ಪ್ರಸ್ತುತ ದಿನಗಳಲ್ಲಿ ಮಕ್ಕಳ ಆರೋಗ್ಯ ಉತ್ತಮವಾಗಿಸುವುದು ಬಹುಮುಖ್ಯವಾಗಿದೆ ಎಂದು ರೈನ್ ಟ್ರಸ್ಟ್ ಅಧ್ಯಕ್ಷ ಕಸವನಹಳ್ಳಿ ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಚಿತ್ರದುರ್ಗದ ತಾಲೂಕಿನ ಮದಕರಿಪುರದ ಜಿಂದಾಲ್ ಜುಬಿಲಿ ಭಾರತೀಯ ಪ್ರೌಢಶಾಲೆಯಲ್ಲಿ ಪ್ಲಾಸ್ಟಿಕ್ ಮುಕ್ತ ಕರ್ನಾಟಕ ಅಂದೋಲನದ ಅಂಗವಾಗಿ ರೈನ್ ಟ್ರಸ್ಟ್ ವತಿಯಿಂದ ಮಕ್ಕಳಿಗಾಗಿ ಆಯೋಜಿಸಿದ್ದ ʼಮಕ್ಕಳು ಹಕ್ಕುಗಳು ಮತ್ತು ಪೋಕ್ಸೊ ಕಾಯ್ದೆʼಯ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು.
“ಪ್ಲಾಸ್ಟಿಕ್ ಕಣಗಳು ನೀರಿನ ಮೂಲಕವಲ್ಲದೇ ಸಕ್ಕರೆ, ಉಪ್ಪು, ಹಾಲು ಸೇರಿದಂತೆ ಆಹಾರ ಪದಾರ್ಥಗಳ ಮೂಲಕವೂ ಮನುಷ್ಯನ ಶ್ವಾಸಕೋಶ, ಜಠರ, ಮೆದುಳಿನಲ್ಲಿ ಸೇರುತ್ತಿವೆ. ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚಿದ್ದು, ಯಾವುದೇ ಕಾರಣಕ್ಕೂ ಹೊರಗಿನ ಹಾಗೂ ಬೇಕರಿ ತಿಂಡಿಗಳನ್ನು ಬಳಸಬಾರದು. ಇವುಗಳಲ್ಲಿ ಹಾನಿಕಾರಕ ಕೃತಕ ಬಣ್ಣ, ಕೃತಕ ವಾಸನೆ ಮತ್ತು ದೀರ್ಘಕಾಲ ಕೆಡದಂತೆ ಅಪಾಯಕಾರಿ ರಾಸಾಯನಿಕಗಳನ್ನು ಬಳಸಿರುತ್ತಾರೆ. ಇಂತಹ ಅಪಾಯಕಾರಿ ಆಹಾರಗಳಿಂದ ದೂರವಿರುವುದು ಉತ್ತಮ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿರಲಿ” ಎಂದು ಮಕ್ಕಳಿಗೆ ಸಲಹೆ ನೀಡಿದರು.
ಅಪರಾಧ ಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಂಶುಪಾಲ ಡಾ ನಟರಾಜ್ ಅವರು ಮಕ್ಕಳ ಹಕ್ಕುಗಳು ಮತ್ತು ಪೋಕ್ಸೊ ಕಾಯ್ದೆ ಬಗ್ಗೆ ವಿಶೇಷ ಉಪನ್ಯಾಸ ನೀಡಿ, “ಮಕ್ಕಳು ಮನೆಯಲ್ಲಾಗಲಿ, ಶಾಲೆಯಲ್ಲಾಗಲಿ, ಸಾರ್ವಜನಿಕ ಪ್ರದೇಶಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಮಾಡುವುದಾಗಲಿ, ತಮ್ಮ ಅನುಮತಿಯಿಲ್ಲದೆ ಫೋಟೊ ತೆಗೆಯುವುದಾಗಲಿ ಮಾಡಕೂಡದು. ಹಾಗೊಮ್ಮೆ ಮಾಡಿದ್ದಲ್ಲಿ ಅಲ್ಲಿಯೇ ಪ್ರತಿಭಟಿಸಬೇಕು. ಕಾನೂನಿನ ರಕ್ಷಣೆ ಪಡೆಯಬೇಕು” ಎಂದು ತಿಳಿಸಿದರು.
ಎಂ ಮಂಜುನಾಥ್ ಕಳ್ಳಿಹಟ್ಟಿ ಪ್ರಾಸ್ತಾವಿಕವಾಗಿ ಮಾತಾನಾಡಿ, “ಮಕ್ಕಳಿಗೆ ಅಗತ್ಯ ಮಾಹಿತಿ ಅವಶ್ಯವಿರುತ್ತದೆ. ಇಂತಹ ಜಾಗೃತಿ ಕಾರ್ಯಕ್ರಮಗಳು ಶಾಲೆಗಳಲ್ಲಿ ನಡೆಯಬೇಕು. ಮಕ್ಕಳು ರೋಗದಿಂದ ಬಳಲಾಬಾರದು, ಇಂದಿನ ಮಕ್ಕಳಿಗೆ ಆರೋಗ್ಯ, ಶಿಕ್ಷಣ ಮತ್ತು ರಕ್ಷಣೆ ಬಹುಮುಖ್ಯ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಇಂದಿರಾಗಾಂಧಿ ಭಾರತಕ್ಕಷ್ಟೇ ಅಲ್ಲ ಇಡೀ ವಿಶ್ವಕಂಡ ಧೀಮಂತ ನಾಯಕಿ: ಮಲ್ಲಿಕಾರ್ಜುನ ಎಸ್ ಲೋಣಿ
ಕಾರ್ಯಕ್ರಮದಲ್ಲಿ ಪರಿಸರವಾದಿಗಳಾದ ಡಾ ಹೆಚ್‌ಎಸ್‌ಕೆ ಸ್ವಾಮಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು, ಸ್ಥಳೀಯರಿಗೆ ಉದ್ಯೋಗ ದೊರಕಿಸುವ ಮುಖಾಂತರ ಹಳ್ಳಿಯ ಹಣ ನಗರ ಸೇರದಂತೆ ತಡೆಗಟ್ಟಬೇಕಾದರೆ ಬಟ್ಟೆ ನೇಯುವುದು ಸೇರಿದಂತೆ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಮೂಲಕ ಸ್ವಾವಂಲಂಬಿಗಳಾಗಬೇಕು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಹೆಚ್ ಎಂ ಜಯಪ್ರಕಾಶ್, ಟಿ ದ್ಯಾಮಣ್ಣ, ಲೋಹಿತ್ ಎಂ ಜೆ, ಸಹ ಶಿಕ್ಷಕ ವೃಂದದವರು ಸೇರಿದಂತೆ ನೂರಾರು ಮಂದಿ ವಿದ್ಯಾರ್ಥಿಗಳು ಇದ್ದರು.