ಎಸ್ಟೇಟ್ ಮಾಲೀಕರ ಲೈನ್ ಮನೆಗಳೆಂಬ ಜೈಲಿನಿಂದ ಬಿಡುಗಡೆ ಪಡೆದರೂ, ಬದುಕು ಮಾತ್ರ ಬದಲಾಗಿಲ್ಲ. ನಿಲ್ಲಲು ತಮ್ಮದೇ ಆದ ನೆಲೆಯಿಲ್ಲ. ನೆತ್ತಿ ಮೇಲೆ ಗಟ್ಟಿಯಾದ ಸೂರಿಲ್ಲ. ಹೊಟ್ಟೆ ಮೂರೊತ್ತಿನ ಊಟಕ್ಕೂ ಪರಿಪಾಡು ಪಡಬೇಕು – ಇದು ಚಿಕ್ಕಮಗಳೂರು ಜಿಲ್ಲೆಯ ಕಳಸಾ ತಾಲೂಕಿನ ಕುಂಬ್ಲಡ್ಕೆ ಗ್ರಾಮದಲ್ಲಿರುವ ಬುಡಕಟ್ಟು, ಅದಿವಾಸಿ ಗಿರಿಜನರ ಪಾಡು.
ಈ ಜನರು ನಾಲ್ಕೈದು ವರ್ಷಗಳಿಗೂ ಹಿಂದೆ ಕಾಫಿ ಎಸ್ಟೇಟ್‌ಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಎಸ್ಟೇಟ್ ಮಾಲೀಕರೇ ಕಟ್ಟಿಸಿದ್ದ ಲೈನ್ ಮನೆಗಳಲ್ಲಿಯೇ ಅವರ ಬದುಕು ಸಾಗುತ್ತಿತ್ತು. ಅವರು ಕೊಡುವ ಒಂದಷ್ಟು ಕೂಲಿ, ಆಹಾರ ಧಾನ್ಯಗಳಿಂದಲೇ ಗಿರಿ ಜನರು ಹೊಟ್ಟೆ ತುಂಬಿಸಿಕೊಳ್ಳಬೇಕಿತ್ತು.
ಆದರೆ, 2019ರಲ್ಲಿ ಸುರಿದ ಭಾರೀ ಮಳೆ ಮತ್ತು 2020ರಲ್ಲಿ ದೇಶವನ್ನೇ ಜೈಲಿನಲ್ಲಿಟ್ಟ ಕೊರೊನಾ – ಈ ಜನರ ಬದುಕನ್ನು ಮತ್ತಷ್ಟು ದುಸ್ತರಗೊಳಿಸಿತು. ಕೊರೊನಾ ಸಮಯದಲ್ಲೂ ಅವರ ಬದುಕಿಗೆ ಸೌಲಭ್ಯ ಒದಗಿಸಬೇಕಾಗುತ್ತದೆ ಎಂದು ಎಸ್ಟೇಟ್ ಮಾಲೀಕರು ಅವರೆಲ್ಲರನ್ನೂ ಹೊರಗಟ್ಟಿದರು. ಸುಮಾರು 50 ಕುಟುಂಬಗಳು ಜೀವನ ಎಲ್ಲಿ ಎಂಬ ಪೇಜಿಗೆ ಸಿಲುಕಿದ್ದರು. ಜೀವನ ಸಾಗಿಸಲು ಕುಂಬ್ಲಡ್ಕೆಯಲ್ಲಿದ್ದ ಸರ್ಕಾರಿ ಕಂದಾಯ ಭೂಮಿಯಲ್ಲಿ ನೆಲೆ ನಿಂತರು. ಆದರೂ, ವಸತಿ, ಕುಡಿಯುವ ನೀರು, ರಸ್ತೆಗಳಂತಹ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಅಲ್ಲಿನ ಮಕ್ಕಳು ಶಿಕ್ಷಣದಿಂದಲೂ ದೂರ ಉಳಿದಿದ್ದಾರೆ.
