“ಪರಿಶಿಷ್ಟ ಜಾತಿಯ ಒಳಮೀಸಲಾತಿ ವರ್ಗೀಕರಣಕ್ಕಾಗಿ ನ್ಯಾ. ನಾಗಮೋಹನ್ ದಾಸ್ ಆಯೋಗ ಸೂಚಿಸಿರುವ ಸಮಗ್ರ ಸಮೀಕ್ಷೆಯನ್ನು ತಕ್ಷಣ ನಿಲ್ಲಿಸಬೇಕು. ಸಮೀಕ್ಷೆ ಸರಿಯಾಗಿ ನಡೆಯುತ್ತಿಲ್ಲ. ಗಣತಿದಾರರಿಗೆ ಸೂಕ್ತ ತರಬೇತಿ ಕೊಟ್ಟಿಲ್ಲ. ಸರ್ವರ್ ಸಮಸ್ಯೆ ಇದೆ. 2 ದಿನ ತಡವಾದರೂ ಪರವಾಗಿಲ್ಲ. ಈ ಸಮಸ್ಯೆಗಳನ್ನೆಲ್ಲ ಬಗೆಹರಿಸಿ ಸಮೀಕ್ಷೆ ನಡೆಸಲಿ” ಎಂದು ಮಾದಾರ ಚನ್ನಯ್ಯ ಗುರುಪೀಠದ ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಒಳಮೀಸಲಾತಿ ಜಾರಿಗಾಗಿ ನ್ಯಾಯಮೂರ್ತಿ ನಾಗ ಮೋಹನ್ ದಾಸ್ ಆಯೋಗ ಶಿಫಾರಸಿನಂತೆ ರಾಜ್ಯಾದ್ಯಂತ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ನಡೆಯುತ್ತಿರುವ ಹೊತ್ತಿನಲ್ಲೇ ಅದರ ಪ್ರಕ್ರಿಯೆ ಹಾಗೂ ಅಡೆತಡೆಗಳ ಬಗ್ಗೆ ಮಾದಾರ ಚೆನ್ನಯ್ಯ ಶ್ರೀಗಳು . ತರಾತುರಿಯಲ್ಲಿ ಸಮೀಕ್ಷೆ ನಡೆಸುವುದರ ಭವಿಷ್ಯದ ಅಪಾಯಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ.
ಲೋಪ ದೋಷಗಳ ಕುರಿತು ಭೋವಿ ಗುರುಪೀಠದ ಸಿದ್ಧರಾಮೇಶ್ವರ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿರುವ ಜೊತೆಯಲ್ಲಿಯೇ ಮಾದಾರ ಚೆನ್ನಯ್ಯ ಗುರು ಪೀಠದ ಬಸವ ಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಈ ಕೂಡಲೇ ಸಮೀಕ್ಷೆ ಕಾರ್ಯವನ್ನು ನಿಲ್ಲಿಸಿ ಲೋಪ ದೋಷಗಳನ್ನು ಸರಿಪಡಿಸಿ ಗಣತಿದಾರರಿಗೆ ಸಂಪೂರ್ಣ ತರಬೇತಿಯ ನಂತರ ಮರು ಪ್ರಾರಂಭಿಸುವಂತೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಚಿತ್ರದುರ್ಗದಲ್ಲಿ ಮಾಧ್ಯಮಗಳಿಗೆ ಮಾತನಾಡಿರುವ ಅವರು, “ಮಾಹಿತಿ ಪ್ರಕಾರ ಸಮೀಕ್ಷೆ ಸರಿಯಾಗಿ ನಡೆಯುತ್ತಿಲ್ಲ. ಆಪ್ ಗಳ ಮತ್ತು ಸರ್ವರ್ ಸಮಸ್ಯೆ ಇದೆ, ಗಣತಿದಾರರಿಗೆ ಸರಿಯಾದ ತರಬೇತಿ ನೀಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ 15 ದಿನವಾದರೂ ಮನೆ ಸಮೀಕ್ಷೆ ಮುಗಿಯುವುದಿಲ್ಲ. ಅಂಕಿ ಅಂಶಗಳು ಏನೇ ಹೇಳಿದರು, ಭೌತಿಕವಾಗಿ ನಡೆಯುತ್ತಿರುವುದು ಬೇರೆ ಇದೆ. ಇನ್ನು ನಮ್ಮ ಬಳಿಗೆ ಯಾರು ಸಂಪರ್ಕಿಸಿ ಬಂದಿಲ್ಲ. ಇದೇ ರೀತಿ ಮುಂದುವರೆದರೆ ಸಮೀಕ್ಷೆ ಅರೆಬರೆಯಾಗುತ್ತದೆ. ಸಮೀಕ್ಷೆಯಲ್ಲಿ ವ್ಯತ್ಯಾಸಗಳಾಗಿ ಯಾವುದೇ ಸಮುದಾಯಕ್ಕೆ ಅನ್ಯಾಯವಾಗಬಾರದು. ಇದನ್ನು ಸರಿಪಡಿಸುವಂತೆ ಆಯೋಗಕ್ಕೆ ಒತ್ತಾಯಿಸಿದ್ದೇವೆ” ಎಂದು ತಿಳಿಸಿದರು.
