ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊಲ್ಲಹಳ್ಳಿ ಗ್ರಾಮದ ಎಸ್‌ಸಿ ಕಾಲೋನಿಗೆ ಮೂಲಸೌಕರ್ಯ ಕೊರತೆಯಾಗಿದ್ದು, ಇಲ್ಲಿನ ನಿವಾಸಿಗಳ ಬದುಕು ಹೈರಾಣಾಗಿದೆ. ಹಾಗಾಗಿ ಶೀಘ್ರವೇ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಆದಿಕರ್ನಾಟಕ ಜನಾಂಗದವರು ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ಬಾಳಿ ಬದುಕಿದ ಮನೆ ಅಕ್ಕಪಕ್ಕದ ಖಾಲಿ ನಿವೇಶನ ಜಾಗಗಳನ್ನು ರಾಷ್ಟ್ರೀಯ ಹೆದ್ದಾರಿಗೆ ಬಿಟ್ಟುಕೊಟ್ಟು ಈಗ ಬಹುತೇಕ ಮೂಲ ಸೌಕರ್ಯಗಳಿಲ್ಲದ ಜಾಗಕ್ಕೆ ಬಂದು ಅತಂತ್ರರಾಗಿದ್ದೇವೆ. ಇರುವುದನ್ನು ಬಿಟ್ಟುಕೊಟ್ಟು ಇಲ್ಲದಿರುವುದನ್ನು ಹುಡುಕುವಂತಾಗಿದೆ ನಮ್ಮ ಬದುಕು. ಹಾಗಾಗಿ ನಮಗೆ ಚರಂಡಿ, ರಸ್ತೆ, ನೀರು, ವಿದ್ಯುತ್ ಸೇರಿದಂತೆ ಇತರೆ ಮೂಲ ಸೌಕರ್ಯಗಳನ್ನು ಶೀಘ್ರವೇ ಕಲ್ಪಿಸಿ” ಎಂದು ಗ್ರಾಮಸ್ಥರು ಅವಲತ್ತುಕೊಂಡಿದ್ದಾರೆ.
“ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಸ್ತೆ ಅಗಲೀಕರಣಕ್ಕಾಗಿ ಮನೆ, ಖಾಲಿ ನಿವೇಶನಗಳನ್ನು ಬಿಟ್ಟುಕೊಟ್ಟು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಬದಲಿಯಾಗಿ ನಿವೇಶನಕ್ಕೆ ಗೋಮಾಳದಲ್ಲಿ ಮೂರು ಎಕರೆ ಜಮೀನು ಮಂಜೂರಾಗಿದ್ದು, ಈವರೆಗೂ ಹಕ್ಕುಪತ್ರಗಳನ್ನು ನೀಡಿಲ್ಲ. ಶಾಶ್ವತ ಹಕ್ಕುಪತ್ರ, ಖಾತೆಯಂತಹ ದಾಖಲಾತಿಗಳು ಇಲ್ಲದೆ ಬೇರೆ ಬೇರೆ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲೆಯಲ್ಲಿ ಜೀವಿಸುತ್ತಿದ್ದೇವೆ. ರಾತ್ರಿಯಾದರೆ ಮಕ್ಕಳು, ಮುದುಕರು, ಮಹಿಳೆಯರು, ಪುರುಷರು ಬೆಳಕಿಲ್ಲದೆ ಹೊರಬರಲು ಹೆದರುವ ಸ್ಥಿತಿ ಉಂಟಾಗಿದೆ. ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿಕೊಂಡು ವಾಸಮಾಡುವಂತಾಗಿದೆ. ಕೂಡಲೇ ವಿದ್ಯುತ್ ಸೇರಿದಂತೆ ಇತರ ವ್ಯವಸ್ಥೆಯಾಗಬೇಕು” ಎಂದು ಗೊಲ್ಲಹಳ್ಳಿಯ ಎಸ್‌ಸಿ ಕಾಲೋನಿ ನಿವಾಸಿಗಳು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ದೇಶಾದ್ಯಂತ ಮುಸ್ಲಿಂ ಅಲ್ಪಸಂಖ್ಯಾತರ ಮೇಲೆ ದಾಳಿ; ಕ್ರಮಕ್ಕೆ ಆಗ್ರಹ
ಈ ವೇಳೆ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ ಟಿ ಶಿವಕುಮಾರ್, ರಾಜ್ಯ ಸಮಿತಿ ಸದಸ್ಯ ನಿಸಾರ್, ಗೊಲ್ಲಹಳ್ಳಿ ನಿವಾಸಿಗಳಾದ ರಂಗಮ್ಮ, ಮಂಜಮ್ಮ, ಯಶೋಧಮ್ಮ, ಗುರುಸಿದ್ದಮ್ಮ, ನಿರ್ಮಲ, ಜಯಣ್ಣ, ರಂಗಸ್ವಾಮಿ, ಹಿಮಂತರಾಜು, ಹರೀಶ, ತಿಪ್ಪಣ್ಣ ಇದ್ದರು.