ತಮಗೆ ಸರ್ಕಾರಿ ಕಂದಾಯ ಭೂಮಿಯಲ್ಲಿ ನಿವೇಶನ ಮಂಜೂರು ಮಾಡಬೇಕು. ಮನೆ ಕಟ್ಟಿಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ, ಅಧಿಕಾರಿಗಳಾಗಲೀ, ಸರ್ಕಾರವಾಗಲೀ ಅವರ ಬೇಡಿಕೆಗೆ ಕಿವಿಗೊಡುತ್ತಿಲ್ಲ. “ಜನಪ್ರತಿನಿಧಿಗಳು ಚುನಾವಣೆ ಸಮಯದಲ್ಲಿ ಓಟು ಕೇಳಲು ಮಾತ್ರವೇ ಬರುತ್ತಾರೆ. ಚುನಾವಣೆ ಮುಗಿದ ಮೇಲೆ ನಾವು ಸತ್ತಿದ್ದೇವೆಯೇ, ಬದುಕಿದ್ದೇವೆಯೇ” ಎಂದು ಯಾವೊಬ್ಬರೂ ತಮ್ಮತ್ತ ನೋಡುವುದಿಲ್ಲ ಎಂದು ಗಿರಿ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನಮಗೆ ವಿದ್ಯುತ್ ಸೌಲಭ್ಯವೂ ಇಲ್ಲ. ಈ ಹಿಂದೆ, ಸರ್ಕಾರ ಸೀಮೆ ಎಣ್ಣೆ ಕೊಡುತ್ತಿತ್ತು. ಸೀಮೆ ಎಣ್ಣೆ ಬುಡ್ಡಿಯ ಬೆಳಕಿನಲ್ಲಿ ಬದುಕುತ್ತಿದ್ದೆವು. ಈಗ ಅದನ್ನೂ ನಿಲ್ಲಿಸಿಬಿಟ್ಟಿದ್ದಾರೆ. ದೀಪಕ್ಕೆ ಡೀಸೆಲ್ ಬಳಸುತ್ತಿದ್ದೇವೆ. ನಮ್ಮಲ್ಲಿ ಕೆಲವು ಮಕ್ಕಳು ದೂರದ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಬಾಲಕಿಯೊಬ್ಬಳು ಎಸ್‌ಎಸ್ಎಲ್‌ಸಿಯಲ್ಲಿ 90% ಅಂಕ ಗಳಿಸಿದ್ದಾಳೆ. ಆಕೆ ಕಾನೂನು ಶಿಕ್ಷಣ ಪಡೆಯುತ್ತಿದ್ದು, ಕಾಲೇಜಿಗೆ 10 ಕಿ.ಮೀ ಹೋಗಬೇಕು. ಅದರಲ್ಲಿ 2 ಕಿ.ಮೀ ನಡೆದುಕೊಂಡು ಹೋಗಿ, ಬಸ್ ಹತ್ತಬೇಕು. ದಾರಿ ಮಧ್ಯೆ ಹಳ್ಳವಿದ್ದು, ಮಳೆ ಬಂದಾಗ ಹಳ್ಳ ತುಂಬಿ ಹರಿದರೆ ಓಡಾಟವೂ ಕಷ್ಟವಾಗುತ್ತದೆ. ಗುಡ್ಡ ಕುಸಿಯುವ ಭಯವೂ ಇರುತ್ತದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈದಿನ.ಕಾಮ್ ಜೊತೆ ಮಾತನಾಡಿದ ಅಲ್ಲಿನ ಜನರು, “ತಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಪ್ರಧಾನ ಮಂತ್ರಿ ಹಾಗೂ ರಾಷ್ಟ್ರಪತಿಗೂ ಇಲ್ಲಿನ ಜನರು ಜುಲೈ 7 ರಂದು ಪತ್ರ ಬರೆದಿದ್ದೇವೆ. ಜುಲೈ 20ರಂದು ರಾಷ್ಟ್ರಪತಿ ಭವನದಿಂದ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹಿಂಬರಹ ಪತ್ರ ಬಂದಿದೆ. ಆದರೆ, ಇಲ್ಲಿಯವರೆಗೂ ಯಾವುದೇ ಅಧಿಕಾರಿಗಳು ನಮ್ಮ ಸ್ಥಳಕ್ಕೆ ಭೇಟಿ ನೀಡಿಲ್ಲ” ಎಂದು ತಿಳಿಸಿದ್ದಾರೆ.
