ಇತ್ತೀಚೆಗೆ ಅಗಲಿದ ಸಿಪಿಐ (ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರಾಗಿದ್ದ ಕಾಮ್ರೇಡ್ ಜಿ.ಸಿ ಬಯ್ಯಾರೆಡ್ಡಿ ಅವರಿಗೆ ಕುಂದಾಪುರ ಸಿಪಿಎಂ ಪಕ್ಷದ ತಾಲೂಕು ಸಮಿತಿ ಆಶ್ರಯದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.
ಸಭೆಯನ್ನುದ್ದೇಶಿಸಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ ಬದುಕಿನುದ್ದಕ್ಕೂ ರೈತರ ಬೇಡಿಕೆಗಳಿಗಾಗಿ ರಾಜ್ಯದ ಎಲ್ಲಾ ಬಣಗಳನ್ನು ಒಟ್ಟಿಗೆ ತಂದು ಐಕ್ಯ ಹೋರಾಟವನ್ನು ಅನಾರೋಗ್ಯದ ನಡುವೆಯೂ ತೊಡಗಿಸಿಕೊಂಡ ಕ್ರಾಂತಿಕಾರಿ ವ್ಯಕ್ತಿತ್ವ ಕಾಮ್ರೇಡ್ ಬಯ್ಯಾರೆಡ್ಡಿ ಅವರದ್ದು ರೈತರ ಸಮಸ್ಯೆಗಳನ್ನು ಪರಿಹರಿಸಲು ಮತ್ತಷ್ಟು ಹೋರಾಟವನ್ನು ಮುಂದುವರಿಸುವುದೇ ಬಯ್ಯಾರೆಡ್ಡಿ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ಎಚ್ ನರಸಿಂಹ ಮಾತನಾಡಿ ಕಾಮ್ರೇಡ್ ಬಯ್ಯಾರೆಡ್ಡಿ ಅವರು ರಾಜ್ಯದ ಹಲವಾರು ಹೋರಾಟಗಳಿಗೆ ನೇತ್ರತ್ವ ಕೊಟ್ಟವರು ಉಡುಪಿ ಜಿಲ್ಲೆಗೂ ಹಲವು ಬಾರಿ ಆಗಮಿಸಿ ಮಾರ್ಗದರ್ಶನ ಮಾಡಿದ್ದರು ಅವರೊಬ್ಬ ದಣಿವರಿಯದ ಹೋರಾಟಗಾರ ಎಂದರು.
ಸಿಪಿಎಂ ಪಕ್ಷದ ತಾಲೂಕು ಕಾರ್ಯದರ್ಶಿ ಚಂದ್ರಶೇಖರ ವಿ ಪ್ರಾಸ್ತಾವಿಕ ಮಾತನಾಡಿ ಬಯ್ಯಾರೆಡ್ಡಿ ಅವರ ತಂದೆ ಚೌಡಪ್ಪ ಸ್ವಾತಂತ್ರ್ಯ ಹೋರಾಟಗಾರಾಗಿದ್ದರು. ತಂದೆಯ ಪ್ರಭಾವವು ವಿದ್ಯಾರ್ಥಿ ದಿಸೆಯಲ್ಲಿಯೇ ಬಯ್ಯಾರೆಡ್ಡಿ ಹೋರಾಟ ಮೈಗೂಡಿಸಿಕೊಂಡರು.
ವಿದ್ಯಾರ್ಥಿ ಬಸ್ ಪಾಸ್, ಶಾಶ್ವತ ನೀರಾವರಿ ಯೋಜನೆ ಮೊದಲಾದ ಹೋರಾಟಗಳಿಗೆ ನೇತ್ರತ್ವ ನೀಡಿದರು ರೈತರ ಭೂಸ್ವಾಧೀನ ವಿರೋಧಿ ಹೋರಾಟ ಸಾವಿರ ದಿನಗಳನ್ನು ಪೂರೈಸಿರುವುದು ಅವರೊಬ್ಬ ಸಮರಧೀರ ಹೋರಾಟಗಾರ ಎಂಬುದು ಸಾಬೀತಾಗಿದೆ ಅವರ ಅಕಾಲಿಕ ನಿಧನ ರೈತರ ಹೋರಾಟಗಳಿಗೆ ತುಂಬಲಾರದ ನಷ್ಟ ಎಂದು ಹೇಳಿದರು.
ಶ್ರದ್ಧಾಂಜಲಿ ಸಭೆ ಅಧ್ಯಕ್ಷತೆ ಸಿಪಿಎಂ ಹಿರಿಯ ಮುಖಂಡ ಕೆ ಶಂಕರ್ ವಹಿಸಿದ್ದರು, ವೇದಿಕೆಯಲ್ಲಿ ಸಿಪಿಎಂ ಪಕ್ಷದ ಹಿರಿಯ ಮುಖಂಡ ವಿ.ನರಸಿಂಹ ಉಪಸ್ಥಿತರಿದ್ದರು. ಆರಂಭದಲ್ಲಿ ಅಗಲಿದ ಸಂಗಾತಿಗೆ ಮೌನಾಚರಣೆ ಮಾಡಿ ಗೌರವ ಸಲ್ಲಿಸಲಾಯಿತು. ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ರವಿ ವಿ ಎಂ ವಂದಿಸಿದರು.
