ರೈತರ ಮೋಟಾರ್ ಪಂಪ್‌ಗಳಿಗೆ ಆಧಾರ್ ಜೋಡಣೆ ಮಾಡಿಸಬೇಕೆಂಬ ರಾಜ್ಯ ಸರಕಾರದ ನಿಯಮ ಖಂಡಿಸಿ ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ರೈತ ನಾಯಕ ಪುಟ್ಟಣ್ಣಯ್ಯ ಬಣದ ನೂರಾರು ರೈತರು ಬೈಕ್ ರ್‍ಯಾಲಿ ಮಾಡಿ, ನಂತರ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಸ್ಕಾಂ ಎಇಇ ಜಯಣ್ಣ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಚಿತ್ರದುರ್ಗ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಪ್ರಭು, “ರಾಜ್ಯ ಸರಕಾರ ಮತ್ತು ಬೆಸ್ಕಾಂ ಅಧಿಕಾರಿಗಳು ರೈತರ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಮಾಡುವ ಮೂಲಕ ರೈತರಿಗೆ ಘೋರ ಅನ್ಯಾಯ ಮಾಡುತ್ತಿದೆ. ಇದನ್ನು ಈ ಕೂಡಲೇ ಕೈಬಿಡಲು ಆದೇಶಿಸಬೇಕು” ಎಂದು ಒತ್ತಾಯಿಸಿದರು.
“ಕಳೆದ ವರ್ಷ ತೀವ್ರ ಬರಗಾಲ ಅನುಭವಿಸಿ ರೈತರು ಆರ್ಥಿಕವಾಗಿ ಸಂಕಷ್ಟ ಅನುಭವಿಸಿದ್ದಾರೆ. ಅದಕ್ಕೆ ಬರ ಪರಿಹಾರ ನೀಡದ ಪ್ರಸ್ತುತ ರಾಜ್ಯ ಸರಕಾರ, ಗಾಯದ ಮೇಲೆ ಬರೆ ಎಂಬಂತೆ ಬರದಿಂದ ಬಸವಳಿದ ರೈತರಿಗೆ ಈಗ ಆಧಾರ್ ಜೋಡಣೆ ಮಾಡುವ ಮೂಲಕ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ರೈತ ವಿರೋಧಿ ಸರಕಾರ ಎಂಬುದಕ್ಕೆ ಇದು ಉದಾಹರಣೆಯಾಗಿದೆ” ಎಂದು ಆಕ್ರೋಶ ಹೊರಹಾಕಿದರು.
ರೈತರು ಬೆಳೆದ ಬೆಳೆಗಳಿಗೆ ಎಂಎಸ್‌ಪಿ ಕಾನೂನು ಜಾರಿಗೆ ತಂದು, ನಿಗದಿತ ದರ ಮಾಡಿ ನಂತರ ಆಧಾರ್ ಜೋಡಣೆ ಅಥವಾ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಲಿ. ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರಕಾರ ರೈತರಿಗೆ ಕುತ್ತಿಗೆ ಹಿಸುಕುವ ಕಾರ್ಯ ಮಾಡುತ್ತಿರುವುದು ಸರಿಯಲ್ಲ. ವಿದ್ಯುತ್ ವಿಷಯದಲ್ಲಿ ಹಿಂದಿನ ಸರಕಾರಗಳು ಹೇಗೆ ರೈತರನ್ನು ನಡೆಸಿಕೊಳ್ಳುತ್ತಿದ್ದವೋ ಹಾಗೆ ನಡೆಸಿಕೊಳ್ಳಬೇಕು. ಹಿಂದಿನ ಯಥಾಸ್ಥಿತಿ ಮುಂದುವರಿಯಬೇಕು ಎಂದು ಆಗ್ರಹಿಸಿದರು.
ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಮಾಡುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಸಂಯುಕ್ತ ಕಿಸಾನ್ ಮೋರ್ಚಾದಿಂದ ಸಂಸದ ರಾಧಾಕೃಷ್ಣ ದೊಡ್ಡಮನಿಗೆ ಮನವಿ
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಎಂ.ಬಸವರಾಜ್, ಎಂ.ಬಿ.ಶಿವರಾಜ್ ಪಾಟೀಲ್, ರವಿಕುಮಾರ್, ಶಂಭುಲಿಂಗಪ್ಪ, ಎಸ್.ಎಸ್.ಶ್ರೀನಿವಾಸ್ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.