“ಒಳಮೀಸಲಾತಿಗೆ ರಾಜ್ಯ ಸರ್ಕಾರಕ್ಕೆ ವಿವೇಚನಾಧಿಕಾರ ನೀಡಿದ ಸುಪ್ರೀಂಕೋರ್ಟ್ ತೀರ್ಪಿನ ತಕ್ಷಣವೇ ಸರ್ಕಾರ ಸೂಕ್ತ ಕ್ರಮ ತೆಗೆದುಕೊಂಡಿದ್ದರೆ ಆಗುತ್ತಿತ್ತು. ಸಮಿತಿ ರಚನೆ, ಆಯೋಗ ರಚನೆ ಎಂದು ಕಾಲಹರಣವಾಯಿತು. ಜತೆಗೆ ರಾಜ್ಯದ 10-12 ಜಿಲ್ಲೆಗಳಲ್ಲಿ ಎರಡೂ ಸಹೋದರ ಸಮುದಾಯದಲ್ಲಿ ಗುರುತಿಸಿಕೊಂಡಿರುವ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಉಪಪಂಗಡದ ಬಗ್ಗೆ ಗೊಂದಲ ಇತ್ತು. ಎ.ಜೆ.ಸದಾಶಿವ ಆಯೋಗದ ವರದಿಯನ್ವಯ ಆದಿಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮುದಾಯಗಳನ್ನು ಎಡ-ಬಲಗಳಿಗೆ ಹಂಚಿದ್ದರೆ, ನಮ್ಮಲ್ಲೂ ಸಮೀಕ್ಷೆಯ ಅಗತ್ಯವೇ ಇರುತ್ತಿರಲಿಲ್ಲ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಒಳಮೀಸಲಾತಿ ಜಾರಿಯ ಪರಿಶಿಷ್ಟ ಜಾತಿ ಸಮೀಕ್ಷೆಯ ಲೋಪದೋಷಗಳನ್ನು ಶೀಘ್ರ ಸರಿಪಡಿಸಿ; ಇಮ್ಮಡಿ ಸಿದ್ದರಾಮೇಶ್ವರಶ್ರೀ.
