ತಾಲೂಕಿನ ವಿವಿಧ ಇಲಾಖೆಗಳಲ್ಲಿ ಮಿತಿಮೀರಿರುವ ಭ್ರಷ್ಟಾಚಾರ ಮತ್ತು ಅಧಿಕಾರಿಗಳ ನಿರ್ಲಕ್ಷತನ ವಿರೋಧಿಸಿ ವಿವಿಧ ಇಲಾಖೆಗಳಿಗೆ ಕ್ರಮ ಕೈಗೊಳ್ಳಲು ಪತ್ರ ಬರೆದಿದ್ದು, ಇದಕ್ಕೆ ಸ್ಪಂದಿಸದ ಸರ್ಕಾರದ ಮತ್ತು ಇಲಾಖೆಗಳ ವಿರುದ್ಧ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಮುಖಂಡ ಕೆ ಟಿ ತಿಪ್ಪೇಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ತಾಲೂಕು ಕಚೇರಿ ಮುಂಭಾಗದಲ್ಲಿ ನವೆಂಬರ್ 13ರಿಂದ ಪ್ರಾರಂಭವಾಗಿರುವ ಅನಿರ್ದಿಷ್ಟಾವಧಿಯ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ತಾಲೂಕಿನಲ್ಲಿ ಕಂದಾಯ, ನೀರಾವರಿ, ಕೃಷಿ, ವಿದ್ಯುತ್ ಸೇರಿದಂತೆ ಹಲವು ಇಲಾಖೆಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಅಧಿಕಾರಿಗಳು ರೈತರ, ಸಾರ್ವಜನಿಕರ ಕೆಲಸಕ್ಕೆ ಸ್ಪಂದಿಸುತ್ತಿಲ್ಲ, ಲಂಚದ ಬೇಡಿಕೆಗಳು ಮಿತಿಮೀರಿದೆ. ಇದರಿಂದಾಗಿ ಸಾಮಾನ್ಯ ಜನರು ಮತ್ತು ರೈತರು ರೋಸಿ ಹೋಗಿದ್ದಾರೆ” ಎಂದು ಕಿಡಿಕಾರಿದರು.
ಈ ಬಗ್ಗೆ ಒಂಭತ್ತು ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಕ್ರಮ ಕೈಗೊಳ್ಳಲು ರೈತ ಸಂಘದ ವತಿಯಿಂದ ಮನವಿ ನೀಡಿ ಒತ್ತಾಯಿಸಲಾಗಿತ್ತು. ಆದರೆ ಯಾವುದೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದೆ ನಿರ್ಲಕ್ಷಿತನ ತೋರಿ ಯಾವುದೇ ಕ್ರಮ ಕೈಗೊಂಡಿಲ್ಲ. ಅವರ ನಿರ್ಲಕ್ಷತನದ ವಿರುದ್ಧ ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳಲು ಒಂಬತ್ತು ಇಲಾಖೆಗಳ ಸಚಿವರು ಧರಣಿಯ ಸ್ಥಳಕ್ಕೆ ಬಂದು ನಮ್ಮ ಮನವಿ ಆಲಿಸಿ, ಕ್ರಮ ಕೈಗೊಳ್ಳುವವರೆಗೂ ನಾವು ಅನಿರ್ದಿಷ್ಟಾವಧಿ ಧರಣಿಯನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
“ಮೂವತ್ತು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರ ಜಮೀನುಗಳಿಗೆ ಹಕ್ಕುಪತ್ರಕ್ಕೆ ಒತ್ತಾಯಿಸಿ, ಪಿ ಎನ್ ಸಿ ಕಂಪನಿಯು ಕೃಷಿ ಭೂಮಿಯಲ್ಲಿ ಅಕ್ರಮವಾಗಿ 8 ರಿಂದ 10 ಅಡಿವರೆಗೆ ಗುಂಡಿಗಳನ್ನು ತೋಡಿ ಮಣ್ಣು ಸಾಗಿಸಿರುವ ಬಗ್ಗೆ, ಅರಣ್ಯ ಇಲಾಖೆಯ ಗಿಡ ನೆಡುವ ಕಾರ್ಯಕ್ರಮದ ವೈಫಲ್ಯದ ಹಾಗೂ ತಪ್ಪು ಲೆಕ್ಕದ ಬಗ್ಗೆ, ಭದ್ರಾ ಮೇಲ್ದಂಡೆ ಯೋಜನೆಯ ಹನಿ ನೀರಾವರಿಯ ಅಕ್ರಮ ಮತ್ತು ಕಳಪೆ ಕಾಮಗಾರಿ ಬಗ್ಗೆ , ತೋಟಗಾರಿಕೆ ಇಲಾಖೆಯ ಅಕ್ರಮಗಳು ಮತ್ತು ವಿದ್ಯುತ್ ಇಲಾಖೆಯ ವ್ಯಾಪಕ ಭ್ರಷ್ಟಾಚಾರ, ಅಕ್ರಮ ಸಕ್ರಮ ಯೋಜನೆಯಲ್ಲಿ ಕಾರ್ಯದೇಶ ಪಡೆಯದೆ ಕೆಲಸ ನಿರ್ವಹಿಸಿರುವುದು, ಮತ್ತು ಕೆಲಸ ನಿರ್ವಹಿಸದೆ ಹಣ ಪಡೆದಿರುವುದು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ತನಿಖೆಗೆ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತೇವೆ” ಎಂದರು.
ಇದನ್ನು ಓದಿದ್ದೀರಾ? ಮೈಸೂರು | ನ.15 ರಿಂದ 25ರವರೆಗೆ ರೈತ, ಕಾರ್ಮಿಕ ವಿರೋಧಿ ಕಾಯ್ದೆ ವಿರೋಧಿಸಿ ಪ್ರತಿಭಟನೆ: ಬಡಗಲಪುರ ನಾಗೇಂದ್ರ
ಪ್ರತಿಭಟನೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರಾದ ಸಿದ್ದರಾಮಣ್ಣ , ಕಸವನಹಳ್ಳಿ ರಮೇಶ್ ,ಆರ್ ಕೆ ಗೌಡ, ಹರಳೀಕೇರೆ ತಿಪ್ಪೇಸ್ವಾಮಿ, ರಂಗಸ್ವಾಮಿ, ತಿಮ್ಮಾರೆಡ್ಡಿ, ವಿ ಆರ್ ರಂಗಸ್ವಾಮಿ, ತಿಮ್ಮಣ್ಣ, ಲೋಕಣ್ಣ, ಮಂಜುನಾಥ್, ತಿಮ್ಮರಾಯ, ರುದ್ರಪ್ಪ, ಚಿಕ್ಕಣ್ಣ ಹಾಗೂ ಇತರ ರೈತರು ಭಾಗವಹಿಸಿದ್ದಾರೆ.
