ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆ ಮಾತು ನಾವೆಲ್ಲಾ ಎಳೆಯರಿದ್ದಾಗಲಿಂದ ಕೇಳುತ್ತಲೇ ಇದ್ದೇವೆ. ಮಲೆನಾಡು, ಮಲೆನಾಡಿಗರ ಬದುಕು ಹೀಗೆಯೆ ದೂರದಿಂದ ಕಣ್ಣಿಗೆ ನುಣ್ಣಗೆ ಕಾಣುತ್ತದೆ. ಆದರಿಲ್ಲಿ ಜೀವಿಸುವವರಿಗೆ ಬದುಕೆಂದರೆ ನಿತ್ಯ ಹೋರಾಟ.
ಮಾರ್ಚ್ 19ರಂದು ಕುದುರೆಮುಖ ರಾಷ್ಟ್ರೀಯ ಉದ್ಯಾನ ಹಬ್ಬಿದ ಕಾಡ್ಗಿಚ್ಚು ಕಿಗ್ಗ, ಶಿರ್ಲು ಭಾಗದ ಸುಮಾರು 18 ಎಕರೆ ಹುಲ್ಲುಗಾವಲಿಗೆ ಬೆಂಕಿಯ ಕೆನ್ನಾಲಿಗೆ ಚಾಚಿಕೊಂಡಿತು. ಕೃತ್ಯದ ಹಿಂದೆ ಪ್ರವಾಸಿಗರ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದವು. ಕುದುರೆಮುಖ ಶೋಲಾ ಅರಣ್ಯಕ್ಕೆ ಕಿಚ್ಚು ಹರಡುವ ಮುನ್ನ ಅರಣ್ಯ ಇಲಾಖೆ ಸಿಬ್ಬಂದಿಗಳು ಬೆಂಕಿ ಹಬ್ಬದಂತೆ ತಡೆದರು.
ಒಂದರ ಹಿಂದೆ ಒಂದರಂತೆ ಸುತ್ತಮುತ್ತಲಿನ 25 ಕಡೆಗಳಲ್ಲಿ ಬೆಂಕಿ ಹಬ್ಬಿತು. ಅರಣ್ಯ ಸಚಿವ ಈಶ್ವರ್ ಖಾಂಡ್ರೆ ಅರಣ್ಯ ಇಲಾಖೆಯೊಂದಿಗೆ ತುರ್ತು ಸಭೆ ಕರೆದು ಘಟನೆಯ ಕುರಿತು ಹೆಚ್ಚಿನ ಪರಿಶೀಲನೆ ನಡೆಸಲು ಸೂಚಿಸಿದರು. ಕೃತ್ಯದ ಕಾರಣೀಕರ್ತರನ್ನು ಹುಡುಕಿ ಅವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆಯೂ ಆದೇಶಿಸಿದರು.

ಕರ್ನಾಟಕದಲ್ಲಿ ಆಗಾಗ ಸಂಭವಿಸುತ್ತಿರುವ ಕಾಡ್ಗಿಚ್ಚಿಗೆ ಕಾರಣಗಳನ್ನು ಪಟ್ಟಿ ಮಾಡಿದ ವನ್ಯಜೀವಿ ಸಂರಕ್ಷಣ ಸಮಿತಿಯ ಕುಮಾರ್ ಪುಷ್ಕರ್, ಮನೋಜ್ ಕುಮಾರ್ ಕರ್ನಾಟಕ ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ ನೇತೃತ್ವದ ಸಭೆಯಲ್ಲಿ ಹುಲ್ಲುಗಾವಲಿನಲ್ಲಿ ದನ ಕರುಗಳನ್ನು ಮೇಯಿಸುವುದರಿಂದ ಕಾಡ್ಗಿಚ್ಚು ಸಂಭವಿಸುತ್ತದೆ ಕಲವೊಮ್ಮೆ ಸೇಡಿಗಾಗಿ ಕಿಚ್ಚು ಹಬ್ಬಿಸಲಾಗುತ್ತದೆ ಎಂಬ ಚರ್ಚೆಗಳಾದವು.
ಆದರೆ ಈ ಸಭೆಯಲ್ಲಿ ಚರ್ಚೆಗೊಳಪಟ್ಟ ಅಂಶಗಳಲ್ಲಿ ಮುಖ್ಯವಾದದ್ದು ಭಾರತದ ಅರಣ್ಯಗಳಲ್ಲಿ ಸಂಭವಿಸುವ ಕಾಡ್ಗಿಚ್ಚು ಸ್ವಾಭಾವಿಕವಾದದ್ದಲ್ಲ, ಮನುಷ್ಯ ನಿರ್ಮಿತ ಎಂಬುದು.
ಬೆಂಕಿ ಹಚ್ಚುವುದರಿಂದ ಲಾಭ ಯಾರಿಗೆ?
ಕುದುರೆಮುಖದ ತಪ್ಪಲಿನಲ್ಲಿ ನೂರಾರು ಮಲೆಕುಡಿಯರ ಕುಟುಂಬಗಳು ಜೀವಿಸುತ್ತಿದೆ. ಈ ಬುಡಕಟ್ಟು ಜನರ ಬದುಕು ನಿತ್ಯ ನರಕ. ಓಡಾಡಲು ರಸ್ತೆಗಳಿಲ್ಲ, ಮಳೆಗಾಲ ಬಂತೆಂದರೆ ಮಕ್ಕಳನ್ನು ಹೊತ್ತು ಹಳ್ಳ ದಾಟಿಸಿ ಶಾಲೆಗೆ ಕಳುಹಿಸುವ ಪರದಾಟ ಜೊತೆಗೆ ಸರ್ಕಸ್ಸಿನಂತೆ ಕಾಣುವ ಸಂಕದ ಮೇಲಿನ ನಡಿಗೆ.
ಕುದುರೆಮುಖ ಕಾಡಿಗೆ ಬೆಂಕಿ ಹಚ್ಚುವುದರಿಂದ ಅಲ್ಲಿನ ಸ್ಥಳೀಯರಿಗೆ, ಪ್ರವಾಸಿಗಳಿಗೆ ಯಾವ ಲಾಭವೂ ಇಲ್ಲ ಬದಲಾಗಿ ಅರಣ್ಯ ಇಲಾಖೆಗೆ ಸರ್ಕಾರಕ್ಕೆ ಈ ಕಾಡ್ಗಿಚ್ಚು ಕೋಟಿ ಲೆಕ್ಕದ ಲಾಭ ತಂದು ಕೊಡುತ್ತದೆ.
ಕುದುರೆಮುಖ ಕಂದಾಯ ಜಾಗದಲ್ಲಿ ತಂಗಿರುವ ಜನವಸತಿಯನ್ನು ಒಕ್ಕಲೆಬ್ಬಿಸುವ ಯೋಚನೆ ಸರ್ಕಾರದ್ದು. 1914 ರಿಂದ 1916 ರ ಅವಧಿಯ ನಡುವೆ ಬ್ರಿಟಿಶ್ ಸರ್ಕಾರ ಮೀಸಲು ಅರಣ್ಯ ಹಾಗೂ ಅಭಯಾರಣ್ಯ ಎಂದು ಘೋಷಣೆ ಮಾಡಿದ ಕಾಡು ಪ್ರದೇಶವವನ್ನು 1987 ರಲ್ಲಿ ಸರ್ಕಾರ ರಾಷ್ಟ್ರೀಯ ಉದ್ಯಾನ ಎಂದು ಘೋಷಿಸಿತು ಜೊತೆಗೆ ಕಂದಾಯ ಜಾಗದ ಕೆಲವು ಭಾಗಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತು ಮಾಡಿತು. ಈ ಜಾಗಗಳಲ್ಲಿ ನೆಲೆಸಿರುವ ಮಲೆಕುಡಿಯರನ್ನು ಇಲ್ಲಿಂದ ಹೊರದಬ್ಬುವ ಯೋಚನೆ ಸರ್ಕಾರಕ್ಕೆ ದಶಕಗಳ ಹಿಂದೆಯೇ ಇತ್ತು. ಅಂದಿನ ದಿನಗಳಲ್ಲಿ ಸರ್ಕಾರದ ಯೋಜನೆಯನ್ನು ಅಡ್ಡಿಪಡಿಸಿದ್ದು ನಕ್ಸಲ್ ಚಳುವಳಿಗಳು.

ಅಂದಿನಿಂದ ಇಂದಿನವರೆಗೂ ನಾಗರೀಕ ಸಮಾಜ ಊಹಿಸಲಾರದ ಅಭಿವೃದ್ದಿ ಕಂಡಿವೆ. ಆದರೆ ಘಟ್ಟದ ತಪ್ಪಲಿನ ಮಲೆಯರ ಬದುಕು ಆರಕ್ಕೆ ಏರದ ಮೂರಕ್ಕೆ ಇಳಿಯದ ಸ್ಥಿತಿಯಲ್ಲಿಯೇ ಇದೆ. ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯುತ್ ಸಂಪರ್ಕವೂ ಇಲ್ಲದೆ ಬಹುಕಾಲ ಕತ್ತಲಲ್ಲೆ ಬದುಕು ಕಳೆದವರು ಈಗ ಈ ಪ್ರದೇಶದಿಂದ ತಮ್ಮನ್ನು ಸ್ಥಳಾಂತಗೊಳಿಸಿ ಎಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಇದುವರೆಗೂ ಹಲವಾರು ಕುಟುಂಬಗಳ ಸ್ಥಳಾಂತರವಾಗಿದೆ.
