ಸಾಮಾಜಿಕ ನ್ಯಾಯದ ಬಗ್ಗೆ ಸಾರ್ವಜನಿಕವಾಗಿ ಪದೇಪದೇ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕೂಡಲೇ ಒಳಮೀಸಲಾತಿ ಜಾರಿಗೊಳಿಸಿ, ಪರಿಶಿಷ್ಟ ಜಾತಿಯ ಉಪಜಾತಿಗಳ ಮೇಲಿನ ಕಾಳಜಿ ತೋರಿಸಬೇಕು. ನೀವು ದಲಿತ ವಿರೋಧಿಯಲ್ಲ ಎನ್ನುವುದನ್ನು ನಿರೂಪಿಸಿ ಎಂದು ದಲಿತ ನಾಯಕ ಪಾವಗಡ ಶ್ರೀರಾಮ್ ಒತ್ತಾಯಿಸಿದರು.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಪಟ್ರಹಳ್ಳಿಯಿಂದ ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ವರೆಗೆ ಒಳಮೀಸಲಾತಿ ಅನುಷ್ಠಾನಕ್ಕಾಗಿ ದಲಿತ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಭಾಗವಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
“ಸುಪ್ರೀಂ ಕೋರ್ಟ್ ನೀಡಿರುವ ಆದೇಶದನ್ವಯ ಒಳ ಮೀಸಲಾತಿಯನ್ನು ಜಾರಿಗೊಳಿಸಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯದಿದ್ದಲ್ಲಿ ಸಿಎಂ ನಿವಾಸಕ್ಕೆ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ” ಎಚ್ಚರಿಸಿದರು.
“2003ರಲ್ಲಿ ಹಿರಿಯೂರು ತಾಲೂಕಿನ ಕೋಡಿಹಳ್ಳಿ ಮಠದಿಂದ ಒಳಮೀಸಲಾತಿಗಾಗಿ ಮೊದಲ ಪಾದಯಾತ್ರೆ ಪ್ರಾರಂಭವಾಗಿತ್ತು. ಮೂರು ದಶಕಗಳಿಂದಲೂ ಎಲ್ಲ ಪಕ್ಷಗಳು ಮಾದಿಗ ಜನಾಂಗವನ್ನು ರಾಜಕೀಯಕ್ಕಾಗಿ ಬಳಸಿಕೊಂಡು ಒಳಮೀಸಲಾತಿಯ ಆಮಿಷವೊಡ್ಡಿ ಜಾರಿಗೊಳಿಸದೆ ಮೋಸ ಮಾಡುತ್ತಿವೆ. ನೀವು ಜಾರಿಗೊಳಿಸದಿದ್ದಲ್ಲಿ 101 ಜಾತಿಗಳು ಸೇರಿ ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ. ಪರಿಶಿಷ್ಟ ಜಾತಿಗಳಲ್ಲಿ ಒಡಕು ಮೂಡಿಸುವ ಸಲುವಾಗಿ ಮಲ್ಲಿಕಾರ್ಜುನ ಖರ್ಗೆಯವರತ್ತ ಬೆಟ್ಟು ಮಾಡುವುದು ಸಮರ್ಥನೀಯವಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಚಿತ್ರದುರ್ಗದಲ್ಲಿ ನಡೆದ ಪರಿಶಿಷ್ಟ ಜಾತಿಗಳ ಸಮಾವೇಶದಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ಭರವಸೆ ನೀಡಿದ್ದೀರಿ. ಸುಪ್ರೀಂ ಕೋರ್ಟ್ ತೀರ್ಪು ನೀಡಿ ಎರಡು ತಿಂಗಳಾದರೂ ಈವರೆಗೆ ಅದರ ಬಗ್ಗೆ ಚಕಾರವಿಲ್ಲ. ಒಳಮೀಸಲಾತಿಯ ಆಸೆ ತೋರಿಸಿ ರಾಜಕೀಯವಾಗಿ ಬಳಸಿಕೊಳ್ಳಬೇಡಿ. ಸಾಮಾಜಿಕ ನ್ಯಾಯ, ಭದ್ರತೆಯ ಬಗ್ಗೆ ಮಾತನಾಡುವ ನೀವು ಒಳ ಮೀಸಲಾತಿ ಜಾರಿಗೊಳಿಸಿ, ಇಲ್ಲವಾದಲ್ಲಿ ಕುರ್ಚಿ ಖಾಲಿ ಮಾಡಿ. ಇಲ್ಲದಿದ್ದಲ್ಲಿ ಪಾದಯಾತ್ರೆಯ ಮೂಲಕ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ” ಎಂದು ಪಾವಗಡ ಶ್ರೀರಾಮ್ ಎಚ್ಚರಿಕೆ ನೀಡಿದರು.
ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಹಿರಿಯೂರಿನ ದಲಿತ ಸಂಘಟನೆಗಳ ಒಕ್ಕೂಟ ಚಿತ್ರದುರ್ಗಕ್ಕೆ ಪಾದಯಾತ್ರೆ ಮೂಲಕ ಆಗಮಿಸಿ, ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸರ್ವೋಚ್ಛ ನ್ಯಾಯಾಲಯ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಸಂವಿಧಾನಬದ್ಧ ಎಂದು ಘೋಷಿಸಿದೆ. ತೀರ್ಪು ಹೊರಬಂದು 60 ದಿನಗಳಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಾಲಹರಣ ಮಾಡುತ್ತಿರುವುದು ಖಂಡನೀಯ. ಯಾವುದೇ ಸಬೂಬು ಹೇಳದೆ ತಕ್ಷಣ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಹಿರಿಯೂರಿನ ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯಿಸಿತು.
ಇದನ್ನು ಓದಿದ್ದೀರಾ? ಉತ್ತರ ಕನ್ನಡ | ಸಮುದ್ರದ ಅಲೆಗೆ ಸಿಲುಕಿ ಬೆಂಗಳೂರು ಮೂಲದ ವಿದ್ಯಾರ್ಥಿ ಸಾವು
ಪ್ರತಿಭಟನೆಯಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರು, ದಲಿತ ಮುಖಂಡರಾದ ಬಿ.ಪಿ.ಪ್ರಕಾಶ್‌ಮೂರ್ತಿ, ಹುಲ್ಲೂರು ಕುಮಾರಸ್ವಾಮಿ, ಹರಿರಾಮ್, ಕೋಡಿಹಳ್ಳಿ ಸಂತೋಷ, ರಾಘವೇಂದ್ರ , ಕೆ.ಟಿ.ಶಿವಕುಮಾರ್, ಬಿ.ಎನ್.ಜೀವೇಶ್, ಬಿ.ಜಿ.ಸಾಗರ್, ರವಿ, ಕೆ.ಮಂಜುನಾಥ್ ಹೆಗ್ಗೆರೆ, ಮಹಾಂತೇಶ್, ಕೆ.ರಾಮಚಂದ್ರ, ಓಂಕಾರಪ್ಪ, ಮಾರುತೇಶ್, ಶ್ರೀನಿವಾಸ್, ತಿಪ್ಪೇಸ್ವಾಮಿ, ರಾಘವೇಂದ್ರ, ಬೋರನಕುಂಟೆ ಕರಿಯಣ್ಣ, ಉಮೇಶ್, ಹನುಮಂತಪ್ಪ, ಸಿದ್ದಾರ್ಥ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

