ಕೇಂದ್ರ ಸರ್ಕಾರದ ಹೊಸ ನಿಯಮಗಳಿಂದ ಮನರೇಗಾ ಕಾರ್ಮಿಕರ ಕೆಲಸದ ಹಕ್ಕನ್ನು ದಮನಗೊಳಿಸುತ್ತಿದೆ. ಮನರೇಗಾದಲ್ಲಿ ನೂರು ದಿನಗಳ ಬದಲಿಗೆ 200 ದಿನಗಳ ದಿನಗೂಲಿ ಕೆಲಸದ ಖಾತರಿ ಮತ್ತು ಸಮರ್ಪಕ ಅನುಷ್ಠಾನವಾಗಬೇಕು ಎಂದು ಒತ್ತಾಯಿಸಿ ಗ್ರಾಮೀಣ ಕೂಲಿಕಾರರ ಸಂಘಟನೆ ಚಿತ್ರದುರ್ಗ ಜಿಲ್ಲಾ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಬಳಿಕ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, “ವಲಸೆ ತಪ್ಪಿಸಲು ಮನರೇಗಾ ಅಡಿಯಲ್ಲಿ ಗ್ರಾಮೀಣ ಭಾಗದ ಕಾರ್ಮಿಕರಿಗೆ ನೂರು ದಿನಗಳ ಕೆಲಸ ನೀಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಹೊಸ ನೀತಿಗಳ ಬದಲಾವಣೆಯಿಂದಾಗಿ ಕಾರ್ಮಿಕರಿಗೆ ಸರಿಯಾಗಿ 100 ದಿನಗಳ ಖಾತ್ರಿ ಕೆಲಸವೂ ಸಿಗುತ್ತಿಲ್ಲ. ಉದ್ಯೋಗ ಖಾತ್ರಿಗೆ ಕೇಂದ್ರ ಸರ್ಕಾರ ಪ್ರತಿ ವರ್ಷ ಬಜೆಟ್‌ನಲ್ಲಿ ಹಣ ಕಡಿಮೆ ಮಾಡುತ್ತ ಬರುತ್ತಿದ್ದು, ಕಾರ್ಮಿಕರ ಕೆಲಸದ ಹಕ್ಕನ್ನು ಕಿತ್ತುಕೊಳ್ಳುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಮಕ್ಕಳು ಮತ್ತು ಮಹಿಳೆಯರು ಅಪೌಷ್ಟಿಕತೆ, ದೌರ್ಬಲ್ಯದಿಂದ ಬಳಲುತ್ತಿದ್ದು, ದಿನಬಳಕೆ ಸಾಮಗ್ರಿಗಳು ಗಗನಕ್ಕೇರಿವೆ. ಅವುಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲು ಕ್ರಮ ಕೈಗೊಳ್ಳಬೇಕು. ಅಶಕ್ತ, ವಿಧವೆ ಮಹಿಳೆಯರಿಗೆ ಪ್ರತ್ಯೇಕ ನ್ಯಾಯಬೆಲೆ ಪಡಿತರ ಚೀಟಿ ವಿತರಣೆ ಮಾಡಬೇಕು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರ ರಾಗಿ, ಜೋಳ, ತೊಗರಿ ಬೇಳೆ ಹಾಗೂ ಎಣ್ಣೆಯಂತಹ ಪದಾರ್ಥಗಳನ್ನು ನ್ಯಾಯಬೆಲೆ ಅಂಗಡಿಯ ಮೂಲಕ ವಿತರಿಸಬೇಕು. ಹೊಸ ರೇಷನ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಸಲ್ಲಿಸಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, “ಕೇಂದ್ರ ಸರ್ಕಾರ ಮನರೇಗಾಕ್ಕೆ ತಮ್ಮ ಬಜೆಟ್‌ನಲ್ಲಿ ₹2 ಲಕ್ಷ ಕೋಟಿ ಹಣ ಮೀಸಲಿಡಬೇಕು. ಈ ವರ್ಷ ಕೆಲಸ ಮಾಡಿದ ಕಾರ್ಮಿಕರ ಬಾಕಿ ಕೂಲಿ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಒಂದು ಕುಟುಂಬಕ್ಕೆ 200 ದಿನಗಳ ಕೆಲಸದ ಉದ್ಯೋಗ ಮತ್ತು ಪ್ರತಿದಿನದ ಕೂಲಿಯನ್ನು ₹600ಕ್ಕೆ ಏರಿಸಬೇಕು. ಕೂಲಿ ಕೆಲಸದ ಸಮಯದಲ್ಲಿ ಮರಣ ಹೊಂದಿದರೆ ಪರಿಹಾರವನ್ನು ₹5 ಲಕ್ಷಗಳಿಗೆ ಏರಿಸಬೇಕು ಎನ್ನುವ ಬೇಡಿಕೆಗಳೊಂದಿಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ಕಾರ್ಮಿಕರು ಪ್ರತಿಭಟನೆ ನೆಡೆಸುತ್ತಿದ್ದು, ಕೇಂದ್ರ ಸರ್ಕಾರ ಈ ಬೇಡಿಕೆಗಳನ್ನು ಕೂಡಲೇ ಕಾರ್ಯಗತಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ಹೆಚ್ಚಿನ ಬಿಸಿಯನ್ನು ಎದುರಿಸಬೇಕಾಗುತ್ತದೆ” ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ ಸಹಕಾರಿ ಬ್ಯಾಂಕ್‌ಗೆ ನಬಾರ್ಡ್ ಅವಶ್ಯಕತೆ ಇಲ್ಲ: ಆರ್ ಎಂ ಮಂಜುನಾಥ ಗೌಡ
ಪ್ರತಿಭಟನೆಯಲ್ಲಿ ಗ್ರಾಮೀಣ ಕೂಲಿಕಾರರ ಸಂಘಟನೆಯ ಪದಾಧಿಕಾರಿಗಳಾದ ತೇಜೇಶ್ವರಿ, ಗಂಗಮ್ಮ ಅನುಸೂಯಮ್ಮ, ಮಂಜಪ್ಪ, ಪುಟ್ಟಮ್ಮ, ಪಾಲಮ್ಮ, ಬಸವರಾಜ್, ಆನಂದ, ನೇತ್ರಾವತಿ, ವಿನುತ, ಭಾರತಿ, ಮಂಜಪ್ಪ, ಶಿವಣ್ಣ, ಶಶಿಕುಮಾರ, ರಾಜಪ್ಪ, ಸುಲೋಚನಮ್ಮ, ನಾಗಪ್ಪ, ನಿರ್ಮಲ, ದುರುಗಪ್ಪ ಮತ್ತು ಇತರ ಕಾರ್ಯಕರ್ತರು ಇದ್ದರು.