ಸ್ಲಂ ಸಂಘಟನೆ ಸಂವಿಧಾನ ರಕ್ಷಣೆಗಾಗಿ ರಾಜ್ಯಾದ್ಯಂತ ಸ್ಲಂ ಜನರಲ್ಲಿ ಜಾಗೃತಿ ಮಾಡುತ್ತಿರುವುದು ಈ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸರಿಯಾಗಿದೆ. ಸ್ಲಂ ಜನರ ಪ್ರಮುಖ ಜಲ್ವಂತ ಸಮಸ್ಯೆಗಳನ್ನು ನಮ್ಮ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ತಮ್ಮ ನ್ಯಾಯ ಪತ್ರದಲ್ಲಿ ಬಹುತೇಕ ಒಪ್ಪಿಕೊಂಡು ಸೇರಿಸಿರುತ್ತಾರೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ದಾವಣಗೆರೆಯ ಭಾಷನಗರ ರಿಂಗ್ ರಸ್ತೆಯಲ್ಲಿರುವ ಎಸ್.ಎಸ್. ಶಾದಿಮಹಲ್‌ನಲ್ಲಿ ಸ್ಲಂ ಜನರ ಮತ ಸಂವಿಧಾನ ರಕ್ಷಣೆಗಾಗಿ, ಮತ ಜಾಗೃತಿ ಸಮಾವೇಶವನ್ನು ಸ್ಲಂ ಜನಾಂದೋಲನ ಕರ್ನಾಟಕ ಸಾವಿತ್ರಿಬಾಯಿ ಪುಲೆ ಮಹಿಳಾ ಸಂಘಟನೆ ಹಮ್ಮಿಕೊಕೊಂಡಿತ್ತು. ಈ ಸಮಾವೇಶದಲ್ಲಿ ಸ್ಲಂ ಜನರ 10 ಅಂಶಗಳ ಸಾರ್ವತ್ರಿಕ ಒತ್ತಾಯಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡ ಜನರ ಪರವಾಗಿ ಕಳೆದ 10 ವರ್ಷಗಳಿಂದ ಕೆಲಸ ಮಾಡಿಲ್ಲ. ಈ ಬಾರಿ ಮೋದಿ ಸೋಲಿಸಿ ದಾವಣಗೆರೆಯಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ ಗೆಲ್ಲಿಸಿ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡಿಕೊಡುತ್ತಾರೆ. ಅರ್ಹ ಹಾಗೂ ನೈಜ ನಿವೇಶನ ರಹಿತರಿಗೆ ನಿವೇಶನ ನೀಡುವುದು ನನ್ನ ಕೆಲಸವಾಗಿದೆ ನಾನು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸಂಘಟನೆಯ ರಾಜ್ಯ ಸಂಚಾಲಕ ಎ.ನರಸಿಂಹ ಮೂರ್ತಿ ಮಾತನಾಡಿ, ಸಂವಿಧಾನ ಉಳಿದರೆ ಮಾತ್ರ ಜನ ಸಾಮಾನ್ಯರ ಹಕ್ಕುಗಳು ರಕ್ಷಣೆಯಾಗುತ್ತವೆ. ಎಲ್ಲಾ ನಾಗರೀಕರಿಗೆ ಸಮಾನತೆಯ ಸ್ವಾತಂತ್ರ್ಯ ನೀಡಿರುವ ಸಂವಿಧಾನವನ್ನು ಬಿಜೆಪಿ ಪಕ್ಷ ಒಪ್ಪುತ್ತಿಲ್ಲ. ಈ ಬಾರಿ 400 ಸೀಟು ಗೆದ್ದರೆ ಸಂವಿಧಾನ ಬದಲಾಯಿಸುವುದಾಗಿ ಹೇಳುತ್ತಿದ್ದಾರೆ ಹಾಗಾಗಿ ನಾವೆಲ್ಲರೂ ಸಂವಿಧಾನ ರಕ್ಷಣೆ ಮಾಡಲು ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಬೇಕಾಗಿದೆ ಎಂದರು.
ಬೆಲೆ ಏರಿಕೆಯ ಕಾರಣ ಈ ದೇಶದ ಬಡವರ ಸ್ಥಿತಿ ದಿನೇದಿನೇ ದುಸ್ಥಿತಿಗೆ ತಲುಪುತ್ತಿದೆ. ನಮ್ಮ 10 ಪ್ರಮುಖ ಬೇಡಿಕೆಗಳ ಪೈಕಿ ಭಾರತ್ ಜೋಡೋ ಯಾತ್ರೆಯಲ್ಲಿ 5 ಅಂಶಗಳನ್ನು ಸ್ವೀಕರಿಸಿದೆ.ಹಾಗಾಗಿ ಕಾಂಗ್ರೇಸ್ ನ್ಯಾಯಪತ್ರ ಸಂವಿಧಾನ ಜನರಿಗೆ ನೀಡಿರುವ ಖಾತ್ರಿಯನ್ನು ಮತ್ತು ದೇಶದ ಸಂಪತ್ತನ್ನು ಜನರಿಗೆ ಹಂಚಿಕೆ ಮಾಡುವ ಗುರಿ ಹೊಂದಿದೆ ಎಂದರು.
ವೇದಿಕೆಯಲ್ಲಿ ಗೌರವಾಧ್ಯಕ್ಷ ಆನಂದಪ್ಪ, ಜಿಲ್ಲಾ ಸಂಚಾಲಕರಾದ ರೇಣಕಾಯಲ್ಲಮ್ಮ, ಅಧ್ಯಕ್ಷರಾದ ಎಂ.ಶಬ್ಬಿರ್ ಸಾಬ್, ಮಂಜುಳ, ಜಂಶಿದಾ ಬಾನುಬಾಲಪ್ಪ, ಬೀಬಿಜಾನ್, ಗೀತಮ್ಮ, ಚಮನ್ ಮುಂತಾದವರಿದ್ದರು.