ಕ್ರಾಂತಿಕಾರಿ ಕವಿ, ಹೋರಾಟಗಾರ ಗದ್ದರ್ ಅವರ ಜೀವನ ಇಂದಿನ ಯುವಜನತೆಗೆ ಮಾದರಿಯಾಗಿದೆ. ಕಾಫಿನಾಡಿನ ಯುವಜನರಲ್ಲೂ ಹೋರಾಟದ ಕಿಚ್ಚು ಹಚ್ಚಿಸುವಲ್ಲಿ ಅವರು ಸಫಲರಾಗಿದ್ದರು. ಅವರ ಅಗಲಿಕೆಯಿಂದ ಜನಪರ ಹೋರಾಟಗಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ರಾಜ್ಯ ಸಂಚಾಲಕ ಗೌಸ್ ಮೊಹಿದ್ದೀನ್ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಬುಧವಾರ ಆಯೋಜಿಸಲಾಗಿದ್ದ ಗದ್ದರ್ ನುಡಿನಮನ ಸಂತಾಪ ಸಭೆಯಲ್ಲಿ ಅವರು ಮಾತನಾಡಿದರು. “ದೇಶದ ಬಡಜನರು, ಕಾರ್ಮಿಕರು, ಮಹಿಳೆಯರು, ಆದಿವಾಸಿಗಳ ಹಕ್ಕುಗಳಿಗಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದ ಕ್ರಾಂತಿಕಾರಿ ಗದ್ದರ್ ಅವರ ನಿಧನದಿಂದಾಗಿ ಜನಪರ ಹೋರಾಟಗಳಿಗೆ ತುಂಬಲಾರದ ನಷ್ಟ ಉಂಟಾಗಿದೆ” ಎಂದರು.
“80ರ ದಶಕದಲ್ಲಿ ಕ್ರಾಂತಿಕಾರಿ ಚಳವಳಿಗಳಲ್ಲಿ ಭಾಗವಹಿಸಿ ಜನನಾಟ್ಯ ಮಂಡಳಿ ಮೂಲಕ ಆಂಧ್ರ, ತೆಲಂಗಾಣ, ಛತ್ತೀಸ್ ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ ಕರ್ನಾಟಕ, ಒಡಿಶಾ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಜನಪರ ಹೋರಾಟಗಳನ್ನು ಗದ್ದರ್ ಕಟ್ಟಿದ್ದರು. ಬಡವರ ನೋವು, ಸಂಕಟ, ಸಮಸ್ಯೆ, ಆಡಳಿತ ಶಾಹಿ ವ್ಯವಸ್ಥೆಯನ್ನು ಕ್ರಾಂತಿಕಾರಿ ಹಾಡುಗಳ ಮೂಲಕ ವಿವರಿಸುತ್ತಿದ್ದರು. ಯುವಜನರಲ್ಲಿ ಹೋರಾಟದ ಕಿಚ್ಚು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು” ಎಂದು ಸ್ಮರಿಸಿದರು.
“ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಘಪರಿವಾರದ ಷಡ್ಯಂತ್ರಗಳ ವಿರುದ್ಧ ಕೋಮುಸೌಹಾರ್ದ ವೇದಿಕೆ ಹೋರಾಟ ರೂಪಿಸಿದ್ದ ಸಂದರ್ಭದಲ್ಲಿ ಕವಿ ಗದ್ದರ್ ಅವರನ್ನು ಆಹ್ವಾನಿಸಲಾಗಿತ್ತು. ಆ ಹೋರಾಟದಲ್ಲಿ ಭಾಗವಹಿಸಿದ್ದ ಅವರು ಕಾಫಿನಾಡಿನ ಜನರಲ್ಲಿ ಸಂಚಲನ ಮೂಡಿಸಿದ್ದರು. ಜಿಲ್ಲೆಯ ಯುವಜನರು ಅವರ ಕ್ರಾಂತಿಗೀತೆಗಳು, ಮಾತುಗಳಿಂದ ಪ್ರೇರಿತರಾಗಿ ಜನಪರ ಹೋರಾಟಗಳಿಗೆ ಧುಮುಕಿದ್ದರು. ಜಿಲ್ಲೆಯ ಚಳವಳಿಗೆ ಗದ್ದರ್ ಅವರು ನೀಡಿರುವ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ” ಎಂದರು.
“ಕೋಮುವಾದ, ಅಧಿಕಾರಶಾಹಿ, ಬಂಡವಾಳಶಾಹಿ ವ್ಯವಸ್ಥೆಯಿಂದಾಗಿ ಬಡವರು, ಕಾರ್ಮಿಕರು, ಆದಿವಾಸಿಗಳು, ಮಹಿಳೆಯರ ಬದುಕು ಬೀದಿಪಾಲಾಗುತ್ತಿದೆ. ಅರಣ್ಯವಾಸಿಗಳ ಬದುಕು ಅತಂತ್ರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕವಿ ಗದ್ದರ್ ಅವರ ಚಿಂತನೆಗಳ ಪಾಲನೆಯಿಂದ ಭ್ರಷ್ಟ ವ್ಯವಸ್ಥೆ ವಿರುದ್ಧ ಹೋರಾಡಲು ಸಾಧ್ಯವಿದೆ. ಗದ್ದರ್ ಅವರ ಜೀವನ ಇಂದಿನ ಯುವಜನತೆಗೆ ಮಾದರಿಯಾಗಿದೆ” ಎಂದು ತಿಳಿಸಿದರು.
ಸಭೆಯಲ್ಲಿ ಮರ್ಲೆ ಅಣ್ಣಯ್ಯ, ಹುಣಸೇಮಕ್ಕಿ ಲಕ್ಷಣ್ ವೆಂಕಟೇಶ್ ಶೋಯಬ್, ಗೋಪಾಲಗೌಡ, ಹೊನಪ್ಪ ಗೌಡ, ಮಂಜು, ಹಸನಬ್ಬ ಅರುಣಾಕ್ಷಿ ,ವೆಂಕಟೇಶ್ ಸೇರಿದಂತೆ ಹಲವರು ಇದ್ದರು.