ರಾಜ್ಯ ಸರ್ಕಾರದ ಅಕ್ರಮ ಒತ್ತುವರಿ ತೆರವು ಖಂಡಿಸಿ ರೈತ ಸಂಘಟನೆಗಳು ಬುಧವಾರ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಬಂದ್‌ಗೆ ಕರೆ ನೀಡಿತ್ತು. ಈ ಬಂದ್‌ಗೆ ಕಳಸ ತಾಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಅಂಗಡಿ – ಮುಂಗಟ್ಟುಗಳನ್ನು ಮುಚ್ಚಿ ವರ್ತಕರು ಬಂದ್‌ಗೆ ಬೆಂಬಲ ಸೂಚಿಸಿದ್ದು, ರೈತರ ಹೋರಾಟಕ್ಕೆ ಸರ್ವ ಪಕ್ಷಗಳು ಸಾಥ್ ನೀಡಿದ್ದವು. ಕನ್ನಡ, ದಲಿತ ಸಂಘಟನೆ ಸೇರಿ ಬಹುತೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿತ್ತು.
ಕಳಸ ತಾಲೂಕು ಒತ್ತುವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಕಾಫಿ ಬೆಳಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ಬದುಕಿಗಾಗಿ ಮಾಡಿರುವ 2-3 ಎಕರೆ ಒತ್ತುವರಿಯೇ ಹೆಚ್ಚಾಗಿದೆ. ಒತ್ತುವರಿ ತೆರವು ಮಾಡಿದರೆ ಸಾವಿರಾರು ಕುಟುಂಬಗಳು ಬೀದಿಗೆ ಬರಲಿವೆ. ಕೂಡಲೇ ಅಕ್ರಮ ಒತ್ತುವರಿ ತೆರವು ಕೈಬಿಡಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬೆಳಗ್ಗೆ ಅಂಗಡಿಗಳು, ಶಾಲಾ-ಕಾಲೇಜುಗಳು ಮುಚ್ಚಿದ್ದವು. ಸಂಜೆ 4ರ ನಂತರ ಅಂಗಡಿಗಳು ತೆರೆದವು. ಕಳಸೇಶ್ವರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕರು ಭಾಗವಹಿಸಿದ್ದರು. ಕಳಸ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ಮಾಡಲಾಯಿತು. ತಾಲೂಕಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಹೈಕೋರ್ಟ್ ಚೀಫ್ ಜಸ್ಟೀಸ್ ಭೇಟಿ ನೀಡಿದ್ದು, ಪ್ರತಿಭಟನಾ ಮಾರ್ಗದಲ್ಲಿ ನ್ಯಾಯಮೂರ್ತಿಗಳು ಸಾಗುವ ವೇಳೆ, “ನಮ್ಮ ನೋವು ನ್ಯಾಯಮೂರ್ತಿಗಳಿಗೂ ಗೊತ್ತಾಗಲಿ” ಎಂದು ಹೋರಾಟಗಾರರು ಘೋಷಣೆ ಕೂಗಿದರು.
‘ಮಲೆನಾಡಿನ ಕಾಫಿ ತೋಟಗಳು ಅರಣ್ಯದ ಸ್ವರೂಪದಲ್ಲೇ ಇವೆ ಎಂದು ಸರ್ಕಾರದ ಗಮನಕ್ಕೆ ತರಲಾಗಿದೆ. ಸದ್ಯಕ್ಕೆ ಯಾವುದೇ ಭೂಮಿ ತೆರವು ಮಾಡದಂತೆ ಅರಣ್ಯ ಸಚಿವರಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ರಾಜಕೀಯ ಪ್ರೇರಿತ ವದಂತಿ ನಂಬಬಾರದು’ ಎಂದು ಶಾಸಕ ಟಿ.ಡಿ.ರಾಜೇಗೌಡ ಮನವಿ ಮಾಡಿದರು.

‘ಅರಣ್ಯ ಅಧಿಕಾರಿಗಳು ರೈತರ ಭೂಮಿ ತೆರವು ಮಾಡುವ ಯತ್ನ ಮಾಡಿದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸುತ್ತೇನೆ’ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಳಸ ತಹಶೀಲ್ದಾರ್ ಕೆ ಎಸ್ ದಯಾನಂದ್ ಹೋರಾಟ ಸಮಿತಿ ಸರ್ಕಾರಕ್ಕೆ ಸಲ್ಲಿಸಿದ ಹಕ್ಕೊತ್ತಾಯ ಪತ್ರವನ್ನು ಸ್ವೀಕರಿಸಿ, ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
