ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದ ಬೇಸತ್ತ ನವ ವಿವಾಹಿತೆಯೋವರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಗೃಹಿಣಿಯನ್ನು ಬಿಂದುಶ್ರೀ(22) ಎಂದು ಗುರುತಿಸಲಾಗಿದ್ದು, ಘಟನೆಯ ಸಂಬಂಧ ಯುವತಿಯ ತಂದೆ ಕೆ.ಬಿ.ದೇವರಾಜು ಎಂಬುವವರು ನಗರ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಗಾಂಧಿನಗರದ ನಿವಾಸಿ ಟೈಲರ್ ವೃತ್ತಿಯ ಕೆ.ಬಿ.ದೇವರಾಜು ಅವರಿಗೆ ಬಿಂಧುಶ್ರೀ ಏಕೈಕ ಪುತ್ರಿ.ಆಕೆಯನ್ನು ಆವಲಹಳ್ಳಿ ಬಳಿಯ ಹಿರಂಡಹಳ್ಳಿ ಗ್ರಾಮದ ನಿವಾಸಿ ಮುನಿರಾಜು ಅವರ ಮಗ ಎಚ್.ಎಂ.ರಾಘವೇಂದ್ರ ಎಂಬಾತನಿಗೆ ಕಳೆದ ಫೆಬ್ರವರಿ 21ರಂದು ಕೈವಾರದಲ್ಲಿ ಮದುವೆ ಮಾಡಿಕೊಡಲಾಗಿತ್ತು.
ಮದುವೆ ಸಮಯದಲ್ಲಿ 220 ಗ್ರಾಂ ಚಿನ್ನದ ಒಡವೆಗಳನ್ನು ನೀಡಲಾಗಿತ್ತು. ಮದುವೆಯ ದಿನವೇ ಮಗನಿಗೆ 100 ಗ್ರಾಂ ಒಡವೆ ವರದಕ್ಷಿಣೆಯಾಗಿ ನೀಡಬೇಕು ಎಂದು ರಾಘವೇಂದ್ರ ತಾಯಿ ಲತಾ ಗಲಾಟೆ ಮಾಡಿದ್ದರು. ಕೊನೆಗೆ 60 ಗ್ರಾಂ ತೂಕದ ಬ್ರಾಸ್ ಲೈಟ್, ಕತ್ತಿನ ಚೈನು ಹಾಗೂ ಒಂದು ಉಂಗುರ ನೀಡಿದ್ದೆವು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಾವನ ಮನೆಯಲ್ಲಿ 2 ತಿಂಗಳು ಚೆನ್ನಾಗಿ ನೋಡಿಕೊಂಡಿದ್ದರು. ನಂತರ ನನ್ನ ಮಗಳು ಬಿ.ಕಾಂ ಅಂತಿಮ ಸೆಮಿಸ್ಟರ್ ಪರೀಕ್ಷೆ ಬರೆಯಲು ನಮ್ಮ ಮನೆಗೆ ಬಂದಳು. ಪರೀಕ್ಷೆ ಮುಗುಸಿಕೊಂಡು ವಾಪಸ್ ಬರುವಾಗ 20 ಲಕ್ಷ ರೂ ಹಣ ಹಾಗೂ ಒಂದು ಕಾರನ್ನು ವರದಕ್ಷಿಣೆಯನ್ನಾಗಿ ತೆಗೆದುಕೊಂಡು ಬಾ ಎಂದು ಗಂಡ, ಅತ್ತೆ,ಮಾವ ಎಲ್ಲರೂ ಸೇರಿ ಹೇಳಿ ಕಳುಹಿಸಿದ್ದರು. ಮಗಳು ಗಂಡನ ಮನೆಗೆ ವಾಪಸ್ ಹೋದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಏಕೆ ಹಣ ತೆಗೆದುಕೊಂಡು ಬಂದಿಲ್ಲ. ನೀನು ಒಬ್ಬಳೇ ಮಗಳು ಆಸ್ತಿಯನ್ನು ಮಾರಿ ತೆಗೆದುಕೊಂಡು ಬರಬೇಕಾಗಿತ್ತು. ವರದಕ್ಷಿಣೆ ತರದಿದ್ದರೆ ನೀನು ನಮ್ಮ ಮನೆಗೆ ಬರಬೇಡ. ಬಂದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕಾಲೇಜಿನ ತರಗತಿ ಮುಕ್ತಾಯವಾದ ನಂತರ ಆಗಸ್ಟ್ 7 ರಂದು ನನ್ನ ಹೆಂಡತಿ ಮಗಳನ್ನು ಕರೆದುಕೊಂಡು ಹೋಗಿ ಗಂಡನ ಮನೆಗೆ ಬಿಟ್ಟು ಬಂದರು. ಆಗಲೂ ಗಂಡ, ಅತ್ತೆ, ಮಾವ, ಮೈದುನ ಎಲ್ಲರೂ ಸೇರಿ ಕಿರುಕುಳ ನೀಡಿದ್ದಾರೆ. ಹಣ ತರುವವರೆಗೂ ನಮ್ಮ ಮನೆಯಲ್ಲಿ ಇರುವುದು ಬೇಡ ಎಂದು ಆಗಸ್ಟ್ 10 ರಂದು ಲಗ್ಗೇಜ್ ಸಮೇತವಾಗಿ ಮನೆಗೆ ವಾಪಸ್ ಕಳುಹಿಸಿದ್ದರು. ಸೆಪ್ಟೆಂಬರ್ 11ರಂದು ನಾನು, ನನ್ನ ಹೆಂಡತಿ ಮಗಳನ್ನು ಮತ್ತೆ ಕರೆದುಕೊಂಡು ಹೋದರೂ, ಅವರು ನಮ್ಮನ್ನು ಮನೆಗೆ ಸೇರಿಸಲಿಲ್ಲ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಗಲಾಟೆ ಮಾಡಿದರು.
ಸೆಪ್ಟೆಂಬರ್ 12 ರಂದು ಆವಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದೆವು. ಪೊಲೀಸರು ಅಳಿಯ, ಮಾವ, ಅತ್ತೆಯನ್ನು ಕರೆಸಿ ವಿಚಾರಣೆ ಮಾಡಿದರು. ನಾವೇ ಸಮಸ್ಯೆಯನ್ನು ಬಗೆಹರಿಸಿಕೊಂಡು ನಾಳೆ ಬರುವುದಾಗಿ ಪೊಲೀಸರಿಗೆ ತಿಳಿಸಿದರು. ಹೊರಗಡೆ ಬಂದು ಮತ್ತೆ ನಮ್ಮ ಮೇಲೆ ಆವಾಝ್, ಹಾಕಿ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಗಲಾಟೆ ಮಾಡಿದರು. ನಾವು ಚಿಂತಾಮಣಿಗೆ ವಾಪಸ್ ಬಂದೆವು.
ಈ ಎಲ್ಲ ಘಟನೆಗಳಿಂದ ಮನನೊಂದು ನನ್ನ ಮಗಳು ಬಿಂದುಶ್ರೀ ಶನಿವಾರ ಸಂಜೆ ನಮ್ಮನ್ನು ದೇವಸ್ಥಾನಕ್ಕೆ ಕಳುಹಿಸಿ, ಕೊಠಡಿಯ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾಳೆ. ನಾವು ವಾಪಸ್ ಬಂದು ನೋಡಿ ಗಾಬರಿಯಿಂದ ಕೂಗಿಕೊಂಡೆವು. ಸುತ್ತಮುತ್ತಲಿನವರು ಬಂದು ಮಗಳನ್ನು ನೇಣಿನಿಂದ ಕೆಳಕ್ಕೆ ಇಳಿಸಿ, ಕೂಡಲೇ ಅಂಬ್ಯುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಪರೀಕ್ಷೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು.
ಇದನ್ನು ಓದಿದ್ದೀರಾ? ಬಂಟ್ವಾಳ | ಪ್ರಚೋದನಾಕಾರಿ ಹೇಳಿಕೆ ಖಂಡಿಸಿ ಸಂಘಪರಿವಾರ ಪ್ರತಿಭಟನೆ: ಪರಿಸ್ಥಿತಿ ಶಾಂತ; ಬಿಗಿ ಬಂದೋಬಸ್ತ್
ಮಗಳ ಸಾವಿಗೆ ಗಂಡ ರಾಘವೇಂದ್ರ, ಮಾವ ಮುನಿರಾಜು,ಅತ್ತೆ ಲತಾ, ಮೈದುನ ನರಸಿಂಹಯ್ಯ ಅವರ ವರದಕ್ಷಿಣೆ ಕಿರುಕುಳವೇ ಕಾರಣ. ಅವರುಗಳ ವಿರುದ್ಧ ಕಾನೂನಿನಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಚಿಂತಾಮಣಿ ನಗರಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
