ಐತಿಹಾಸಿಕ ದುರ್ಗೋತ್ಸವವನ್ನು ಡಿಸೆಂಬರ್ ತಿಂಗಳೊಳಗೆ ಆಚರಿಸಬೇಕು. ಇಲ್ಲವಾದಲ್ಲಿ ಸಂಘಟನೆಯಿಂದ ಜಿಲ್ಲಾದ್ಯಂತ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಕರುನಾಡ ಸೇನೆಯ ಚಿತ್ರದುರ್ಗ ಜಿಲ್ಲಾಧ್ಯಕ್ಷ ಕೆಟಿ ಶಿವಕುಮಾರ್ ಎಚ್ಚರಿಸಿದರು.
ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಚೆನ್ನಮ್ಮನ ನಾಡಿನ ಕಿತ್ತೂರು ಉತ್ಸವದ ರಥಯಾತ್ರೆ ನಿನ್ನೆ ಚಿತ್ರದುರ್ಗಕ್ಕೆ ಬಂದಾಗ ಅದನ್ನು ಸ್ವಾಗತಿಸಿ ಅದ್ದೂರಿಯಿಂದ ಬೀಳ್ಕೊಡುಗೆ ಕೊಟ್ಟಿದ್ದು ಅತಿ ಸಂತೋಷದ ವಿಷಯವಾಗಿದೆ. ಆದರೆ ಜನಪ್ರತಿನಿಧಿಗಳು, ಜಿಲ್ಲಾಡಳಿತ ದುರ್ಗೋತ್ಸವವನ್ನೇ ಮರೆತಿದ್ದಾರೆ. ದುರ್ಗೋತ್ಸವ ಕಾರ್ಯಕ್ರಮ ಜಿಲ್ಲೆಯ ಜನರಿಗೆ, ಪ್ರತಿನಿಧಿಗಳಿಗೆ ಸ್ವಾಭಿಮಾನದ ಪ್ರಶ್ನೆಯಾಗಿದೆ. ಆದರೆ ಜನಪ್ರತಿನಿಧಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ” ಎಂದು ಆರೋಪಿಸಿದರು.

“ನಾವು ಹಲವು ಬಾರಿ ದುರ್ಗೋತ್ಸವ ಕಾರ್ಯಕ್ರಮ ಆಚರಿಸಲು ಮನವಿ ನೀಡಿದರೂ ಈವರೆಗೆ ಸ್ಪಂದಿಸಿಲ್ಲ. ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಮಾಜ ಕಲ್ಯಾಣ ಸಚಿವ ಆಂಜನೇಯರವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ದುರ್ಗೋತ್ಸವ ಕಾರ್ಯಕ್ರಮ ನಡೆದಿತ್ತು. ಆನಂತರ ಇಷ್ಟು ವರ್ಷಗಳಾದರೂ ಈವರೆಗೆ ನಡೆದೇ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಸರ್ಕಾರವೇ ಮೈಸೂರು ದಸರಾ, ಹಂಪಿ ಉತ್ಸವ, ಕೊಡಗು ಉತ್ಸವ, ಕಿತ್ತೂರು ಉತ್ಸವ ಈ ರೀತಿ ಹಲವು ಜಿಲ್ಲೆಗಳಲ್ಲಿ ಇತಿಹಾಸವುಳ್ಳ ಹೆಸರುಗಳ ಮೇಲೆ ಉತ್ಸವಗಳು ಆಚರಿಸುತ್ತಾ ಬಂದಿರುತ್ತದೆ. ಆದರೆ ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ ದುರ್ಗೋತ್ಸವವನ್ನು ಆಚರಣೆ ಮಾಡಲು ಮಾತ್ರ ಯಾವ ಚುನಾಯಿತ ಪ್ರತಿನಿಧಿಯೂ ಸಹ ಮುಂದೆ ಬಾರದಿರುವುದು ನಮ್ಮ ಜಿಲ್ಲೆಯ ದುರಂತವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಯಾವುದೇ ರೀತಿಯಲ್ಲಿ ಅಪಮಾನ, ಅವಮಾನ ಆಗುವುದಕ್ಕೆ ನಾವು ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಐತಿಹಾಸಿಕ ಚಿತ್ರದುರ್ಗದಲ್ಲಿ ದುರ್ಗೋತ್ಸವವನ್ನು ಡಿಸೆಂಬರ್ ಒಳಗೆ ಆಚರಿಸಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಇದನ್ನು ಓದಿದ್ದೀರಾ? ಚಿತ್ರದುರ್ಗ | ಭಾರಿ ಮಳೆಗೆ ಕುಸಿದು ಬಿದ್ದ ಕೃಷಿ ಮಾರುಕಟ್ಟೆಯ ತಡೆಗೋಡೆ; ಹಲವೆಡೆ ಹಾನಿ
ಸುದ್ದಿಗೋಷ್ಠಿಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಗೌರಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ನಿಸಾರ್, ಅವಿನಾಶ್, ಮುಜಾವಿಲ್ಲಾ ಮತ್ತು ಇತರರು ಹಾಜರಿದ್ದರು.
