ಜನಪರ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ ರಾಜ್ಯಪಾಲರಿಗೆ ಒತ್ತಡ ಹೇರಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೋಡಿಸಿದೆ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾ ಘಟಕ ಸೋಮವಾರ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಕಾರ್ಯಕರ್ತರು ಚಿತ್ರದುರ್ಗದ ಐಯ್ಯನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ಆಕ್ರೋಶ ಹೊರ ಹಾಕಿದರು. ಬಳಿಕ ಟೈಯರ್‌ಗೆ ಬೆಂಕಿ ಹಚ್ಚಿ, ರಾಜ್ಯಪಾಲರು ಸತ್ತು ಹೋದ್ರು ಅಂತಾ ಬಾಯಿ ಬಡಿದು ಕೊಂಡು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಅಮಿತ್ ಷಾ ವಿರುದ್ಧ ಘೋಷಣೆ ಕೂಗಿದರು.
ಮುಖ್ಯಮಂತ್ರಿಗೆ ಸಂಬಂಧವೇ ಇಲ್ಲದ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ಸಿಕ್ಕಿಸಲು ಬಿಜೆಪಿ ಯತ್ನಿಸುತ್ತಿದೆ. ಮುಡಾದಿಂದ ನಿವೇಶನ ಹಂಚಿಕೆ ಮಾಡಿದಾಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರಲಿಲ್ಲ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು, ಬಿಜೆಪಿಯವರೇ ಮುಡಾ ಅಧ್ಯಕ್ಷರಾಗಿದ್ದರು. ಕಾನೂನಾತ್ಮಕವಾಗಿ ಯಾವುದೇ ಆಧಾರ ಇಲ್ಲದಿದ್ದರೂ ರಾಜ್ಯಪಾಲರು ಸಿಎಂ ವಿರುದ್ಧ ತನಿಖೆಗೆ ಅನುಮತಿ ನೀಡಿರುವುದು ಅಧಿಕಾರದ ದುರುಪಯೋಗ ಎಂದು ಆರೋಪಿಸಿದರು.
ಯಾವುದೇ ಭ್ರಷ್ಟಾಚಾರ ಆರೋಪವಿಲ್ಲದ ಒಂದು ಕಪ್ಪು ಚುಕ್ಕೆಯೂ ಇಲ್ಲದಂತೆ ಅಧಿಕಾರ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಮುಡಾ ಹಗರಣದ ಆರೋಪ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಅವರ ಪತ್ನಿ ಜಮೀನನ್ನು ಸಹೋದರನಿಂದ ದಾನವಾಗಿ ಪಡೆದಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಅವರ ಕೈವಾಡ ಇಲ್ಲ. ಬೇಕಾದರೆ ನಿವೇಶನಗಳನ್ನು ವಾಪಸ್ ಪಡೆಯಲಿ. ಆದರೆ, ಬಿಜೆಪಿಯವರು ರಾಜ್ಯಪಾಲರಿಂದ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ಮನವಿ ಪತ್ರ ಸಲ್ಲಿಸಿದರು. ಬಿಜೆಪಿ, ರಾಜ್ಯಪಾಲರ ಭಾವಚಿತ್ರ ಸುಟ್ಟು ಅವರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಮಾತನಾಡಿ ಯಾವುದೇ ಆರೋಪವಿಲ್ಲದ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಪಾಲರ ಮೂಲಕ ಷಡ್ಯಂತ್ರ ರೂಪಿಸಿದ್ದಾರೆ.ಇದಕ್ಕೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೆದರುವುದಿಲ್ಲ. ಇದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ನೀಡುತ್ತಾರೆ ಎಂದು ರಾಜ್ಯಪಾಲರ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಸಚಿವ ಆಂಜನೇಯ ಮಾತನಾಡಿ, ಸಾಮಾಜಿಕ ನ್ಯಾಯದ ಬಡವರ, ಅಹಿಂದ ವರ್ಗದ ನಾಯಕ ಸಿದ್ದರಾಮಯ್ಯನವರನ್ನು ಕೆಳಗಿಳಿಸಲು ಕುತಂತ್ರ ಮಾಡುತ್ತಿದ್ದು, ಸಿದ್ದರಾಮಯ್ಯನವರನ್ನು ಕೆಣಕಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ಇಡೀ ಕಾಂಗ್ರೆಸ್ ಮತ್ತು ಅಹಿಂದ ವರ್ಗದ ಜನ ಅವರ ಪರವಾಗಿ ನಿಲ್ಲುತ್ತಾರೆ. ರಾಜಭವನವನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಜ್ಯಪಾಲರು ಅವರು ಕೈಗೊಂಬೆ ರೀತಿ ವರ್ತಿಸುತ್ತಿದ್ದಾರೆ. ಇದು ಸಂವಿಧಾನದ ಕಗ್ಗೊಲೆ. ಕೇಂದ್ರ ಸರ್ಕಾರ ಮತ್ತು ಬಿಜೆಪಿ ಸರ್ಕಾರ ಅಸ್ಥಿರಗೊಳಿಸಲು ರಾಜಭವನವನ್ನು ಉಪಯೋಗಿಸಿಕೊಂಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ತಾಜಪೀರ್, ಶಾಸಕರಗಳಾದ ಗೋವಿಂದಪ್ಪ ಗೋಪಾಲಕೃಷ್ಣ, ರಘುಮೂರ್ತಿ, ಮಾಜಿ ಸಂಸದ ಚಂದ್ರಪ್ಪ, ಮುಖಂಡರುಗಳಾದ ಆರ್ ಕೆ ಸರ್ದಾರ್, ಯಾಸಿನ್, ಮಂಜುನಾಥ್ ಇತರ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು.