ರೈತರ ಪಂಪ್ ಸೆಟ್‌ಗಳಿಗೆ ಆಧಾರ್ ಜೋಡಣೆ ನಿಲ್ಲಿಸಬೇಕು, ಸಿಬಿಲ್ ಪರಿಗಣಿಸದೆ ಸಾಲ ನೀಡಲು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಚಿತ್ರದುರ್ಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪ್ರತಿಭಟನೆಯನ್ನು ನಡೆಸಿ ಕರಾಳ ದಿನಾಚರಣೆಯನ್ನು ಆಚರಿಸಿ ಒತ್ತಾಯಿಸಿತು.
ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಮತ್ತು ಭದ್ರಾ ಮೇಲ್ದಂಡೆ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿದ ರೈತರು, ಕೃಷಿ ಪಂಪ್ ಸೆಟ್‌ಗಳಿಗೆ ಆಧಾರ್ ಸಂಖ್ಯೆ ಜೋಡಣೆಯನ್ನು ಕೈಬಿಡಬೇಕು. ಬೋರ್ವೆಲ್ ಕೊರೆಸಲು ಸರ್ಕಾರ ಬೆಲೆ ನಿಗದಿಪಡಿಸಿ, ಅಧಿಕಾರಿಗಳು, ಬೋರ್‍ವೆಲ್ ಮಾಲೀಕರು ಹಾಗೂ ರೈತರನ್ನೊಳಗೊಂಡ ಸಮಿತಿ ರಚಿಸಬೇಕು, ಭದ್ರಾ ಮೇಲ್ದಂಡೆ ಯೋಜನೆಯ ಶೀಘ್ರ ಅನುಷ್ಠಾನ ಮತ್ತು ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾರ್ಯಾಧ್ಯಕ್ಷ ಈಚಗಟ್ಟದ ಸಿದ್ಧವೀರಪ್ಪ, ಸಾಲ ನೀಡುವಾಗ ರೈತರನ್ನು ಸಿಬಿಲ್ ಮಾನದಂಡದಿಂದ ಅಳೆಯಬಾರದು. ಮೈಕ್ರೋ ಫೈನಾನ್ಸ್ ಕಂಪನಿಗಳ ಹಣಕಾಸು ವ್ಯವಹಾರವನ್ನು ಸರ್ಕಾರಗಳ ನಿಯಂತ್ರಣಕ್ಕೆ ಒಳಪಡಿಸಬೇಕು. ರೈತರ ಜಮೀನುಗಳ ದಾರಿ ಸಮಸ್ಯೆಗಳನ್ನು ಕೂಡಲೆ ಬಗೆಹರಿಸಬೇಕು. ಪಹಣಿ ಮತ್ತು ಭೂ ದಾಖಲೆಗಳನ್ನು ಐದು ರೂ.ಗೆ ನೀಡಲು ಆದೇಶಿಸಿ ವ್ಯಾಪಾರ ಎಂದು ಪರಿಗಣಿಸದೆ ಸೇವೆಯಾಗಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಭೂದಾಖಲೆಗಳನ್ನು ಗಣಕೀಕೃತಗೊಳಿಸುವಾಗ ತಪ್ಪುಗಳಾದಲ್ಲಿ ಸಂಬಂಧಪಟ್ಟ ನೌಕರರನ್ನೇ ಹೊಣೆಗಾರರನ್ನಾಗಿಸಬೇಕು. ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳನ್ನು ಪರಿಶೀಲಿಸಿ ಸಾಗುವಳಿ ಚೀಟಿ ವಿತರಿಸಬೇಕು. ತೆಂಗಿನ ಗಿಡಗಳಿಗೆ ಬಾಧಿಸುತ್ತಿರುವ ಕಪ್ಪುಹುಳು ಬಾಧೆಯನ್ನು ಹತೋಟಿಗೆ ತರಬೇಕು. ಕಾಲಮಿತಿಯಲ್ಲಿ ಶೀಘ್ರವಾಗಿ ಬೆಳೆ ವಿಮೆ ನೀಡಿ ಬೆಳೆ ಪರಿಹಾರ ತಾರತಮ್ಯವನ್ನು ನಿವಾರಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ರೈತರ ಹೆಸರೇಳಿಕೊಂಡು ಬರುವ ಎಲ್ಲ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನಿರಾಕರಿಸಿ ಅವರಿಗೆ ವಂಚನೆ ಮಾಡುತ್ತಿದ್ದಾರೆ. ರೈತರಿಗೆ ಆರ್ಥಿಕ ಸ್ವಾತಂತ್ರ್ಯ ದೊರೆಯಬೇಕು ಹಾಗೂ ಜಿಲ್ಲೆಯ ಜೀವನಾಡಿಯಾದ ಭದ್ರಾ ಮೇಲ್ದಂಡೆ ಸುಮಾರು 16 ವರ್ಷಗಳಿಂದ ಕುಂಠಿತ ಸಾಗುತ್ತಿದ್ದರೂ ಯಾವುದೇ ಸರ್ಕಾರಗಳು ಈ ಬಗ್ಗೆ ಶೀಘ್ರ ಅನುಷ್ಠಾನಕ್ಕೆ ಆಸಕ್ತಿ ತೋರಿಸುತ್ತಿಲ್ಲ. ರಾಜ್ಯದ ಮೇಲೆ ಕೇಂದ್ರ ಮತ್ತು ಕೇಂದ್ರದ ಮೇಲೆ ರಾಜ್ಯ ಸರ್ಕಾರಗಳು ಗೂಬೆ ಕೂರಿಸುತ್ತಿವೆ. ಈ ಪ್ರವೃತ್ತಿಯನ್ನು ಬಿಟ್ಟು ಬರದ ನಾಡಿನ ಬಯಲುಸೀಮೆ ಜೀವನಾಡಿ ಆದ ಭದ್ರಾ ಮೇಲ್ದಂಡೆಯನ್ನು ಶೀಘ್ರವೇ ಅನುಷ್ಠಾನಗೊಳಿಸಬೇಕು ರೈತರ ಹಲವು ಬೇಡಿಕೆಗಳನ್ನು ಸರ್ಕಾರ ಮನ್ನಿಸಿ ಈಡೇರಿಸಬೇಕು ಎಂದು ಇತರೆ ಮುಖಂಡರು ಹಾಗೂ ರೈತರು ಒತ್ತಾಯಿಸಿದರು.
ರೈತರ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆಯ ಕ್ರಮ ರೈತರನ್ನು ಮುಂದಿನ ದಿನಗಳಲ್ಲಿ ಹತ್ತಿಕ್ಕುವ ಕ್ರಮವಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಈ ಆದೇಶವನ್ನು ರದ್ದು ಮಾಡಿ ರೈತರ ಬೆನ್ನಿಗೆ ನಿಲ್ಲಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ನಾಗಮಂಗಲ ಗಲಭೆ | ಸುಳ್ಳು ಸುದ್ದಿ ಹರಡಿದ್ದ ಬಿಜೆಪಿಯ ಶೋಭಾ ಕರಂದ್ಲಾಜೆ, ಅಶೋಕ್ ವಿರುದ್ಧ ಎಫ್‌ಐಆರ್
ಜಿಂದಾಲ್ ಒಳಗೊಂಡಂತೆ ಯಾವುದೇ ಕಂಪನಿಗೆ ಅಗ್ಗದ ಬೆಲೆಗೆ ಭೂಮಿ ಕೊಡಬಾರದು, ಅತಿವೃಷ್ಟಿಯಿಂದಾದ ಜನ- ಜಾನುವಾರು, ಮಳೆ, ಬೆಳೆ ನಷ್ಟಕ್ಕೆ ತಕ್ಷಣ ಪರಿಹಾರ ನೀಡಬೇಕು, ಐ.ಪಿ ಸೆಟ್‌ಗೆ ಆಧಾರ್ ನಂಬರ್ ಜೋಡಣೆ ಮಾಡಬಾರದು ಹಿಂದಿನಂತೆ ಅಕ್ರಮ-ಸಕ್ರಮ ಯೋಜನೆ ಮುಂದುವರಿಸಬೇಕು, ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕಗೊಳಿಸಬೇಕು, ವಿದ್ಯುತ್ ಖಾಸಗೀಕರಣವನ್ನು ಕೈಬಿಡಬೇಕು, ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು ತಕ್ಷಣವೇ ಸಾಗುವಳಿ ಹಕ್ಕುಪತ್ರ ನೀಡಬೇಕು ಎನ್ನುವ ಹಕ್ಕೊತ್ತಾಯಗಳನ್ನು ಈಡೇರಿಸಲು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಡಿ.ಎಸ್.ಹಳ್ಳಿ, ಪ್ರಧಾನ ಕಾರ್ಯದರ್ಶಿ ಆರ್.ಬಿ.ನಿಜಲಿಂಗಪ್ಪ, ರೈತ ಮುಖಂಡರುಗಳಾದ ರವಿಕುಮಾರ್, ಜಿ.ಇ.ರಾಜಪ್ಪ, ರಂಗಪ್ಪ, ಬಸಪ್ಪ, ಜಿ.ತಿಪ್ಪೇಸ್ವಾಮಿ, ಪರಸಪ್ಪ, ನಿರಂಜನಮೂರ್ತಿ, ನಾಗರಾಜಪ್ಪ, ನರಸಿಂಹಪ್ಪ, ತಿಮ್ಮಾರೆಡ್ಡಿ, ಎಸ್.ಜಿ.ನಿಜಲಿಂಗಪ್ಪ, ಓಂಕಾರಪ್ಪ, ಹರಳಯ್ಯ, ಮಂಜುನಾಥ, ಬಿ.ಎಸ್.ರಂಗಸ್ವಾಮಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
