ಆಗಸ್ಟ್ 9 ರಂದು ಪಶ್ಚಿಮ ಬಂಗಾಳದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಆಗಸ್ಟ್ 17 ಶನಿವಾರ ಬೆಳಗ್ಗೆ 6 ರಿಂದ ಆಗಸ್ಟ್ 18 ಭಾನುವಾರದಂದು ಬೆಳಗ್ಗೆ 6 ಗಂಟೆವರಿಗೆ ಖಾಸಗಿ ಆಸ್ಪತ್ರೆಗಳು ಬಂದ್ ಮಾಡುವುದಾಗಿ ಚಿಂತಾಮಣಿಯ ಐ.ಎಂ.ಎ. ಅಧ್ಯಕ್ಷ ಡಾ.ಪಾಷಾ ತಿಳಿಸಿದ್ದಾರೆ.
ಅತ್ಯಾಚಾರ ಹಾಗೂ ಕೊಲೆಯಾದ ಕೋಲ್ಕತ್ತಾದ ಟ್ರೈನಿ ವೈದ್ಯೆಗೆ ನ್ಯಾಯ ದೊರಕಿಸುವ ಹಿನ್ನೆಲೆಯಲ್ಲಿ ಈ ಬಂದ್ಗೆ ಕರೆ ನೀಡಲಾಗಿದೆ. ಬಂದ್ನ ಸಮಯದಲ್ಲಿ ಒಪಿಡಿ ಹಾಗೂ ಸಾಮಾನ್ಯ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುವುದಿಲ್ಲ. ದೇಶಾದ್ಯಂತ ಆಧುನಿಕ ಔಷಧ ವೈದ್ಯರ ಸೇವೆಯನ್ನು ಹಿಂತೆಗೆದುಕೊಳ್ಳಲಾಗುತ್ತದೆ. ಐಎಂಎ ತಿಳಿಸಿದೆ.
ಐ.ಎಂ.ಎ. ಕಾರ್ಯದರ್ಶಿ ಡಾ. ಶ್ರೀಧರ್ ಮಾತನಾಡಿ, “ಪಶ್ಚಿಮ ಬಂಗಾಳದ ಸರ್ಕಾರಿ ಆರ್.ಜಿ.ಕಾರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಕೊಲೆಯನ್ನು ನಡೆಸಿದ್ದಲ್ಲದೆ ಕಿಡಿಗೇಡಿಗಳು ಆಸ್ಪತ್ರೆಯ ಆವರಣಕ್ಕೆ ನುಗ್ಗಿ ಆಸ್ಪತ್ರೆಯ ಕಟ್ಟಡ, ತುರ್ತು ವಿಭಾಗ, ಶುಶ್ರೂಷೆ ಕೇಂದ್ರ, ವೈದ್ಯಕೀಯ ಯಂತ್ರೋಪಕರಣ, ಪೀಠೋಕರಣ, ಔಷಧ ಕೇಂದ್ರ, ಹೊರರೋಗಿ ವಿಭಾಗ ಹಾಗೂ ಇತರ ವೈದ್ಯಕೀಯ ಸಲಕರಣೆಗಳನ್ನು ಧ್ವಂಸಗೊಳಿಸಿದ್ದಾರೆ. ಹಿಂಸಾಚಾರ ಹಾಗೂ ದೃಷ್ಕೃತ್ಯಗಳನ್ನು ನಡೆಸಿದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಚಿಂತಾಮಣಿ ತಾಲ್ಲೂಕು ಐ.ಎಂ.ಎ. ವತಿಯಿಂದ 24 ಗಂಟೆಗಳ ಧರಣಿಯನ್ನು ಹಮ್ಮಿಕೊಂಡಿದ್ದೇವೆ. ಆಗಸ್ಟ್ 17 ಶನಿವಾರ ಬೆಳಿಗ್ಗೆ 6 ರಿಂದ ಆಗಸ್ಟ್ 18 ಭಾನುವಾರದಂದು ಬೆಳಿಗ್ಗೆ 6 ಗಂಟೆವರಿಗೆ ಖಾಸಗಿ ಆಸ್ಪತ್ರೆ, ಆಯುರ್ವೇದ, ಡೆಂಟಲ್ ಡಾಕ್ಟರ್, ಕ್ಲೀನಿಕ್, ಓ.ಪಿ.ಡಿ. ಲ್ಯಾಬ್ ಸೇವೆಗಳು ಇರುವುದಿಲ್ಲ ಆದರೆ, ಅಪಘಾತ ಅಥವಾ ತುರ್ತು ಚಿಕಿತ್ಸೆ, ಪ್ರಾಣಾಪಾಯ ಸಂದರ್ಭಗಳಲ್ಲಿ ಚಿಕಿತ್ಸೆ ನೀಡಲು ಕೆಲವು ಆಸ್ಪತ್ರೆಗಳು ತೆರೆದಿರುತ್ತದೆ” ಎಂದು ತಿಳಿಸಿದರು.
“ಹಿಂಸಾಚಾರ ಮತ್ತು ದುಷ್ಕೃತ್ಯಗಳನ್ನು ಡಾಕ್ಟರ್ ಅಥವಾ ಆಸ್ಪತ್ರೆ, ಕ್ಲೀನಿಕ್ಗಳ ಮೇಲೆ ನಡೆಸುವವರಿಗೆ ತಕ್ಕ ಶಿಕ್ಷೆಯನ್ನು ನೀಡುವ ನಿಯಮಾವಳಿಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಧರಣಿ ನಿರತ ಡಾಕ್ಟರ್ ಹಾಗು ಸಿಬ್ಬಂದಿಗಳು ಬೆಳಿಗ್ಗೆ 10 ಗಂಟೆಗೆ ಪ್ರವಾಸಿ ಮಂದಿರದಿಂದ ಜೋಡಿ ರಸ್ತೆಯ ಪಿ.ಸಿ.ಆರ್.ಕಾಂಪ್ಲೆಕ್ಸ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ತಾಲ್ಲೂಕು ಕಛೇರಿಯಲ್ಲಿ ತಹಶೀಲ್ದಾರ್ ರವರಿಗೆ ಮನವಿ ಪತ್ರವನ್ನು ಸಲ್ಲಿಸುವುದಾಗಿ ತಿಳಿಸಿದರು.