ಆಗಸ್ಟ್ 22ರಂದು ಕುಂಬ್ಲಡ್ಕೆ ಗ್ರಾಮಕ್ಕೆ ತಹಶೀಲ್ದಾರ್ ಮತ್ತು ಗಂಗನ ಕೂಡಿಗೆ ಗ್ರಾಮ ಪಂಚಾಯತಿ ಪಿಡಿಒ ಭೇಟಿ ನೀಡಿದ್ದರು.ಅಲ್ಲಿನ ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಯಾವುದೇ ಸಮಸ್ಯೆ ಇಲ್ಲ. ಈ ವಿಚಾರವಾಗಿ ಪಿಡಿಒ ಜೊತೆ ಚರ್ಚಿಸಿ, ಕ್ರಮ ಕೈಗೊಳ್ಳುತ್ತೇವೆ ಎಂದು ತಹಶೀಲ್ದಾರ್ ಮಂಜುನಾಥ್ ಈದಿನ.ಕಾಮ್‌ಗೆ ತಿಳಿಸಿದ್ದಾರೆ.
ಪಂಚಾಯತಿ ಪಿಡಿಒ ಅವರನ್ನು ಫೋನ್ ಕರೆ ಮೂಲಕ ಸಂಪರ್ಕಿಸಲು ಯತ್ನಿಸಿದೆವು. ಮಾಧ್ಯಮದಿಂದ ಕರೆ ಮಾಡಿದ್ದೇವೆ ಎಂದ ತಕ್ಷಣ ಅವರು ಪೋನ್ ಕಟ್ ಮಾಡಿದರು.
“ಬೇರೆ-ಬೇರೆ ಭಾಗಗಳಿಂದ ಜನರು ಇಲ್ಲಿಗೆ ಬಂದು ನೆಲೆಸಿದ್ದಾರೆ. ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದವರಿಗೆ ಮಾತ್ರ ನಾವು ನಿವೇಶನ ಕೊಡಲು ಸಾಧ್ಯ. ನಮ್ಮ ಗ್ರಾಮ ಪಂಚಾಯತಿಯಿಂದ ವರ್ಷದಲ್ಲಿ 18-20 ಮನೆಗಳನ್ನು ನಿರಾಶ್ರಿತರಿಗೆ ಕೊಡಬಹುದು. ಕಾನೂನು ಪ್ರಕಾರವಾಗಿ ಇಲ್ಲಿನ ದಾಖಲಾತಿಗಳಿದ್ದರೆ ಮಾತ್ರ ನಿವೇಶನ ಕೊಡಲು ಸಾಧ್ಯ. ಆದರೆ ಎಲ್ಲರಿಗೂ ನಮ್ಮಿಂದ ನಿವೇಶನ ಕೊಡಲು ಆಗುವುದಿಲ್ಲ. ಸರ್ಕಾರದಿಂದ ಭೂಮಿ ಮತ್ತು ವಸತಿ ವಂಚಿತರಿಗೆ ನಿವೇಶನ ನೀಡಿದರೆ ನಮ್ಮದೇನೂ ಅಭ್ಯಂತರವಿಲ್ಲ” ಎಂದು ಈದಿನ.ಕಾಮ್ ಜೊತೆ ಮಾತನಾಡಿದ ಗಂಗನ ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯ ಸಂತೋಷ್ ಗೌಡ ಹೇಳಿದ್ದಾರೆ.
ಒಳ್ಳೆ ವರದಿ. ಶಬಾಶ್!