ಜನರು ತಾವಾಗಿಯೇ ಸ್ಥಳಾಂತರ ಹೊಂದಿದರೆ ಸರ್ಕಾರದ ಮೇಲೆ ಹೊರೆ ಬೀಳದು ಅದಕ್ಕಾಗಿಯೇ ಬೆಂಕಿಯೊಂದಿಗೆ ಆಟಕ್ಕಿಳಿದಿದೆ ಅರಣ್ಯ ಇಲಾಖೆ ಮತ್ತು ಸರ್ಕಾರ ಎಂದು ಜನರು ಆರೋಪಿಸುತ್ತಿದ್ದಾರೆ.
ಸರ್ಕಾರದ ಆದೇಶದ ಮೇರೆಗೆ ಅರಣ್ಯ ಪ್ರದೇಶದಿಂದ ಸ್ಥಳಾಂತರಗೊಂಡವರಿಗೆ ಸರ್ಕಾರ 10 ಎಕರೆ ಜಾಗ ಸೇರಿ ಅವರಿಗೆ ಪುನರ್ವಸತಿಗೆ ಬೇಕಾದ ಸಂಪೂರ್ಣ ಸೌಲಭ್ಯ ಒದಗಿಸಿ ಕೊಡಬೇಕು. ಅದೇ ಜನರು ತಾವು ಸ್ವ ಇಚ್ಛೆಯಿಂದ ಸ್ಥಳಾಂತರಗೊಂಡರೆ ಸ್ವಲ್ಪಮಟ್ಟದ ಪರಿಹಾರ ನೀಡಿ ಕೈ ತೊಳೆದು ಕೊಳ್ಳಬಹುದು ಅದಕ್ಕಾಗಿಯೆ ಹೀಗೆ ಉಪದ್ರವ ನೀಡಿ ನಾವಾಗಿಯೇ ಒಕ್ಕಲೇಳುವಂತೆ ಸರ್ಕಾರ ಸಂಚು ರೂಪಿಸಿದೆ ಎಂದು ಹೇಳುತ್ತಾರೆ ಇಲ್ಲಿನ ಹೋರಾಟಗಾರರು.
ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆಯಂತೆ ಸರ್ಕಾರ ಇವರನ್ನು ಸ್ಥಳಾಂತರಗೊಳಿಸಿದರೆ ಸುಮಾರು 300 ಕೋಟಿ ಅನುದಾನ ಬೇಕಿದೆ ಒಟ್ಟಿಗೆ ಸ್ಥಳಾಂತರ ಮಾಡುವುದು ಅಸಾಧ್ಯವೆನಿಸಿ , ಹಂತ ಹಂತವಾಗಿ ಸ್ಥಳಾಂತರ ಮಾಡುವುದಾಗಿ ಹೇಳಿದದರು. ಇನ್ನು ರಾಜ್ಯ ಸರ್ಕಾರವು ಕೇಂದ್ರದ ಅನುದಾನವನ್ನು ಕಾಯಬೇಕಿದೆ.
ಇತ್ತೀಚಿಗಷ್ಟೆ ದಿ ಹಿಂದೂ ಈ ಕುರಿತು ವರದಿ ಮಾಡಿತ್ತು. ಮೂಲಸೌಲಭ್ಯ ವಂಚಿತ ಮಲೆಕುಡಿಯರ ಬದುಕಿನ ದಾರುಣತೆ ಸರ್ಕಾರದ ನಿರಂತರ ಅಲಕ್ಷ್ಯಕ್ಕೆ ಒಳಗಾಗಿ ಬದುಕಿಗಿಂತ ಸಾವು ಮೇಲೆನ್ನುವ ನಿಲುವಿಗೆ ತಂದಿರಿಸಿದ ವ್ಯವಸ್ಥೆಯ ಕಾಳರೂಪ ಈ ವರದಿ ಬಹಿರಂಗಪಡಿಸಿತ್ತು.
ಹಿಂದೂ ಪತ್ರಿಕೆಯ ವರದಿಗಾರರೊಂದಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡ ಬಾಳಕಡಿ ಗ್ರಾಮದ ಜನರು “ಕರ್ನಾಟಕ ಸರ್ಕಾರ ಕೊಡುವ ಅನ್ನಭಾಗ್ಯದ ಉಚಿತ ಅಕ್ಕಿಯನ್ನು ಮನೆಗೆ ತರಲು 600 ರೂ ಆಟೊ ಬಾಡಿಗೆಗೆ ಕರ್ಚು ಮಾಡಬೇಕು” ಎಂದು ಸ್ಥಳೀಯ ಮಹಿಳೆ ಗೋಳು ತೋಡಿಕೊಂಡಿದ್ದರು.
