿನ 15 – 20 ದಿನಗಳಲ್ಲಿ ಹೊಸದಾಗಿ ನಾಟಿ ಮಾಡಿದ ಅಡಿಕೆ ಗಿಡಗಳು ಒಣಗಿ ಸಾಯುತ್ತವೆ. ತಾಲೂಕಿನಾದ್ಯಂತ 3,500 ಎಕರೆ ಪ್ರದೇಶದಲ್ಲಿ ಸುಮಾರು 18 ಲಕ್ಷಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಹೊಸದಾಗಿ ನಾಟಿ ಮಾಡಲಾಗಿದೆ.
ರೈತರು ಅಡಿಕೆ- ತೆಂಗು ಉಳಿಸಲು ಶ್ರಮ ಪಡುತ್ತಿದ್ದರೆ, ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಹೆಚ್ಚುತ್ತಿದೆ. ಗ್ರಾಮೀಣ ಭಾಗದಲ್ಲಿ ವಾಡಿಕೆಯಂತೆ ರೈತರು ನೋಡುವುದು ಮಳೆ ನಕ್ಷತ್ರಗಳನ್ನು. ಏಪ್ರಿಲ್ 14 ರಿಂದ ಆರಂಭವಾದ ವರ್ಷದ ಮೊದಲ ಮಳೆ ಪೂರ ಕೈಕೊಟ್ಟಿದ್ದು, ಏಪ್ರಿಲ್ 28ರಿಂದ ಭರಣಿ ಮಳೆ ಆರಂಭವಾಗಿದೆ. ಭರಣಿ ಮಳೆ ಬಂದರೆ ಧರಣಿ ಹಸಿರಾಗುತ್ತದೆ ಎಂದು ರೈತರು ಕಾಯುತ್ತಿದ್ದಾರೆ.
