ಸಂವಿಧಾನಕ್ಕೆ ಆಪತ್ತು ಬಂದಿದೆ. ಸಂವಿಧಾನ ಉಳಿಸುವುದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಬಿ ಫಾರಂ ದೇವರ ಸನ್ನಿಧಿಯಲ್ಲಿಟ್ಟು ಪೂಜೆ ಸಲ್ಲಿಸಿ, ಬಳಿಕ ಯಾದವ, ಲಂಬಾಣಿ, ಕಬೀರಾನಂದಾ ಮಠ ಸೇರಿದಂತೆ ವಿವಿಧ ಮಠ ಹಾಗೂ ಧರ್ಮಗುರುಗಳನ್ನು ಭೇಟಿ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಈಚೆಗೆ ಕೆಲವರು ರಾಜಕೀಯ ಕಾರಣಕ್ಕಾಗಿ ಈ ಸೌಹಾರ್ದತೆ ಹಾಗೂ ಶಾಂತಿಯ ನಾಡಿನಲ್ಲಿ ಜಾತಿ, ಧರ್ಮಗಳ ಮಧ್ಯೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಾದ ಜವಾಬ್ದಾರಿ ನಾಗರಿಕರ ಮೇಲೆ ಇದೆ ಎಂದರು.
ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬವಿದ್ದಂತೆ. ಈ ಸಂದರ್ಭದಲ್ಲಿ ಪ್ರತಿಸ್ಪರ್ಧಿಗಳನ್ನು ಎದುರಾಳಿ, ಚುನಾವಣೆಯನ್ನು ಸಮರ, ಯುದ್ಧ ಎಂಬ ಮಾತುಗಳು ಸರಿಯಲ್ಲ. ನಾವೆಲ್ಲರೂ ಸಹೋದರರು. ಚುನಾವಣೆ ಸಂದರ್ಭದಲ್ಲಿ ಗೆಲುವಿಗಾಗಿ ಸ್ಪರ್ಧೆ ಅನಿವಾರ್ಯ. ಅದು ದ್ವೇಷಕ್ಕೆ ತಿರುಗಬಾರದು. ಜೊತೆಗೆ ಸಜ್ಜನಿಕೆ, ಎಲ್ಲ ಜನರ ಪ್ರೀತಿ ಗಳಿಸುವ ಗುಣ ರಾಜಕಾರಣಿಗಳಲ್ಲಿ ಹೆಚ್ಚಬೇಕು ಎಂದರು.
ಸುಳ್ಳು, ಜಾತಿ, ಧರ್ಮಗಳನ್ನು ಮುಂದಿಟ್ಟು ಜನರ ಮನಸ್ಸು ಗೆಲ್ಲುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಜನರು ಹೆಚ್ಚು ಪ್ರಜ್ಞಾವಂತರು ಎಂಬುದನ್ನು ಕಳೆದ ವರ್ಷ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆ ಫಲಿತಾಂಶವೇ ಸ್ಪಷ್ಟ ಉದಾಹರಣೆ. ಎಷ್ಟೇ ಅಬ್ಬರ, ಸುಳ್ಳುಗಳು, ರಂಗು-ರಂಗಿನ ಪ್ರಚಾರಕ್ಕೆ ಜನರು ಮಾರು ಹೋಗುವುದಿಲ್ಲ ಎಂಬುದು ದೃಢಪಟ್ಟಿದೆ. ಸತ್ಯ-ಸುಳ್ಳು ಯಾವುದು, ಯಾವ ಪಕ್ಷ, ಯಾವ ನಾಯಕರು ಜನರ ಹಿತ ಬಯಸುತ್ತಾರೆ ಎಂಬ ಚಿಂತನೆ ಮಾಡಿ ಮತ ಚಲಾಯಿಸುತ್ತಾರೆ. ಆದ್ದರಿಂದಲೇ ಕಾಂಗ್ರೆಸ್ ಪಕ್ಷ ಎಲ್ಲರ ನಿರೀಕ್ಷೆ ಮೀರಿ ರಾಜ್ಯದಲ್ಲಿ 135 ಸ್ಥಾನ ಗೆದ್ದು, ಜನಪರ ಆಡಳಿತ ನೀಡಲು ಸಾಧ್ಯವಾಗಿದೆ. ಇದು ಲೋಕಸಭಾ ಚುನಾವಣೆ ಫಲಿತಾಂಶದಲ್ಲೂ ಮರುಕಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಐದು ಗ್ಯಾರಂಟಿ ಯೋಜನೆಗಳು ಜಾರಿ ಸಾಧ್ಯವೇ ಇಲ್ಲ ಎಂದವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದು, ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಟೀಕೆ ಮಾಡುತ್ತಿದ್ದಂತೆ ಪ್ರತಿಪಕ್ಷದವರು ನಿದ್ದೆಗೆಟ್ಟಿದ್ದಾರೆ. ಇಡೀ ದೇಶಕ್ಕೆ ಕರ್ನಾಟಕ ರಾಜ್ಯದ ಆಡಳಿತ, ಇಲ್ಲಿನ ಯೋಜನೆಗಳು ಮಾದರಿ ಆಗಿವೆ. ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದವರೇ ಇದೆಲ್ಲ ಹೇಗೆ ಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರಲ್ಲಿನ ಅಪಾರ ಜ್ಞಾನ, ಡಿ.ಕೆ.ಶಿವಕುಮಾರ್ ಅವರಲ್ಲಿನ ಸಂಘಟನೆ ಇದೆಲ್ಲವನ್ನೂ ಸಾಧ್ಯವಾಗಿಸಿದೆ. ಯಾರೇ ಒಳ್ಳೆಯ ಕೆಲಸ ಮಾಡಲಿ ಅದನ್ನು ಒಪ್ಪಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಆ ವ್ಯಕ್ತಿ ನಿಜವಾದ ರಾಜಕಾರಣಿ ಆಗಲು ಸಾಧ್ಯ. ಆದರೆ ಗ್ಯಾರಂಟಿ ಯೋಜನೆಗಳ ಯಶಸ್ಸು ಕಂಡು ಪ್ರತಿ ಪಕ್ಷದವರು ಅಸೂಯೆ ಪಡುತ್ತಿರುವುದು ರಾಜಕಾರಣಿಗಳ ಲಕ್ಷಣವಲ್ಲ ಎಂದು ಅಭಿಪ್ರಾಯಪಟ್ಟರು.
ಪ್ರಜ್ಞಾವಂತ ಮತದಾರರು ಸಂವಿಧಾನ ಉಳಿಸಲು ಕಾಂಗ್ರೆಸ್‌ಗೆ ಮತ ಹಾಕುವಂತೆ ಮನವಿ ಮಾಡಿದ ಅವರು, ಈ ಬಾರಿ ಶೇ.90ರಷ್ಟು ಮಹಿಳೆಯರು ಕಾಂಗ್ರೆಸ್ ಪರವಾಗಿದ್ದಾರೆ. ಬಿಜೆಪಿ ಜಾತಿ ಜಾತಿಗಳನ್ನು ಎತ್ತಿ ಕಟ್ಟಿ ಅವೇಶದಲ್ಲಿ ಮಾತಾಡುವ ಮುಖಾಂತರ ಭಾವನೆಗಳನ್ನು ಕೆರಳಿಸಿ ಮತಯಾಚನೆ ಮಾಡುತ್ತಿದ್ದರು. ಇದು ಬಹಳ ವರ್ಷ ನಡೆಯುವುದಿಲ್ಲ. ಇದರಿಂದ ಸಾಲು ಸಾಲಾಗಿ ಮುಖಂಡರು ಬಂದು ಕಾಂಗ್ರೆಸ್ ಪಕ್ಷಕ್ಕೆ ಬಂದು ಸೇರುತ್ತಿದ್ದಾರೆ. ರಾಜ್ಯದ ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಂ ಕೂಡ ಯಾರೇ ಕಾಂಗ್ರೆಸ್ ಪಕ್ಷಕ್ಕೆ ಬಂದರೂ ಸೇರಿಸಿಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ, ಎಸ್‌ಟಿ ಸೆಲ್ ಜಿಲ್ಲಾಧ್ಯಕ್ಷರಾದ ಜಯಣ್ಣನವರು, ಕಾಂಗ್ರೆಸ್ ಮುಖಂಡರುಗಳಾದ ಪ್ರಭುಸ್ವಾಮಿ, ಯೂಸುಫ್, ಜಗದೀಶ್, ಮಲ್ಲೇಶ್, ನಾಗರಾಜ್, ಮಲ್ಲೇಶ್, ಬಂಡೆ ಓಬಣ್ಣ, ರಾಜು, ಮಂಜಕ್ಕ, ಹನುಮಂತಪ್ಪ, ಶಿವಾರೆಡ್ಡಿ,ವಿಶ್ವನಾಥ್ ರೆಡ್ಡಿ, ಗೌರಸಮುದ್ರ ಓಬಣ್ಣ, ಮುದಿಯಪ, ಬಸಣ್ಣ, ಕಾಟಯ್ಯ, ಶ್ರೀಕಾಂತ್ ಹಾಗೂ ಇನ್ನಿತರರು ಹಾಜರಿದ್ದರು.