“ಇಷ್ಟೆಲ್ಲಾ ತೊಂದರೆಗಳ ನಡುವೆ ಅಡಿಕೆಗೆ ಹಿಡಿದ ಹಳದಿ ಚುಕ್ಕೆ ರೋಗ ಫಸಲನ್ನು ಕಸಿದಿದೆ. ಯಾರಾದರು ಖಾಯಿಲೆ ಬಿದ್ದರೆ ಇಲ್ಲಿಂದ ಶೃಂಗೇರಿಯ ಆಸ್ಪತ್ರೆಗೆ ಕರೆದೊಯ್ಯಲು ಒಂದು ತಾಸಿನ ಪ್ರಯಾಣ ಮಾಡಬೇಕಿದೆ. ಸರಿಯಾದ ರಸ್ತೆಗಳಿಲ್ಲ, ವಾಹನ ಸೌಕರ್ಯವಿಲ್ಲ ಉತ್ತಮ ಪರಿಹಾರ ನೀಡಿ ಇಲ್ಲಿಂದ ಸ್ಥಳಾಂತರಗೊಳಿಸಿ” ಎಂಬ ಬಹುಕಾಲದ ಬೇಡಿಕೆಯನ್ನು ಸರ್ಕಾರ ವಿಳಂಬಿಸುತ್ತಿದೆ.
ಸಧ್ಯಕ್ಕೆ ಇಲ್ಲಿ 1382 ಕುಟುಂಬಗಳು ಜೀವನ ಸಾಗಿಸುತ್ತಿವೆ ಇದರಲ್ಲಿ 653 ಕುಟುಂಬಗಳು ತಮ್ಮನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಬೇಡಿಕೆ ಇಟ್ಟಿವೆ.
ಇಲ್ಲಿ ವಾಸಿಸುವ ಗೌಡ್ಲು ಸಮುದಾಯದ ಬಾಳೆಕಡಿ ನಿವಾಸಿಗಳು ನಾವು ಇಲ್ಲಿಂದ ಸ್ಥಳಾಂತರ ಆದಮೇಲೂ ಒಟ್ಟಿಗೆ ನೆಲೆಸುತ್ತೇವೆ ಸರ್ಕಾರ ನಮಗೆ ಕೊಡಮಾಡುವ ಪರಿಹಾರದಲ್ಲಿ ಒಂದೆಡೆ ಸ್ಥಳ ಖರೀದಿಸಿ 12 ಕುಟುಂಬಗಳು ಒಂದೇ ಕಡೆ ವಾಸಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಇದುವರೆಗೂ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿ ಅರಣ್ಯಕ್ಕೆ ಅಂಟಿಕೊಂಡು ಬದುಕುತ್ತಿದ್ದ ಹಲವು ಬುಡಕಟ್ಟು ಸಮುದಾಯದವರನ್ನು ಸರ್ಕಾರ ಒಕ್ಕಲೆಬ್ಬಿಸಿದೆ. ಹಾಗೆ ಒಕ್ಕಲೆಬ್ಬಿಸಿದ ಕಾಡುಗಳಲ್ಲಿ ಇಂದು ರೆಸಾರ್ಟ್‌ಗಳು ದೊಡ್ಡ ದೊಡ್ಡ ಬಂಗಲೆಗಳು ತಲೆ ಎತ್ತಿವೆ. ಸೂಕ್ಷ್ಮವಾಗಿ ಅವಲೋಕಿಸುವುದಾದರೆ ಕಾಡಿನ ಮಕ್ಕಳು ಕಾಡಿಗೆ ಎಂದಿಗೂ ಮುಳುವಾಗಿ ಪರಿಣಮಿಸಿಲ್ಲ ಬದಲಿಗೆ ಸರ್ಕಾರದ ಅರಣ್ಯ ಇಲಾಖೆಯ ಅಪ್ರಸ್ತುತ , ಅವೈಜ್ಞಾನಿಕ ಯೋಜನೆಗಳು ಪಶ್ಚಿಮಘಟ್ಟಕ್ಕೆ ಶಾಪವಾಗಿ ಪರಿಣಮಿಸಿವೆ.
ಸರ್ಕಾರ ಮತ್ತು ಅರಣ್ಯ ಇಲಾಖೆ ಬೆಂಕಿ ಹತ್ತಿಸಿ ಕಾಡು ಬಿಡಿಸುವ ಕೆಲಸ ಮಾಡುತ್ತಿರುವುದು ಸತ್ಯವೇ, ಆದರೆ ಅದಕ್ಕಿಂತ ಅಮಾನವೀಯ ಸಂಗತಿ ಇನ್ನೊಂದಿಲ್ಲ.




