ಹಾಸ್ಟೆಲ್ ವಾರ್ಡನ್ ವಿದ್ಯಾರ್ಥಿಗಳ ಮೇಲೆ ಅವಾಚ್ಯವಾಗಿ ಮಾತನಾಡಿ ದೌರ್ಜನ್ಯ ಮಾಡುತ್ತಿದ್ದಾರೆ ಮತ್ತು ಉತ್ತಮ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಆರೋಪಿಸಿ ವಾರ್ಡನ್ ವಿರುದ್ಧ ವಿದ್ಯಾರ್ಥಿಗಳು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಪ್ರತಿಭಟನೆ ನಡೆಸಿದ್ದು, ವಜಾ ಮಾಡಲು ಮನವಿ ಸಲ್ಲಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪಾವಗಡ ರಸ್ತೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ದೇವರಾಜ ಅರಸು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಸರಿಯಾಗಿ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ಇಲ್ಲಿನ ವಾರ್ಡನ್ ವಿದ್ಯಾರ್ಥಿಗಳ ಜೊತೆಗೆ ಅನುಚಿತವಾಗಿ ವರ್ತಿಸುತ್ತಿದ್ದು, ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಉತ್ತಮವಾದ ಊಟದ ವ್ಯವಸ್ಥೆ ಇಲ್ಲ. ಊಟಕ್ಕೆ ಮತ್ತು ಉಪಾಹಾರಕ್ಕೆ ಕಳಪೆ ಗುಣಮಟ್ಟದ ಹಾಗೂ ಕೊಳೆತ ಸೊಪ್ಪು ತರಕಾರಿಗಳನ್ನು ಬಳಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ವಿದ್ಯಾರ್ಥಿಗಳ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ಎಸಗುತ್ತಿದ್ದಾರೆ. ಇವರ ಕುಕೃತ್ಯಗಳನ್ನು ಮರೆಮಾಚಲು ಹಾಸ್ಟೆಲ್ ಕಟ್ಟಡದಲ್ಲಿರುವ ಸಿ ಸಿ ಕ್ಯಾಮರಾಗಳನ್ನು ಮುರಿದು ಹಾಕಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಹಾಸ್ಟೆಲಿಗೆ ಬರುವ ವೇಳೆ ಮೇಲ್ವಿಚಾರಕರು ಮದ್ಯಪಾನ ಮಾಡಿ ಬರುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ ವಿದ್ಯಾರ್ಥಿಗಳ ಮೇಲೆ ಹಲ್ಲೆ ಕೂಡ ಮಾಡುತ್ತಾರೆ. ಕೆಲವೊಮ್ಮೆ ಬಡಿಗೆಯಿಂದ ಕೂಡ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ದೂರು ನೀಡುತ್ತೇವೆ ಎಂದು ಹೇಳಿದರೆ, ‘ಜಿಲ್ಲಾ ಕಲ್ಯಾಣಾಧಿಕಾರಿಗಳು ನಮ್ಮ ಸ್ವಂತ ಸಂಬಂಧಿಯಾಗಿದ್ದು ನೀವು ದೂರು ನೀಡಿದರೂ ನನಗೇನು ಆಗುವುದಿಲ್ಲ, ನನ್ನ ಮೇಲೆ ಕ್ರಮ ಕೈಗೊಳ್ಳುವುದಿಲ್ಲ. ಬದಲಾಗಿ ನಿಮ್ಮನ್ನೇ ನಾನು ಹಾಸ್ಟೆಲ್‌ನಿಂದ ಹೊರಗೆ ಹಾಕುತ್ತೇನೆ’ ಎಂದು ಬೆದರಿಸುತ್ತಾರೆ ಎಂದು ಅಳಲನ್ನು ತೋಡಿಕೊಂಡರು.
ಇದನ್ನು ಓದಿದ್ದೀರಾ? ಚನ್ನಪಟ್ಟಣ | ಬಾಡೂಟದ ಆಸೆಯಲ್ಲಿದ್ದ ಯೋಗೇಶ್ವರ್ ಬೆಂಬಲಿಗರಿಗೆ ನಿರಾಸೆ; ತಯಾರಾಗಿದ್ದ ಊಟ ವಶಕ್ಕೆ!
ಈ ಬಗ್ಗೆ ಚಳ್ಳಕೆರೆ ತಾಲೂಕು ತಹಶೀಲ್ದಾರ್ ರೆಹಾನ್ ಪಾಷ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಕ್ಷಣವೇ ಮೇಲ್ವಿಚಾರಕರನ್ನು ವಜಾಗೊಳಿಸಿ, ಹಾಸ್ಟೆಲಿಗೆ ಉತ್ತಮ ಸೌಲಭ್ಯಗಳನ್ನು ಕಲಿಸಬೇಕು, ಅವರ ಸ್ಥಾನಕ್ಕೆ ಉತ್ತಮ ವಾರ್ಡನ್ ಅನ್ನು ನೇಮಿಸಬೇಕು ಎಂದು ಆಗ್ರಹಿಸಿದ್ದಾರೆ.
