“ಸತ್ಯ, ನ್ಯಾಯ, ನೀತಿ, ಪ್ರಾಮಾಣಿಕತೆ, ದಯೆ, ಪ್ರೀತಿ ಇಂಥ ಮೌಲ್ಯಗಳನ್ನು ಎತ್ತಿಹಿಡಿಯುವುದೇ ಧರ್ಮಾಧಿಕಾರಿಗಳ ಜವಾಬ್ದಾರಿ. ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಗೌರವಿಸುವ ಗುಣ ಧರ್ಮಾಧಿಕಾರಿಗಳಲ್ಲಿರಬೇಕು. ಅನೀತಿ, ಹಿಂಸೆ, ಸರ್ವಾಧಿಕಾರ, ದಬ್ಬಾಳಿಕೆ ಇದ್ದರೆ ಧರ್ಮ ಮತ್ತು ಧರ್ಮಾಧಿಕಾರಿಗೆ ಗೌರವ ಇರುವುದಿಲ್ಲ. ಸಮಾಜವನ್ನೂ ಸನ್ಮಾರ್ಗದಲ್ಲಿ ಕರೆದೊಯ್ಯಲು ಸಾಧ್ಯವಾಗುವುದಿಲ್ಲ. ರಾಜಕೀಯ ಕ್ಷೇತ್ರ ಕೂಡ ಧರ್ಮದಷ್ಟೇ ಪವಿತ್ರವಾದುದು” ಎಂದು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಲತಾ ಮಂಟಪದಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ‘ಕರ್ನಾಟಕದ ಪರಿವರ್ತನೆಯ ಚಿಂತನೆ ಮತ್ತು ಕ್ರಿಯಾಯೋಜನೆ’ ಕುರಿತು ಸಮಾನ ಮನಸ್ಕರ ಸಂವಾದ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶ್ರೀಗಳು “ಧರ್ಮ ಮತ್ತು ರಾಜಕೀಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ವ್ಯಕ್ತಿಗಳಲ್ಲಿ ಆದರ್ಶಗಳು ಅರಳಬೇಕು. ಧರ್ಮ ಸಕಲ ಜೀವಾತ್ಮರಿಗೆ ಒಳಿತು ಬಯಸುವಂತಹುದು” ಎಂದು ಅಭಿಪ್ರಾಯಪಟ್ಟರು.
“ತಾತ್ವಿಕರು ಆಡಳಿತದ ಸೂತ್ರಧಾರಿಗಳಾದರೆ ಪಾರದರ್ಶಕ ಮತ್ತು ಪರಿಶುದ್ಧ ಆಡಳಿತ ಕೊಡಲು ಸಾಧ್ಯ. ಇದಕ್ಕೆ ಬಸವಣ್ಣನವರ ರಾಜ್ಯಾಡಳಿತ ಪ್ರೇರಣೆ. ಬಸವಣ್ಣನವರು ನಿಜಾರ್ಥದಲ್ಲಿ ತಾತ್ವಿಕರು. ನಡೆ ನುಡಿಗಳಲ್ಲಿ ಅಂತರ ಇಲ್ಲದಂತೆ ಬಾಳಿದವರು. ಸ್ವಾರ್ಥದಿಂದ ಬಹುದೂರ ಇದ್ದವರು. `ಅವರ ಸುಖವೆನ್ನ ಸುಖ, ಅವರ ದುಃಖವೆನ್ನ ದುಃಖ’ ಎನ್ನುವ ತತ್ವಕ್ಕೆ ಬದ್ಧರಾದವರು. ಒಬ್ಬ ಪ್ರಜಾಪ್ರತಿನಿಧಿಗೆ ಬಸವಣ್ಣನವರ ಹಾಗೆ ಜನಪರ, ಜೀವಪರ ಚಿಂತನೆ ಇರಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಅಡಿಕೆ, ತೆಂಗು, ಹನಿ ನೀರಾವರಿ ಉಪಕರಣಗಳು ಬೆಂಕಿಗಾಹುತಿ, ರೈತ ಕಂಗಾಲು.
