ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅನೇಕ ರಸ್ತೆಗಳು ಗುಂಡಿಗಳಿಂದ ಕೂಡಿವೆ. ವಾಹನ ಸವಾರರು ದಿನವಿಡೀ ತೊಂದರೆ ಅನುಭವಿಸುವಂತಾಗಿದೆ. ಇದರಿಂದ ಬೇಸತ್ತ ಮೂಡಿಗೆರೆಯ ಛತ್ರ ಮೈದಾನದ ಸದಸ್ಯರ ತಂಡ ಸ್ವಂತ ಹಣದ ಖರ್ಚಿನಲ್ಲಿ ಗುಂಡಿಗಳನ್ನು ಮುಚ್ಚಿದೆ.
ಪಟ್ಟಣ ಪಂಚಾಯತಿ ವತಿಯಿಂದ ಕಳೆದ ವರ್ಷ ಕುಡಿಯುವ ನೀರಿನ ಸಂಪರ್ಕವಾಗಿ, ಸಂದೇಶ್ ಚಿತ್ರ ಮಂದಿರ ಸಮೀಪ ಇರುವ ರಸ್ತೆಗಳು ಅಗೆದಿತ್ತು. ಕಾಮಗಾರಿ ಮುಗಿದ ನಂತರ ರಸ್ತೆಗೆ ಮಣ್ಣು ಹಾಕಿ ಮುಚ್ಚಿ ಹಾಗೇ ಬಿಟ್ಟಿದ್ದರು.
ಅದರ ಮೇಲೆ ಡಾಂಬರು ಹಾಕದೇ ಇರುವುದರಿಂದ ಗುಂಡಿಗಳ ಗಾತ್ರ ದೊಡ್ಡದಾಗಿ ವಾಹನ ಸವಾರರು, ಶಾಲಾ ಮಕ್ಕಳು ಹಾಗೂ ಪಾದಚಾರಿಗಳಿಗೆ ಇದರಿಂದ ನಿತ್ಯ ತೊಂದರೆ ಅನುಭವಿಸುವಂತಾಗಿತ್ತು.
ಮೂಡಿಗೆರೆ ಪಟ್ಟಣ ಪಂಚಾಯಿತಿ ಈ ನಿರ್ಲಕ್ಷ್ಯಕ್ಕೆ ಬೇಸರಗೊಂಡ ಛತ್ರ ಮೈದಾನ ತಂಡದ ಸದಸ್ಯರು ಶ್ರಮದಾನದ ಮೂಲಕ ಗುಂಡಿಗಳು ಮುಚ್ಚಿದ್ದಾರೆ.
ಯುವಕರಾದ ಅನಿಲ್ ಎಂ.ವಿ, ಅವಿನಾಶ್ ಎಂ.ಜಿ, ಶಿವಕುಮಾರ್, ಸೂರ್ಯ, ವಿವೇಕ್, ಸುಧೀರ್, ಎಂ.ಎಲ್.ಅವಿನಾಶ್, ಸುಹೀಲ್, ರಾಮು, ಜಗದೀಶ್, ಮೋಹನ್, ದರ್ಶನ್, ಗೋಪಾಲ್ ಸಿಂಗ್, ರಾಘವೇಂದ್ರ, ಪುಟ್ಟಣ್ಣ ಇನ್ನಿತರರು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ.