ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದಲ್ಲಿ ಭಾನುವಾರ ಡ್ರೋನ್ ಮಾದರಿಯ ವಿಮಾನವೊಂದು ನೆಲಕ್ಕೆ ಉರುಳಿದೆ. ಚಳ್ಳಕೆರೆಯ ಡಿಆರ್‌ಡಿಒ ಸಂಸ್ಥೆ ತಯಾರು ಮಾಡಿರುವ ಚಾಲಕ ರಹಿತ ಡ್ರೋನ್ ಅನ್ನು ಪರಿಕ್ಷಾರ್ಥವಾಗಿ ಹಾರಾಟಕ್ಕೆ ಬಿಟ್ಟಿದ್ದು, ಅದು ನಿಯಂತ್ರಣ ತಪ್ಪಿ ವದ್ದಿಕೆರೆ ಗ್ರಾಮದ ಜಮೀನಿನಲ್ಲಿ ಬಿದ್ದಿದೆ.
ಮಾನವ ರಹಿತ ವಿಮಾನ ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇಲಾಖೆ ಹಾಗೂ ಡಿಆರ್‌ಡಿಒ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯಿರುವ ಡಿಆರ್‌ಡಿಒ ಸಿದ್ಧಪಡಿಸಿದ್ದ ಪೈಲಟ್ ರಹಿತ ವಿಮಾನ ‘ತಪಸ್’ ಪತನಗೊಂಡಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸಿದ್ಧಪಡಿಸಿದ್ಧ ಯುದ್ಧ ವಿಮಾನ ನಾಯಕನಹಟ್ಟಿ ಸಮೀಪದ ಕುದಾಪುರ ವಾಯುನೆಲೆಯಿಂದ ಭಾನುವಾರ ಬೆಳಿಗ್ಗೆ ಹಾರಾಟ ಆರಂಭಿಸಿತ್ತು. ನಿಯಂತ್ರಣ ತಪ್ಪಿ ಸ್ಥಳೀಯ ರೈತ ಸಿದ್ದಪ್ಪ ಎಂಬುವವರ ಜಮೀನಿನಲ್ಲಿ ಧರೆಗುರುಳಿದೆ.
ಈ ಸುದ್ದಿ ಓದಿದ್ದೀರಾ? ರಾಮನಗರ | ನಿವೃತ್ತ ಎಎಸ್‌ಐಗೆ ಮಾರಕಾಸ್ತ್ರದಿಂದ ಹಲ್ಲೆ; ಆರೋಪಿಗಳು ಪರಾರಿ
ಚಳ್ಳಕೆರೆಯಲ್ಲಿ ಮಾನವ ರಹಿತ ಯುದ್ಧ ವಿಮಾನ ಪರೀಕ್ಷಾ ಕೇಂದ್ರದಿಂದ 2019 ಸೆಪ್ಟೆಂಬರ್ 17ರಂದು ರುಸ್ತುಂ-2 ಪರೀಕ್ಷಾರ್ಥ ಹಾರಾಟ ನಡೆಸಲಾಗಿತ್ತು. ಈ ವೈಮಾನಿಕ ವಾಹನ ಜೋಡಿ ಚಿಕ್ಕನಹಳ್ಳಿಯ ಬಳಿ ಪತನಗೊಂಡಿತ್ತು. ಇದೀಗ ʼತಪಸ್ʼ ಎಂಬ ಚಾಲಕ ರಹಿತ ಡ್ರೋನ್ ಪತನವಾಗಿದೆ. ವಿಮಾನದ ರೀತಿಯ ಪಳೆಯುಳಿಕೆಗಳನ್ನು ಕಂಡ ಗ್ರಾಮಸ್ಥರು ಕೆಲವು ಸಮಯ ಪೈಲಟ್‌ಗಾಗಿ ಹುಡುಕಾಟ ನಡೆಸಿದರು.
ಸುತ್ತಮುತ್ತಲಿನನ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿ ಡ್ರೋನ್ ಅವಶೇಷಗಳನ್ನು ಕುತೂಹಲದಿಂದ ವೀಕ್ಷಿಸಿದರು. ಎಂಜಿನ್ ಭಾಗ, ರೆಕ್ಕೆಗಳು, ಡ್ರೋನ್‌ನ ಹಿಂಬದಿಯ ಭಾಗವು ಬೇರೆ ಸ್ಥಳಗಳಲ್ಲಿ ಮುರಿದು ಬಿದ್ದಿದೆ. ಡಿಆರ್‌ಡಿಒ ಅಧಿಕಾರಿಗಳು ಸ್ಥಳಕ್ಕೆ ಬರುತ್ತಿದ್ದು, ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.