ಜನರಿಗೆ ವಿಜ್ಞಾನದ ಆವಿಷ್ಕಾರಗಳಾದ ಮೊಬೈಲ್, ಟಿವಿ, ವಾಟ್ಸಾಪ್, ಕಾರುಗಳು ಬೇಕು. ಆದರೆ, ವೈಜ್ಞಾನಿಕವಾದ ಚಿಂತನೆಗಳು ಬೇಡವಾಗಿವೆ ಎಂದು ರಾಷ್ಟ್ರೀಯ ವಿಚಾರವಾದಿಗಳ ಸಂಘದ ರಾಜ್ಯಾಧ್ಯಕ್ಷ ಪ್ರೊ. ನರೇಂದ್ರ ನಾಯಕ್ ಬೇಸರ ವ್ಯಕ್ತಪಡಿಸಿದರು.
ಚಿತ್ರದುರ್ಗ ನಗರದ ಹೊರವಲಯದ ಭೋವಿಗುರುಪೀಠದಲ್ಲಿ ಎಸ್‌ಜೆಎಸ್ ಸಮೂಹ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ‘ವೈಜ್ಞಾನಿಕತೆಗಿರುವ ಸವಾಲು ಹಾಗೂ ಪರಿಹಾರೋಪಾಯಗಳು” ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, “ಮನುಷ್ಯರು ಬುದ್ಧಿ ಜೀವಿಗಳು. ಯಾವುದೇ ವಿಷಯವನ್ನು ಪ್ರಶ್ನಿಸದೇ ಒಪ್ಪಿಕೊಳ್ಳಬಾರದು. ನಾವು ಯಾವುದನ್ನು ಪ್ರಶ್ನಿಸದೇ ಇರುವುದರಿಂದಲೇ ನಮ್ಮ ಮೇಲೆ ಹಲವು ರೀತಿಯ ಗಧಾ ಪ್ರಹಾರಗಳಾಗುತ್ತಿವೆ. ನಮ್ಮ ಸಂವಿಧಾನದಲ್ಲಿಯೇ ಕಲಂ 51ರ ಅಡಿಯಲ್ಲಿ ಜನತೆಯ ಕರ್ತವ್ಯಗಳು ಹಾಗೂ ಹಕ್ಕುಗಳನ್ನು ನೀಡಲಾಗಿದೆ. ಇದರ ಬಗ್ಗೆ ಪ್ರತಿಯೊಬ್ಬರೂ ತಿಳಿಯಬೇಕಿದೆ” ಎಂದು ತಿಳಿಸಿದರು.
“ಪ್ರಶ್ನಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಬೇರೆಯವರು ಹೇಳಿದ್ದನ್ನು ಕೇಳುವಂತ ಮನೋಭಾವ ಮೂಡುತ್ತದೆ. ಕೆಲವು ವಂಚಕರು ಜನರಲ್ಲಿ ಪ್ರಶ್ನಿಸುವ ಮನೋಭಾವ ಇಲ್ಲದಿರುವದನ್ನು ಮನಗಂಡು ಅದರ ಲಾಭವನ್ನು ಪಡೆಯುತ್ತಿದ್ದಾರೆ. ಇದರಿಂದ ಅವರನ್ನು ಶೋಷಣೆ ಮಾಡುತ್ತಿದ್ದಾರೆ. ಕೆಲಸ ಮಾಡದೇ ಜನರಿಗೆ ಸುಳ್ಳು ಜೋತಿಷ್ಯದ ಮೂಲಕ ವಂಚಿಸುವುದು, ಸಂಖ್ಯಾಶಾಸ್ತ್ರ, ಪವಾಡ ಇವೆಲ್ಲವು ಜನರನ್ನು ಮೋಸ ಮಾಡುವ ಬೇರೆ ಬೇರೆ ವಿಧಾನಗಳಾಗಿವೆ. ಇದಕ್ಕಿಂತ ಮಿಗಿಲಾಗಿ ಸ್ವರ್ಗ, ನರಕಗಳು. ಇದೆಲ್ಲವನ್ನು ದುಡಿಯದಿರುವ ವರ್ಗ ಸೃಷ್ಟಿ ಮಾಡಿ ದುಡಿಯವ ವರ್ಗದ ಜನರನ್ನು ಶೋಷಣೆ ಮಾಡುತ್ತಿದೆ. ದುಡಿಯದ ವರ್ಗ ಬೇರೆಯವರಿಗೆ ಸ್ವರ್ಗವನ್ನು ತೋರಿಸುತ್ತೇನೆ ಎಂದು ತಿಳಿಸಿ ಅವರನ್ನು ಭ್ರಮೆಯಲ್ಲಿ ಇರಿಸಿ ಕುಳಿತು ತಿನ್ನುವ ವರ್ಗ. ಇದು ಮನುಷ್ಯನ ಶೋಷಣೆಯ ಪ್ರವೃತ್ತಿಯಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.
“ವೈಜ್ಞಾನಿಕ ಚಿಂತನೆಯನ್ನು ಮೈಗೂಡಿಸಿಕೊಳ್ಳುವ ಅಗತ್ಯ ಇದೆ. ಜಗತ್ತಿನಲ್ಲಿ ಇಲ್ಲಿಯವರೆಗೆ ಆಗಿರುವ ಪ್ರಗತಿ ವೈಜ್ಞಾನಿಕ ಚಿಂತನೆಯಿಂದಲೇ ಆಗಿದೆ ಎನ್ನುವುದನ್ನು ಮರೆಯುವಂತಿಲ್ಲ. ಯಾವುದೇ ಭಕ್ತಿಯಿಂದಾಗಲಿ, ಮೌಢ್ಯದಿಂದಾಗಲಿ, ಪ್ರಗತಿಯನ್ನು ಹೊಂದಲು ಸಾಧ್ಯವಿಲ್ಲ. ಜನಗಳಿಗೆ ವಿಜ್ಞಾನದ ಆವಿಷ್ಕಾರಗಳು ಬೇಕು. ವೈಜ್ಞಾನಿಕವಾಗಿ ಚಿಂತಿಸುವುದು ಬೇಡವಾಗಿದೆ. ನಂತರ ಇದಕ್ಕೆ ಸಬೂಬನ್ನು ಹೇಳಲಾಗುತ್ತದೆ. ಸಾವಿರಾರು ವರ್ಷಗಳಿಂದ ವೈಜ್ಞಾನಿಕ ಚಿಂತನೆ ನಮ್ಮಲ್ಲೇ ಇತ್ತು. ಈಗಲೂ ಇದೆ. ಅದನ್ನ ಕಂಡುಕೊಳ್ಳಬೇಕಷ್ಟೇ” ಎಂದು ತಿಳಿಸಿದರು.

“ವೈಜ್ಞಾನಿಕ ಚಿಂತನೆ ಎಂದರೆ ಬರೀ ತಂತ್ರಜ್ಞಾನವಲ್ಲ, ಮೂಲಭೂತವಾದ ಸಂಶೋಧನೆಗಳು. ದೇಶದ ಗಂಭೀರವಾದ ವಿಷಯಗಳನ್ನು ಬಿಟ್ಟು ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಗಹನವಾದ ಚರ್ಚೆ ಮಾಡುತ್ತಿದ್ದೇವೆ. ಇಂದಿನ ವೈಭವದಲ್ಲಿ ನಮ್ಮನ್ನು ಮರೆಯಲಾಗುತ್ತಿದೆ. ಇದನ್ನು ಬಿಟ್ಟು ವಾಸ್ತವಿಕತೆಯನ್ನು ಅರ್ಥ ಮಾಡಿಕೊಂಡಾಗ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯವಿದೆ” ಎಂದು ಆಶಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ಚಿತ್ರದುರ್ಗ | ಅರೆಬರೆ ಕಾಮಗಾರಿ ಮಧ್ಯೆಯೇ ಹೆದ್ದಾರಿ ಟೋಲ್ ಸಂಗ್ರಹ; ರಾಜ್ಯ ರೈತ ಸಂಘ ಪ್ರತಿಭಟನೆ
ಕಾರ್ಯಕ್ರಮದಲ್ಲಿ ಭೋವಿ ಗುರುಪೀಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ಭೋವಿ ಗುರುಪೀಠದ ಸಿಇಓ ಗೌನಹಳ್ಳಿ ಗೋವಿಂದಪ್ಪ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
