ಚಳ್ಳಕೆರೆ ತಾಲೂಕಿನ ರಾಮಜೋಗಿ ಹಳ್ಳಿಯ ಸರ್ವೆ ನಂಬರ್ 76ರ ಗೋಮಾಳದ ಜಾಗದಲ್ಲಿ ಅಕ್ರಮವಾಗಿ ಮಣ್ಣು ಅಗೆದು ಸಾಗಿಸಿ ಪ್ರಕೃತಿ ನಾಶಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಬಯಲುಸೀಮೆ ಪ್ರದೇಶವಾದಂತಹ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿ ಸರ್ಕಾರದ, ಗೋಮಾಳದ ಜಾಗಗಳನ್ನು ಗುರುತಿಸಿ ಗಿಡಮರಗಳನ್ನು ನೆಟ್ಟು ಅರಣ್ಯೀಕರಣ ಗೊಳಿಸಿ ಅಕ್ರಮ ಮಣ್ಣು ಗಣಿಗಾರಿಕೆ ತಡೆಯಬೇಕು ಎಂದು ಒತ್ತಾಯಿಸಿ ಕನ್ನಡ ರಕ್ಷಣಾ ವೇದಿಕೆಯ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಚಳ್ಳಕೆರೆ ತಾಲ್ಲೂಕು ದಂಡಾಧಿಕಾರಿ, ತಹಶೀಲ್ದಾರ್ ರೆಹಾನ್ ಪಾಷಾ ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಮುಖಂಡರು “ಬಯಲುಸೀಮೆ ಪ್ರದೇಶವಾದ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಜಾಗ, ಗೋಮಾಳದ ಪ್ರದೇಶಗಳಲ್ಲಿ ಅಕ್ರಮ, ಅವೈಜ್ಞಾನಿಕವಾಗಿ ಯಾವುದೇ ಪರವಾನಿಗೆ ಇಲ್ಲದೆ ಮಣ್ಣು ಅಗೆದು ಸಾಗಾಟ ಮಾಡಲಾಗುತ್ತಿದೆ. ಪ್ರಾಣಿ ಪಕ್ಷಿಗಳಿಗೆ ಜೀವಸಂಕುಲಕ್ಕೆ ಅಗತ್ಯವಿರುವ ಪ್ರಕೃತಿ ಉಳಿಸುವ ನಿಟ್ಟಿನಲ್ಲಿ ಅವೈಜ್ಞಾನಿಕವಾಗಿ ನಡೆಯುತ್ತಿರುವ ಅಕ್ರಮ ಮಣ್ಣು ಸಾಗಾಣಿಕೆಯನ್ನು ಕೂಡಲೆ ಮಟ್ಟ ಹಾಕಬೇಕು” ಎಂದು ಒತ್ತಾಯಿಸಿದರು.

“ರಾಮಜೋಗಿಹಳ್ಳಿ ಕೇವಲ ಒಂದು ಉದಾಹರಣೆಯಾಗಿದ್ದು, ತಾಲೂಕಿನ ಹಲವು ಗ್ರಾಮಗಳ ಗೋಮಾಳ, ಖರಾಬು, ಕೆರೆ ಅಂಗಳದಂತಹ ಸರ್ಕಾರಿ ಜಾಗದಲ್ಲಿ ಈ ರೀತಿಯ ಅಕ್ರಮ ಮಣ್ಣು ಗಣಿಗಾರಿಕೆ ನೆಡೆಯುತ್ತಿದೆ. ಇದನ್ನು ತಡೆದು ಸರ್ಕಾರಿ ಜಾಗಗಳಲ್ಲಿ ಕೃಷಿ ಇಲಾಖೆ, ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ತಾಲೂಕು ಆಡಳಿತ ಗಿಡಮರಗಳನ್ನು ನಡೆಸುವುದು ಹಾಗೂ ಸರ್ಕಾರಿ ಜಾಗಗಳನ್ನು ಕಾಪಾಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ತಾಲೂಕಿನ ನೆಲ-ಜಲ ಸಂರಕ್ಷಣೆಗಾಗಿ ಕನ್ನಡ ರಕ್ಷಣಾ ವೇದಿಕೆ ಸದಾ ಸಿದ್ಧ” ಎಂದು ತಿಳಿಸಿದರು.

“ಪ್ರಕೃತಿದತ್ತ ನೈಸರ್ಗಿಕ ಸಂಪತ್ತಾದ ಮಣ್ಣನ್ನು ದುರುಳರು ದೋಚುತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಮೌನ ವಹಿಸಿರುವುದು ಗಮನಿಸಿದರೆ, ಚಳ್ಳಕೆರೆ ತಾಲೂಕು ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಸರ್ಕಾರಿ ಜಾಗಗಳನ್ನು ಕಾಪಾಡುವುದು ತಾಲೂಕು ಅಧಿಕಾರಿಗಳ ಕರ್ತವ್ಯವಲ್ಲವೇ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕಾನೂನಾತ್ಮಕ ಕ್ರಮ ಕೈಗೊಂಡು, ಸರ್ಕಾರಿ ಜಮೀನುಗಳನ್ನು, ಗೋಮಾಳಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು” ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ ತಾಲೂಕು ದಂಡಾಧಿಕಾರಿ ರೆಹಾನ್ ಪಾಷಾ ಮಾತನಾಡಿ, “ಕೂಡಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ಅಕ್ರಮ ಮಣ್ಣು ಸಾಗಾಣಿಕೆ ನಿಲ್ಲಿಸಲು ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ ? ಚಿತ್ರದುರ್ಗ | ಚಳ್ಳಕೆರೆ, ಗೋಸಿಕೆರೆ ಸೇರಿ ಜಿಲ್ಲೆಯಲ್ಲಿ ಹಿಂದೂ ಮುಸ್ಲಿಮರ ಭಾವೈಕ್ಯತಾ ಹಬ್ಬ ಮೊಹರಂ ಆಚರಣೆಯ ಸಡಗರ
ಮನವಿ ಸಲ್ಲಿಸುವ ವೇಳೆ ತಾಲ್ಲೂಕು ಅಧ್ಯಕ್ಷರಾದ ಮಂಜುನಾಥ್, ಗೌರವಾಧ್ಯಕ್ಷರಾದ ಸಿ ಬೋಜರಾಜ್, ಪ್ರಧಾನ ಕಾರ್ಯದರ್ಶಿಯಾದ ಮರಿಕುಂಟೆ ಚಂದ್ರಣ್ಣ, ಸಂಘಟನಾ ಕಾರ್ಯದರ್ಶಿಯಾದ ಪ್ರೆಸ್ ಮುರಳಿ, ಯುವ ಘಟಕದ ಅಧ್ಯಕ್ಷ ರವಿಕುಮಾರ್, ಆಟೋ ಚಾಲಕರ ಸಂಘದ ಅಧ್ಯಕ್ಷ ಮದನ್, ಅಜಯ್ , ತಿಪ್ಪೇಸ್ವಾಮಿ, ರಾಜು ಸೇರಿದಂತೆ ಸಂಘಟನೆ ಮುಖಂಡರು, ಸದಸ್ಯರು ಹಾಜರಿದ್ದರು.