“ಸಮೀಕ್ಷೆ ಸಂದರ್ಭದಲ್ಲಿ ಯಾವ್ಯಾವ ಪಂಗಡಗಳು ಯಾವ ಕ್ರಮಸಂಖ್ಯೆ ನಮೂದಿಸಬೇಕು ಎಂಬುದರ ಬಗ್ಗೆ ಸಮುದಾಯದೊಳಗೆ ಜಾಗೃತಿ ಆಗಿಲ್ಲ. ಕೆಲವು ಸಮುದಾಯಗಳಿಗೆ ಅಷ್ಟೇ ಗೊತ್ತಿದೆ. ಮೀಸಲಾತಿಯಲ್ಲಿ ಆಗಿರುವ ನ್ಯಾಯ ಸರಿಪಡಿಸಲೆಂದು ಒಳಮೀಸಲಾತಿ ಹೋರಾಟ ಶುರುವಾಗಿದ್ದು. ಎಡಬಲ ಸಮುದಾಯಗಳು ಒಗ್ಗಟ್ಟಿನಿಂದ ಕೆಲಸ ಮಾಡಿಕೊಂಡು ಬಂದಿವೆ. ಎಲ್ಲ ಸಮುದಾಯಗಳಲ್ಲೂ ಸಮನ್ವಯತೆ ಇದೆ. ಈ ಸಮೀಕ್ಷೆ ಮತ್ತು ಮೀಸಲಾತಿಯ ನಂತರ ಯಾರಲ್ಲೂ ಅಸಮಾಧಾನ, ಕೊರಗು ಉಂಟಾಗಬಾರದು. ವೈಮನಸ್ಸು ಶಾಶ್ವತವಾಗಿ ಇರಬಾರದು. ಯಾವುದೋ ಒಂದು ಸೌಲಭ್ಯಕ್ಕಾಗಿ ಭಾವನಾತ್ಮಕವಾಗಿರುವ ಸಂಬಂಧ ಕಳೆದುಕೊಳ್ಳುವ ಉದ್ದೇಶ ನಮಗೂ ಇಲ್ಲ, ಅವರಿಗೂ ಇಲ್ಲ. ಕುಟುಂಬ ಎಂದ ಮೇಲೆ ಒಂದು ಸಂದರ್ಭದಲ್ಲಿ ಅಸಮಾಧಾನ ಬರಬಹುದು. ಅದು ಶಾಶ್ವತ ಅಲ್ಲ. ಅದನ್ನು ನಿವಾರಿಸಿಕೊಂಡು ನಡೆಯುವ ಕೆಲಸ ಮಾಡಬೇಕು” ಎಂದು ಸಲಹೆ ನೀಡಿದರು.
ಇದನ್ನೂ ಓದಿ ; ದಾವಣಗೆರೆ | ಗೌತಮ ಬುದ್ಧನ ತತ್ವ, ಚಿಂತನೆಗಳ ಸ್ಮರಣೆಯೊಂದಿಗೆ ಬುದ್ಧ ಪೂರ್ಣಿಮೆ ಆಚರಣೆ.
“ಬಸವರಾಜ ಬೊಮ್ಮಾಯಿ ಅವರು ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಕೊಡಬೇಕೆನ್ನುವ ಏಕೈಕ ದೃಷ್ಟಿಯಿಂದ ಶೇ.2 ಮೀಸಲಾತಿ ಜಾಸ್ತಿ ಮಾಡಿದ್ದರು. ಯಾವ ಸಮುದಾಯವೂ ಮೀಸಲಾತಿಯಿಂದ ವಂಚಿತರಾಗಬಾರದೆಂದು ಮಾಧುಸ್ವಾಮಿ ಉಪಸಮಿತಿ ವರದಿ ಮೇರೆಗೆ ಶಿಫಾರಸು ಮಾಡಿತ್ತು. ಆ ಸಂದರ್ಭಕ್ಕೆ ತುಂಬ ಸೂಕ್ತವಾಗಿತ್ತು. ಈ ಸರ್ಕಾರ ಏನು ಮಾಡುತ್ತದೆಯೋ ಗೊತ್ತಾಗುತ್ತಿಲ್ಲ. ರಾಜಕಾರಣ ಪ್ರವೇಶ ಮಾಡಿದಾಗ ಸರಿ-ತಪ್ಪುಗಳ ಲೆಕ್ಕಾಚಾರ ಬೇರೆಯೇ ಆಗುತ್ತದೆ. ಶೇ.15 ರೊಳಗೆ ಒಳಮೀಸಲಾತಿ ಕೊಡುತ್ತದೆಯೋ, ಶೇ.17 ಒಳಮೀಸಲಾತಿ ಕೊಡುತ್ತೋ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ ಆಯೋಗಕ್ಕೆ ಆ ಬಗ್ಗೆ ಯಾವುದೇ ಸ್ಪಷ್ಟನೆಯನ್ನೂ ಸರ್ಕಾರ ನೀಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.