ಮುಂಗಾರು ಶುರುವಾದ ಬೆನ್ನಲ್ಲೇ ರಾಜ್ಯದ ಪ್ರಸಿದ್ಧ ಚಾರಣ ತಾಣ ಕುದುರೆಮುಖ ಟ್ರೆಕ್ಕಿಂಗ್ ಪಾಯಿಂಟ್ಗೆ ಚಾರಣಕ್ಕೆ ಅನುಮತಿ ನೀಡಲಾಗಿದೆ. ಇಂದಿನಿಂದ ಕುದುರೆಮುಖ ಶಿಖರ ಚಾರಣಕ್ಕೆ ಮುಕ್ತವಾಗಲಿದೆ. ಕಾಡ್ಗಿಚ್ಚು ಹತ್ತುವ ಸಾಧ್ಯತೆಯ ಕಾರಣ ಅರಣ್ಯ ಇಲಾಖೆ 3 ತಿಂಗಳು ಚಾರಣವನ್ನು ನಿರ್ಬಂಧಿಸಿತ್ತು, ಜೂನ್ 1ರಿಂದ ಕುದುರೆಮುಖ ಮತ್ತು ನೇತ್ರಾವತಿ ಶಿಖರಗಳು ಚಾರಣಕೆ ಮುಕ್ತವಾಗಿವೆ.
ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿರುವ ಕುದುರೆಮುಖ ಚಾರಣ (Kudremukh Trek) ಪ್ರಕೃತಿ ಪ್ರಿಯರ ಹಾಟ್ ಸ್ಪಾಟ್. ಸುಮಾರು 22 ಕಿ.ಮೀ ದೂರದ ದಾರಿ ಕ್ರಮಿಸಲು 7ರಿಂದ 8 ಗಂಟೆಗಳ ಕಾಲ ನಡೆಯಬೇಕಾಗುತ್ತದೆ. ಹಚ್ಚ ಹಸಿರಿನ ಹುಲ್ಲುಗಾವಲುಗಳು, ಜಲಪಾತಗಳು ಮತ್ತು ದಟ್ಟವಾದ ಅರಣ್ಯ ಕ್ರಮಿಸುವಾಗ ಚಾರಣಿಗರಿಗೆ ದಣಿವಿನ ಪರಿವೆಯೂ ಇರದು. ಬೆಂಗಳೂರಿನಿಂದ 330 ಕಿ.ಮೀ , ಚಿಕ್ಕಮಗಳೂರಿನಿಂದ 94 ಕಿ.ಮೀ ದೂರದಲ್ಲಿದೆ ಈ ಚಾರಣಿಗರ ಸ್ವರ್ಗ.
ಇದನ್ನೂ ಓದಿ> ಕುದುರೆಮುಖ ಕಾಡ್ಗಿಚ್ಚು: ಬೆಂಕಿ ಹಚ್ಚುವುದರಿಂದ ಲಾಭ ಯಾರಿಗೆ?

ಚಾರಣಾಸಕ್ತರು ಅರಣ್ಯ ಇಲಾಖೆಯ ಅಧಿಕೃತ ವೆಬ್ಸೈಟ್ https://aranyavihaara.karnataka.gov.in/ ಭೇಟಿ ನೀಡುವ ಮೂಲಕ ಬುಕಿಂಗ್ ಕಾಯ್ದಿರಿಸಬಹುದಾಗಿದೆ. ಮುಂಗಡ ಬುಕ್ಕಿಂಗ್ ಕಡ್ಡಾಯವಾಗಿದ್ದು, ಆಫ್ಲೈನ್ ಅಥವಾ ಸ್ಥಳದಲ್ಲಿ ಟಿಕೆಟ್ ಪಡೆಯಲು ಅವಕಾಶಗಳಿರುವುದಿಲ್ಲ ಎಂದು ಇಲಾಖೆ ತಿಳಿಸಿದೆ.
ಬುಕ್ಕಿಂಗ್ ಮಾಡುವುದು ಹೇಗೆ?
ಅರಣ್ಯ ಇಲಾಖೆಯ ಅಧಿಕೃತ ಪೋರ್ಟಲ್ ಅರಣ್ಯ ವಿಹಾರʼಗೆ ಭೇಟಿ ನೀಡಿ. ಲಭ್ಯವಿರುವ ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ. ನಿಮ್ಮ ಗುರುತಿನ ಚೀಟಿ ವಿವರಗಳನ್ನು ನೀಡಿ, ನಿಗದಿತ ಶುಲ್ಕವನ್ನು ಪಾವತಿಸಿ. ಚಾರಣದ ಅವಧಿಗಿಂತ ಹತಿಪ್ಪತ್ತು ನಿಮಿಷ ಮುನ್ನವೇ ಬೇಸ್ ಕ್ಯಾಂಪ್ ತಲುಪಲು ಮರೆಯದಿರಿ.
ಪ್ರಮುಖ ಸೂಚನೆಗಳು:
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ನಿಯಮಾವಳಿಗಳ ಪ್ರಕಾರ, ಅರಣ್ಯ ಕಚೇರಿಯಿಂದ ಸಂಜೆ 6 ಗಂಟೆಯ ನಂತರ ಚಾರಣ ಮಾಡಲು ಅನುಮತಿ ಇರುವುದಿಲ್ಲ, ಟ್ರೆಕ್ಕಿಂಗ್ಗೂ ಮುನ್ನ ಹವಾಮಾನ ಅಥವಾ ಇತರ ಅನಿವಾರ್ಯ ಕಾರಣಗಳಿಂದ ಅನುಮತಿಯನ್ನು ರದ್ದುಗೊಳಿಸುವ ಸಾಧ್ಯತೆಗಳಿರುತ್ತವೆ. ಖಾಸಗಿ ಟ್ರಾವೆಲ್ಸ್ ಅಥವಾ ಟ್ರೆಕ್ಕಿಂಗ್ ಗುಂಪುಗಳ (ಉದಾಹರಣೆಗೆ: BookMyShow ಅಥವಾ Muddie Trails) ಮೂಲಕವೂ ಪ್ಯಾಕೇಜ್ ಆಧಾರಿತ ಬುಕ್ಕಿಂಗ್ ಮಾಡಿಕೊಳ್ಳಬಹುದು.




