ಶುದ್ದವಾದ ಕುಡಿಯುವ ನೀರನ್ನು ಪೂರೈಸುವುದರಿಂದ ಹಲವಾರು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು. ತಿಂಗಳಿಗೊಮ್ಮೆ ಪಂಚಾಯಿತಿಗಳಲ್ಲಿ ಒಮ್ಮೆಯಾದರೂ ಸಭೆ ನಡೆಸಿ ಪರಿಸರ ಸ್ವಚ್ಛತೆ ಮತ್ತು ನೀರು ನೈರ್ಮಲ್ಯದ ಬಗ್ಗೆ ಸಭೆಯಲ್ಲಿ ಚರ್ಚಿಸಬೇಕು ಎಂದು ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ. ಬಿ ವಿ ಗಿರೀಶ್ ಸಲಹೆ ನೀಡಿದರು.
ಚಿತ್ರದುರ್ಗ ತಾಲೂಕು ಸಿರಿಗೆರೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, “ನೀರು ಆರೋಗ್ಯವನ್ನು ಕಾಪಾಡುತ್ತದೆ. ಸಭೆಯಲ್ಲಿ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡು ತಮ್ಮ ತಮ್ಮ ವಾರ್ಡ್‌ಗಳಲ್ಲಿ ಇರುವ ಸಮಸ್ಯೆಗಳ ಬಗ್ಗೆ ಕ್ರಿಯಾಯೋಜನೆ ರೂಪಿಸಬೇಕು. ಪಿಡಿಒಗಳು ಸಲಹೆ ಸೂಚನೆಗಳನ್ನು ಪಾಲನೆ ಮಾಡುವುದರಿಂದ ತುರ್ತು ಆರೋಗ್ಯ ಸಮಸ್ಯೆಗಳನ್ನು ಕೂಡಲೇ ನಿರ್ವಹಣೆ ಮಾಡಬಹುದು” ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್ ಎಸ್ ಮಂಜುನಾಥ್ ಮಾತನಾಡಿ, “ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ ಉದ್ದೇಶ ಜವಾಬ್ದಾರಿ ಹಾಗೂ ಕಾರ್ಯ ವಿಧಾನಗಳ ಬಗ್ಗೆ ತಿಳಿಸುತ್ತಾ, ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ವಿಲೇವಾರಿ, ಕೊಳಚೆ ನೀರು ನಿಲ್ಲಲು ಅವಕಾಶ ನೀಡಬಾರದು ಎಂಬುದರ ಬಗ್ಗೆ ಮಾಲೀಕರಿಗೆ ಅರಿವು ಮೂಡಿಸಬೇಕು. ಖಾಲಿ ನಿವೇಶನದಲ್ಲಿ ಹೇರಳವಾಗಿ ಬೆಳೆದಿರುವ ಕಳೆ ಗಿಡಗಳನ್ನು ಸ್ವಚ್ಛಗೊಳಿಸುವಂತೆ ಜಾಗೃತಿ ಮೂಡಿಸಬೇಕು” ಎಂದು ತಿಳಿಸಿದರು.
“ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ಉದ್ದೇಶದಿಂದ ಜಲಮೂಲಗಳ ಸ್ವಚ್ಛತೆ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ನೀರಿನ ಸ್ಥಾವರ ಜಲಮೂಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡಿಲು ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕು. ಕಾಲ ಕಾಲಕ್ಕೆ ಕುಡಿಯುವ ನೀರಿನ ಮೂಲಗಳಿಗೆ ಕ್ಲೋರಿನೇಷನ್ ಮಾಡಿಸಬೇಕು. ಸ್ಥಳೀಯ ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಣಾಧಿಕಾರಿಗಳಿಂದ ನೀರು ಕುಡಿಯಲು ಯೋಗ್ಯವಾಗಿದೆಯಾ ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಘನತ್ಯಾಜ್ಯ ವಸ್ತುಗಳನ್ನು ಸರಿಯಾದ ಜಾಗದಲ್ಲಿ ವಿಲೇವಾರಿ ಮಾಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಜಲ ವಿವಾದ | ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯುವ ಚಿಂತನೆ : ಸಿಎಂ ಸಿದ್ದರಾಮಯ್ಯ
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ ಮೂಗಪ್ಪ ಮಾತನಾಡಿ, ಕೈ ತೊಳೆಯುವುದು, ನೊಣಗಳಿಂದ ಆಹಾರ ಸಂರಕ್ಷಣೆ ಮಾಡಿಕೊಳ್ಳುವುದರ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀಧರ್, ಸುನಿಲ್, ಡಾ ತಿಮ್ಮೇಗೌಡ, ಗ್ರಾ.ಪಂ.ಅಧ್ಯಕ್ಷೆ ಕೆ ಹಾಲಮ್ಮ, ಉಪಾಧ್ಯಕ್ಷೆ ಗೀತಾ ಶಿವಮೂರ್ತಿ, ಪಿಡಿಒ ಹನ್ಸಿರಾ ಬಾನು, ಎ.ರಾಮಕೃಷ್ಣಪ್ಪ, ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ಇದ್ದರು.