“ಬಸವಣ್ಣನವರ ತ್ಯಾಗ, ಸರಳತೆ, ಅಸಂಗ್ರಹ ಬುದ್ಧಿ, ಇವೇ ಜನಪ್ರತಿನಿಧಿಗಳಿಗೆ ಇರಬೇಕಾದ ಸಂಪತ್ತು. ರಾಜಕಾರಣಿಗಳು ಗೆದ್ದಮೇಲೆ ಹೇಗೆ ಸಮಾಜದ ಋಣ ತೀರಿಸಬೇಕೆಂದು ಚಿಂತನೆ ಮಾಡುವುದಿಲ್ಲ. ಕಾಯಕ ಶ್ರದ್ಧೆ ಇಲ್ಲದೆ ವರ್ಷದಿಂದ ವರ್ಷಕ್ಕೆ ಅವರ ಆಸ್ತಿ ವಿಸ್ತರಿಸುತ್ತ ಹೋಗುವುದು ಹೇಗೆ ಎಂದು ಪ್ರಶ್ನಿಸಬೇಕಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

“ಒಬ್ಬ ಜನಪ್ರತಿನಿಧಿ ತನ್ನ ಸುತ್ತ ಯಾವುದೇ ಗೋಡೆಯನ್ನು ಕಟ್ಟಿಕೊಳ್ಳದೆ ಸಾಮಾನ್ಯರಂತೆ ಬದುಕುವುದನ್ನು ರೂಢಿಸಿಕೊಳ್ಳಬೇಕಾದ್ದು ಬಹುಮುಖ್ಯ. ಸರಳತೆ, ಪ್ರಾಮಾಣಿಕತೆ, ಜೀವಪರ ಕಾಳಜಿ, ಎಲ್ಲರೂ ನಮ್ಮವರು ಎನ್ನುವ ಹೃದಯವಂತಿಕೆ, ಸತ್ಯ, ಪ್ರೀತಿ ಇಂಥ ಗುಣಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಾಮಾನ್ಯರಂತೆ ಬದುಕಲು, ಎಲ್ಲ ಗೋಡೆಗಳನ್ನು ಕೆಡವಿ ಹಾಕಲು ಸಾಧ್ಯ” ಎಂದು ಆಶಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಹವಾಮಾನ ಬದಲಾವಣೆಯಿಂದ ಹಲವೆಡೆ ಉತ್ತಮ ಮಳೆ, ಕೃಷಿ ಚಟುವಟಿಕೆಗಳಿಗೆ ಮುನ್ನುಡಿ.
ಪ್ರಾಸ್ತಾವಿಕವಾಗಿ ಮಾತನಾಡಿದ ಸರ್ವೋದಯ ಸಂಘಟನೆಯ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ, ” ಮನುಷ್ಯನ ದುರಾಸೆ, ಭಯ, ಮೂರ್ಖತನ ಇಡೀ ಜಗತ್ತನ್ನು ಆಳುತ್ತಿದೆ. ಮನುಷ್ಯನು ಇಗೋ ದಿಂದ ಇಕೋ ಕಡೆಗೆ ಹೋಗುವ ಪ್ರಯತ್ನವನ್ನು ಮಾಡಬೇಕು. ಮನುಷ್ಯ ನಕಾರಾತ್ಮಕ ಚಿಂತನೆಯನ್ನು ದೂರ ಮಾಡಬೇಕು. ವಾದದಿಂದ ಸಂವಾದದ ಕಡೆಗೆ ಹೋಗಬೇಕು. ಸಹಾನೂಭೂತಿಯ ಜೊತೆಗೆ ಸಂಕಲ್ಪಶಕ್ತಿಯನ್ನಿಟ್ಟುಕೊಳ್ಳಬೇಕು. ರಾಜಕೀಯವಾಗಿ ಸಾತ್ವಿಕ, ತಾತ್ವಿಕ, ಸಜ್ಜನ ರಾಜಕಾರಣಿಗಳು ಬೇಕು. ದುರ್ಜನರು ರಾಜಕಾರಣದಲ್ಲಿ ವಿಜೃಂಬಿಸುತ್ತಿರುವುದು ನಾವು ನೋಡುತ್ತಿದ್ದೇವೆ. ಸಕಲ ಜೀವಾತ್ಮರಿಗೆ ಲೇಸನ್ನೇ ಮಾಡುವ ಕೆಲಸ ಆಗಬೇಕು. ಕರ್ನಾಟಕದಲ್ಲಿ ಸರ್ವೋದಯ ರಾಜಕೀಯ ಬರಬೇಕು” ಎಂದು ಆಶಿಸಿದರು.
ಶಾಸಕರಾದ ಬಿ ಆರ್ ಪಾಟೀಲ, ಬಿ ಜಿ ಗೋವಿಂದಪ್ಪ, ರಘುಮೂರ್ತಿ, ಪಕ್ಷಗಳ ಮುಖಂಡರಾದ ಮುಖ್ಯಮಂತ್ರಿ ಚಂದ್ರು, ಬಿ ಎಲ್ ಶಂಕರ್, ಎ ಟಿ ರಾಮಸ್ವಾಮಿ, ಪ್ರಸನ್ನ ಹೆಗ್ಗೋಡು, ಎಂ ಪಿ ನಾಡಗೌಡ, ರವಿಕೃಷ್ಣಾರೆಡ್ಡಿ, ವಿ ಆರ್ ಸುದರ್ಶನ್, ಡಾ. ಗೋಪಾಲ ದಾಬಡೆ, ಮಹಿಮಾ ಜೆ ಪಟೇಲ್, ಅಬ್ದುಲ್ ರೆಹಮಾನ ಪಾಷಾ, ಭೈರೇಗೌಡ, ಡಾ. ರಾಘವನ್, ತೇಜಸ್ವಿ ಪಟೇಲ್ ಉತ್ತಮ ರಾಜಕಾರಣದಲ್ಲಿ ಆಸಕ್ತಿ ಇರುವ ಹಲವರು ಸಂವಾದದಲ್ಲಿ ಭಾಗವಹಿಸಿದ್ದರು.