ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ಇತ್ತೀಚೆಗೆ ನಡೆದ ಮುತುವಲ್ಲಿ ಚುನಾವಣೆಯಲ್ಲಿ ನಡೆದಿರುವ ಅಕ್ರಮ ಹಾಗೂ ಅಧಿಕಾರ, ಅನುದಾನ ದುರ್ಬಳಕೆ ಮಾಡಿಕೊಂಡಿರುವ ಅನ್ವರ್‌ಭಾಷಾ ಸದಸ್ಯತ್ವ ರದ್ದುಗೊಳಿಸಬೇಕೆಂದು ಮುಸ್ಲಿಂ ಮುಖಂಡರು ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಒತ್ತಾಯಿಸಿದರು.
“ವಕ್ಫ್ ಮಂಡಳಿಯ ಸದಸ್ಯ ಅನ್ವರ್ ಭಾಷಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನ ದುರ್ಬಳಕೆ ಮಾಡಿಕೊಂಡು ಮತ್ತು ಅಗಸನಕಲ್ಲು ಬಡಾವಣೆಯ ಖಬ್ರಸ್ಥಾನಿನ ಜಮೀನಿನಲ್ಲಿ ಅವರ ಸಂಸ್ಥೆಯ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಈ ಅಕ್ರಮಗಳಲ್ಲಿ ತಾವು ನೇರವಾಗಿ ಭಾಗಿಯಾಗಿದ್ದು, ಸಮಿತಿ ರಚಿಸಿ ತನಿಖೆ ನಡೆಸುವಂತೆ, ಇವರ ಸದಸ್ಯತ್ವವನ್ನು ರದ್ದುಪಡಿಸಲು ಆದೇಶಿಸಲು ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸುತ್ತೇವೆ” ಎಂದು ತಿಳಿಸಿದರು.
“ವಕ್ಸ್ ಮಂಡಳಿಯ (ಮುತವಲ್ಲಿ) ಸದಸ್ಯರ ಚುನಾವಣೆಯಲ್ಲಿ ಕರ್ನಾಟಕದ ಸುಮಾರು 32 ಸಾವಿರ ನೋಂದಾಯಿತ ಸಂಸ್ಥೆಗಳಿದ್ದು, ಕೇವಲ 1024 ಸಂಸ್ಥೆಗಳ ಮುತುವಲ್ಲಿಗಳು ಹಕ್ಕುಳ್ಳವರಾಗಿರುತ್ತಾರೆ. ಇನ್ನು ಬಾಕಿ ಉಳಿದ 31 ಸಾವಿರ ಸಂಸ್ಥೆಗಳ ಸದಸ್ಯರಿಗೆ ಅವಕಾಶ ಇಲ್ಲದಿರುವುದು ಅಕ್ರಮ ನೆಡೆದಿರುವ ಸಂಶಯವಿದೆ” ಎಂದು ಅನುಮಾನ ವ್ಯಕ್ತಪಡಿಸಿದರು.

“ಮತದಾನಕ್ಕೆ ಸಂಸ್ಥೆಯ ವಾರ್ಷಿಕ ಆದಾಯವು 2 ಲಕ್ಷ ಮೇಲ್ಪಟ್ಟಿರಬೇಕಾಗುತ್ತದೆ. ಸುಮಾರು 7-8 ವರ್ಷಗಳಿಂದಲೂ ಆಡಿಟ್ ಆಗದ ಸಂಸ್ಥೆಗಳ ಅಧ್ಯಕ್ಷರುಗಳು (ಮುತುವಲ್ಲಿ) ಮತದಾನ ಮಾಡಲು ಅರ್ಹರು ಎಂದು ದೃಢೀಕರಿಸಿರುತ್ತಾರೆ. ಇದು ವಕ್ಫ್ ಕಾಯ್ದೆಯ ಕಾನೂನು ಉಲ್ಲಂಘನೆ. ಇದು ಅನ್ವರ್ ಬಾಷ ಷಡ್ಯಂತ್ರ ಎನ್ನುವ ಆರೋಪವಿದೆ. ಇದರ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ಆರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿರುತ್ತವೆ” ಎಂದು ಆರೋಪಿಸಿದರು.
“ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಸೇರಿದ ಮಸೀದಿ, ಖಬ್ರಸ್ಟಾನ್, ಮದರಸಾಗಳ ರಕ್ಷಣೆಯ ಬಗ್ಗೆ ಕೆ.ಅನ್ವರ್ ಬಾಷಾ ನಿರ್ಲಕ್ಷತನ ತೋರಿದ್ದು, ತಮ್ಮ ಬೆಂಬಲಿಗರಿಗಾಗಿ ಅನೇಕ ಅಕ್ರಮ ಎಸಗಿದ್ದಾರೆ. ಚಿತ್ರದುರ್ಗದ ವಕ್ಫ್ ಸಂಸ್ಥೆಗಳ ಆಡಿಟ್‌ನ್ನು 8-10 ವರ್ಷಮಾಡಿಸದೇ ಇಂತಹ ಸಂಸ್ಥೆಗಳ ಸಮಿತಿ ರಚನೆ ಮಾಡಿ ಅನುಮೋದನೆಯನ್ನು ಅಕ್ರಮವಾಗಿ ನೀಡಿರುತ್ತಾರೆ” ಎಂದು ಆಪಾದಿಸಿದರು.
“ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಮುಸ್ಲಿಂ ಹಾಸ್ಟೆಲ್ ಚುನಾವಣೆ ನಡೆಸಲು ಸುಮಾರು 2040 ಸದಸ್ಯರಿಂದ 2 ಲಕ್ಷದ 4 ಸಾವಿರ ರೂ.ಗಳನ್ನು ಪಡೆದು 10 ವರ್ಷಗಳಿಂದ ಚುನಾವಣೆ ನಡೆಸಿಲ್ಲ. ಈ ಸಂಸ್ಥೆಯ ವತಿಯಿಂದ ವಾಣಿಜ್ಯ ಸಂಕೀರ್ಣಕ್ಕಾಗಿ ಸುಮಾರು 40 ಲಕ್ಷ ರೂ. 20 ವರ್ಷಗಳ ಹಿಂದೆಯೇ ಪಡೆದು ಹಾಗು ಬಾಡಿಗೆದಾರರಿಂದ ಒಂದು ಕೋಟಿ ರೂ. ಅಡ್ವಾನ್ಸ್ ಹಣ ಪಡೆದು ವಂಚಿಸಿದ್ದಾರೆ. 2014-15ರಲ್ಲಿ ಜಿಲ್ಲಾ ವಕ್ಸ್ ಮಂಡಳಿಯ ಅಧ್ಯಕ್ಷರಾಗಿದ್ದಾಗ ಮುಸ್ಲಿಂ ಸಮಾಜದ ಬಡ ಹೆಣ್ಣು ಮಕ್ಕಳಿಗೆ ತರಬೇತಿಯ ಸಹಾಯಧನವನ್ನು ಸ್ನೇಹಿತರ, ಸಂಬಂಧಿಕರ ಮೂಲಕ ದುರುಪಯೋಗ ಪಡಿಸಿಕೊಂಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ, ಮರು ಎಣಿಕೆಗೆ ಆಗ್ರಹ.
“ಗ್ರಾಮೀಣ ಪ್ರದೇಶಗಳಲ್ಲಿ ಮದರಸ, ಮಸೀದಿ ಮತ್ತು ಖಬ್ರಸ್ಥಾನ್‌ನ ಆಸ್ತಿ ಸಂರಕ್ಷಣೆ ಯೋಜನೆಯಡಿಯಲ್ಲಿ ಅನುದಾನವನ್ನು ಬಿಡುಗಡೆಗೊಳಿಸುವಲ್ಲಿ ಅಕ್ರಮವಾಗಿದೆ. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಇಲಾಖೆಯ ವತಿಯಿಂದ ಅಲ್ಪಸಂಖ್ಯಾತರ ಕಾಲೋನಿಯ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಅನುದಾನವನ್ನು ತಮ್ಮ ಸ್ವಂತ ಶಾಲಾ, ಕಾಲೇಜು, ಹಾಗೂ ಮನೆಗೆ ಸಂಪರ್ಕ ಕಲ್ಪಿಸಿಕೊಡುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಿಕೊಂಡಿದ್ದು, ಸಂಪೂರ್ಣ ದುರ್ಬಳಕೆ ಮಾಡಿಕೊಂಡು ಅಕ್ರಮವೆಸಗಿದ್ದಾರೆ. ಅಧಿಕಾರಿಗಳು ಸಹ ಗಮನ ಹರಿಸದೆ ಹಾಗೂ ಕಾನೂನಿನ ಚೌಕಟ್ಟಿನಡಿಯಲ್ಲಿ ಮಾರ್ಗ ಸೂಚಿಯನ್ನು ಪಾಲಿಸದೆ ಅಕ್ರಮವಾಗಿದ್ದು, ಉನ್ನತ ಮಟ್ಟದ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸುತ್ತೇವೆ” ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ಅಜ್ಮಲ್ ಅಹಮದ್, ಮುತುವಲ್ಲಿ ದಾದಾಪೀರ್, ಎ ಐ ಎಂ ಐ ಎಂ ಮುಖಂಡ ಸೈಫುಲ್ಲಾ, ಮುಖಂಡ ಅಬ್ದುಲ್ ಕಯೂಂ, ಮೈಸೂರು ಮುಸ್ಲಿಂ ಮುಖಂಡ ಅಲೀಮುಲ್ಲ, ಸಾಮಾಜಿಕ ಕಾರ್ಯಕರ್ತ ಜಬಿವುಲ್ಲಾ, ಮುಸ್ಲಿಂ ಯುವ ಮುಖಂಡ ರಿಯಾಜ್ ಸೇರಿದಂತೆ ಇತರ ಮುಖಂಡರು ಕಾರ್ಯಕರ್ತರು ಹಾಜರಿದ್ದರು.
