ಚಿತ್ರದುರ್ಗ ಬರಪೀಡಿತ ಜಿಲ್ಲೆಯಾಗಿದ್ದು, ರೈತರ ಬೇಸಿಗೆ ಕಾಲವಾಗಿರುವುದರಿಂದ ವಿದ್ಯುತ್ ಸರಬರಾಜು ಸೇರಿದಂತೆ ಹಲವಾರು ಸಮಸ್ಯೆಗಳನ್ನು ತಕ್ಷಣ ಈಡೇರಿಸಬೇಕೆಂದು ಇಂಧನ ಸಚಿವ ಕೆಜೆ ಜಾರ್ಜ್ ಜಿಲ್ಲಾ ಭೇಟಿ ವೇಳೆ ರಾಜ್ಯ ರೈತಸಂಘ ಮತ್ತು ಹಸಿರುಸೇನೆ ಮುಖಂಡರು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ರೈತ ಮುಖಂಡರು “ಚಿತ್ರದುರ್ಗ ಜಿಲ್ಲೆಯಲ್ಲಿ ನದಿ ನಾಲೆಗಳಿಲ್ಲದೆ ರೈತರು ಸಂರ್ಪೂಣವಾಗಿ ಬೋರೆವೆಲ್‌ಗಳಿಗೆ ಅವಲಂಬಿತವಾಗಿದ್ದಾರೆ. ಹಗಲು ನಾಲ್ಕು ಗಂಟೆ ರಾತ್ರಿ ನಾಲ್ಕು ಗಂಟೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕು ಮತ್ತು ರೈತರು ತೋಟದಲ್ಲಿ ವಾಸವಾಗಿರುವುದರಿಂದ, ರೈತ ಮಕ್ಕಳ ವಿದ್ಯಾಭ್ಯಾಸ, ವಿಷಜಂತುಗಳ ತೊಂದರೆ ತಪ್ಪಿಸಲು ಸಂಜೆ 6-ರಿಂದ ಬೆಳಗ್ಗೆ 6 ರವರೆಗೂ ಓಪನ್ ಡೆಲ್ಟಾ ವಿದ್ಯುತ್ ಕೊಡಬೇಕು” ಎಂದು ಆಗ್ರಹಿಸಿದರು.

“ಜಿಲ್ಲೆಯ ಹಲವು ಭಾಗಗಳಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಕೇವಲ 3 ಗಂಟೆ ಕಳಪೆ ಗುಣಮಟ್ಟದ ವಿದ್ಯುತ್ ಕೊಡುತ್ತಿದ್ದು, ಆಶ್ವಾಸನೆಯಂತೆ 8 ಗಂಟೆ ವಿದ್ಯುತ್ ಕೊಡಬೇಕು. ಮತ್ತು ಜಿಲ್ಲೆಯ ಹಲವು ಭಾಗಗಳಲ್ಲಿ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಬೇಕು. ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಮತ್ತು ಕಂಟ್ರಾಕ್ಟರ್ಗಳು ಅಕ್ರಮ, ಸಕ್ರಮ ಮತ್ತು ಶೀಘ್ರ ಸಂಪರ್ಕದಡಿಯಲ್ಲಿ ರೈತರಿಗೆ ಅನ್ಯಾಯವೆಸಗುತ್ತಿದ್ದು, ಇದನ್ನು ತಕ್ಷಣ ಸರಿಪಡಿಸಬೇಕು. ವಿಫಲವಾದ ಪರಿವರ್ತಕಗಳನ್ನು 24-ಗಂಟೆಯ ಒಳಗಡೆ ಇಲಾಖೆಯ ವಾಹನದಲ್ಲಿ ಸರಬರಾಜು ಮಾಡಬೇಕು” ಎಂದು ಒತ್ತಾಯಿಸಿದರು.
“ಜಿಲ್ಲೆಯಲ್ಲಿ ಬೆಸ್ಕಾಂ ಸಿಬ್ಬಂದಿಯ ಕೊರತೆ ನೀಗಿಸಿ, ಲೈನ್ ಮ್ಯಾನ್ ಗಳು ಆಯಾ ಕೇಂದ್ರ ಸ್ಥಾನಗಳಲ್ಲಿ ಇರುವಂತೆ ನೋಡಿಕೊಳ್ಳಬೇಕು. ಈ ಹಿಂದೆ ಇದ್ದಂತೆ ಅಕ್ರಮ-ಸಕ್ರಮ ಮತ್ತು ಶೀಘ್ರಸಂಪರ್ಕದಡಿಯಲ್ಲಿ ರೈತರ ಪಂಪ್ ಸೆಟ್ ಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ರೈತರ ಪಂಪ್‌ಸೆಟ್ಗಳಿಗೆ ವಿದ್ಯುತ್ ಸರಬರಾಜಾಗುವ ಹಳೆಯ ಎಲ್ ಟಿ ಮತ್ತು ಹೆಚ್ ಟಿ ತಂತಿಗಳನ್ನು ತೆಗೆದು ಹೊಸ ತಂತಿಗಳನ್ನು ಅಳವಡಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸಿ2ಪ್ಲಸ್50 ಬೆಲೆಯಲ್ಲಿ ಬೆಳೆ ಖರೀದಿಗೆ ಬ್ಯಾಂಕುಗಳಿಗೆ ರೈತಸಂಘ ಆಗ್ರಹ.
ಸಚಿವರ ಭೇಟಿ ವೇಳೆ ರೈತ ಮುಖಂಡರಾದ ಈಚಘಟ್ಟದ ಸಿದ್ಧವೀರಪ್ಪ, ಡಿಎಸ್ ಹಳ್ಳಿ ಮಲ್ಲಿಕಾರ್ಜುನ, ಆರ್ ಜಿ ನಿಜಲಿಂಗಪ್ಪ, ಮರ್ಲಹಳ್ಳಿ ರವಿಕುಮಾರ್, ಬೇಡರೆಡ್ಡಿಹಳ್ಳಿ ಬಸವ ರೆಡ್ಡಿ, ಪ್ರಶಾಂತ್ ರೆಡ್ಡಿ, ರವಿಕುಮಾರ್, ಕೆಟಿ ತಿಪ್ಪೇಸ್ವಾಮಿ, ರಂಗಸ್ವಾಮಿ, ಸತೀಶ್ ಸೇರಿದಂತೆ ನೂರಾರು ರೈತರು, ಮುಖಂಡರು ಹಾಜರಿದ್ದರು.

