ಸರ್ಕಾರ ಪತ್ರಿಕಾರಂಗವನ್ನು ನಾಲ್ಕನೇ ಅಂಗವೆಂದು ಗುರುತಿಸಿದೆ. ಆದರೆ ಮನೆ, ಮನೆಗೆ ಪತ್ರಿಕೆಗಳನ್ನು ವಿತರಣೆ ಮಾಡುವವರನ್ನು ನಿರ್ಲಕ್ಷ್ಯ ಮಾಡಿತ್ತು. ಪತ್ರಿಕಾ ವಿತರಕರ ಸಂಘಟನೆಯ ಹೋರಾಟಕ್ಕೆ ಇದೀಗ ಸರ್ಕಾರ ಸ್ಪಂದನೆ ನೀಡಿದ್ದು, ಈ ಶ್ರಮದಲ್ಲಿ ಅರ್ಜಿ ಹಾಕಲು ಅನುಮತಿ ನೀಡಿದೆ ಎಂದು ಪತ್ರಿಕಾ ವಿತರಕರ ರಾಜ್ಯಾಧ್ಯಕ್ಷ ಶಂಭುಲಿಂಗ ಹೇಳಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ನಮಗೆ ಯಾವುದೇ ರೀತಿಯ ಸೌಲಭ್ಯಗಳು ಸಿಕ್ಕಿಲ್ಲ. ಕೋವಿಡ್ ಸಮಯದಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸಿದ್ದು, ಹಲವಾರು ವಿತರಕರು ಕೋವಿಡ್‌ನಿಂದ ಜೀವ ಕಳೆದುಕೊಳ್ಳಬೇಕಾಯಿತು. ಈ ಸಮಯದಲ್ಲಿ ಒಕ್ಕೂಟವನ್ನು ಮಾಡುವುದರ ಮೂಲಕ ನಮ್ಮ ಸಮಸ್ಯೆಗಳಿಗಾಗಿ ಹೋರಾಟವನ್ನು ಮಾಡಲಾಗುತ್ತಿದೆ. ಈಗ ಸರ್ಕಾರದಿಂದ ನಮಗೆ ಸ್ಪಂದನೆ ಸಿಕ್ಕಿದೆ” ಎಂದರು.
“ಸಂಘಟನೆಯಿಂದ ತುಮಕೂರಿನಲ್ಲಿ ಮೂರನೇ ಸಮ್ಮೇಳನ ಮಾಡುವಾಗ ಸರ್ಕಾರ ನಮಗೂ ಕೂಡಾ ರಾಜ್ಯೋತ್ಸವ ಪ್ರಶಸ್ತ್ರಿಯನ್ನು ನೀಡುವಂತೆ ಮನವಿ ಮಾಡಿದ್ದರ ಮೇರೆಗೆ ಈ ಸಾಲಿನಲ್ಲಿ ನಮ್ಮವರೊಬ್ಬರಿಗೆ ಪ್ರಶಸ್ತಿಯನ್ನು ನೀಡಿದ್ದಾರೆ. ಇದೇ ರೀತಿ ನಮ್ಮ ಕ್ಷೇಮಾಭೀವೃದ್ದಿಗಾಗಿ ಸರ್ಕಾರ 10 ಕೋಟಿ ರೂ.ಗಳನ್ನು ಮೀಸಲಿಡುವಂತೆ ಈ ಸಾಲಿನ ಸಮ್ಮೇಳನದಲ್ಲಿ ಸರ್ಕಾರವನ್ನು ಆಗ್ರಹಿಸಲಾಗುವುದು. ಅಲ್ಲದೆ ನಮ್ಮವರಿಗಾಗಿ ನೀಡುವ ರಾಜ್ಯೋತ್ಸವ ಪ್ರಶಸ್ತ್ರಿಯನ್ನು ಮುಂದುವರೆಸುವಂತೆ ಒತ್ತಾಯಿಸಲಾಗುವುದು” ಎಂದರು.
“ಸೆಪ್ಟೆಂಬರ್ 8 ರಂದು ನಡೆಯಲಿರುವ ಸಮ್ಮೇಳನದಲ್ಲಿ ಪತ್ರಿಕೆಯ ವಿತರಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಚರ್ಚಾಗೋಷ್ಟಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್, ಕಾರ್ಮಿಕ ಸಚಿವ ಸಂತೋಷ ಲಾಡ್, ಸಂಸದ ಗೋವಿಂದ ಕಾರಜೋಳ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಬಾಕರ್, ಜಿಲ್ಲೆಯ ಶಾಸಕರುಗಳು, ನಿಗಮ ಅಧ್ಯಕ್ಷರು, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಜಿಲ್ಲೆಯ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.
“ರಾಜ್ಯದಲ್ಲಿ ಸುಮಾರು 40 ಸಾವಿರ ಮಂದಿ ಪತ್ರಿಕಾ ವಿತರಕರು ಇದ್ದು, ಬೆಂಗಳೂರೊಂದರಲ್ಲಿಯೇ 120 ಸ್ಥಳಗಳಲ್ಲಿ ಸುಮಾರು 6,500 ಮಂದಿ ಪತ್ರಿಕೆಯನ್ನು ವಿತರಣೆ ಮಾಡುತ್ತಿದ್ದಾರೆ. ನಮ್ಮ ಒಕ್ಕೂಟದಲ್ಲಿ 3,500 ಮಂದಿ ಸದಸ್ಯರಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ 500 ಮಂದಿ ಸದಸ್ಯರಿದ್ದಾರೆ. ಈ ಸಮ್ಮೇಳನದಲ್ಲಿ ರಾಜ್ಯದ ವಿವಿಧೆಡೆಗಳಿಂದ ಸುಮಾರು 3,000 ಜನ ಭಾಗವಹಿಸುವ ನಿರೀಕ್ಷೆಯಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಹಿಜಾಬ್ | ಕುಂದಾಪುರ ಪ್ರಾಂಶುಪಾಲನಿಗೆ ಪ್ರಶಸ್ತಿ ವಿವಾದ: ನಿರ್ಧಾರದಿಂದ ಹಿಂದೆ ಸರಿದ ಸರ್ಕಾರ
ಚಳ್ಳಕೆರೆ ತಾ.ಅಧ್ಯಕ್ಷ ಓಂಕಾರಪ್ಪ, ಜಿಲ್ಲಾ ಸಂಘದ ಕುಬೇಂದ್ರಪ್ಪ, ಮೊಳಕಾಲ್ಮೂರಿನ ಮಲ್ಲಿಕಾರ್ಜುನ್, ಹಿರಿಯೂರಿನ ನಾಗಣ್ಣ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ ನಾದೂರು ಸೇರಿದಂತೆ ಇತರರು ಇದ್ದರು.