ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು ಇಂದು ಹಮ್ಮಿಕೊಂಡಿರುವ 22ನೇ ‘ಚಿತ್ರಸಂತೆ’ಯನ್ನು ಸಿಎಂ ಸಿದ್ದರಾಮಯ್ಯನವರು ‘ಕನ್ನಡ’ದಲ್ಲಿ ಸಹಿ ಹಾಕುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “22 ರಾಜ್ಯಗಳ ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸುತ್ತಿದ್ದಾರೆ. ಇದು ಜಗತ್ತಿನಲ್ಲೇ ದೊಡ್ಡದು. ನಿರಂತರವಾಗಿ 22 ವರ್ಷಗಳಿಂದ ಕರ್ನಾಟಕ ಚಿತ್ರಕಲಾ ಪರಿಷತ್ತು ನಮ್ಮ ರಾಜ್ಯದ ಸಂಸ್ಕೃತಿ, ಕಲೆ, ಸಂಪ್ರದಾಯಗಳನ್ನು ಜಗತ್ತಿಗೆ ತೋರಿಸುವ ಕೆಲಸ ಮಾಡುತ್ತಿದೆ. ಚಿತ್ರಸಂತೆ ಬರುವವರು ತಮ್ಮ ತಮ್ಮ ಮನೆಗಳಿಗೆ ಒಂದಾದರೂ ಕಲಾಕೃತಿಗಳನ್ನು ಕೊಂಡೊಯ್ಯಬೇಕು. ಆ ಮೂಲಕ ಮನೆಗೊಂದು ಕಲಾಕೃತಿ ಇರುವಂತೆ ನೋಡಿಕೊಳ್ಳಬೇಕು. ಖರೀದಿ ಮಾಡುವ ಮೂಲಕ ಕಲಾವಿದರೂ ಆರ್ಥಿಕವಾಗಿ ಸಬಲರಾಗಲು ನೆರವಾಗಬೇಕು” ಎಂದು ಕರೆ ನೀಡಿದರು.
ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು ಇಂದು ಹಮ್ಮಿಕೊಂಡಿರುವ 22ನೇ ‘ಚಿತ್ರಸಂತೆ’ಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಸಾವಿರಾರು ಕಲಾವಿದರ ಪ್ರತಿಭೆ ಅನಾವರಣಕ್ಕೆ ಹಾಗೂ ಅವರು ರಚಿಸಿದ ಕಲಾಕೃತಿಗಳ ಮಾರಾಟಕ್ಕೆ ಅವಕಾಶ ಚಿತ್ರಸಂತೆಯು ಕಳೆದ 22 ವರ್ಷಗಳಿಂದ ವೇದಿಕೆ ಕಲ್ಪಿಸುತ್ತಿದೆ. pic.twitter.com/ULw0wjo4Oo
— eedina.com ಈ ದಿನ.ಕಾಮ್ (@eedinanews) January 5, 2025
ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಈ ರೀತಿಯ ದೊಡ್ಡ ಚಿತ್ರಸಂತೆಯು ಅನೇಕ ಕಲಾವಿದರಿಗೆ ಉತ್ತಮ ವೇದಿಕೆಯೊದಗಿಸುತ್ತಿದೆ. ಕಳೆದ 22 ವರ್ಷಗಳಿಂದ ಅನೇಕ ಕಲಾವಿದರಿಗೆ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಇದು ಒಳ್ಳೆಯ ವೇದಿಕೆಯಾಗಿ ಮಾರ್ಪಟ್ಟಿದೆ. ಒಂದು ದಿನದ ಈ ಚಿತ್ರಸಂತೆಯಲ್ಲಿ ಸುಮಾರು 4ರಿಂದ 5 ಲಕ್ಷ ಜನ ಭಾಗವಹಿಸುತ್ತಾರೆ. ಈ ಬಾರಿಯ ಚಿತ್ರಸಂತೆಯನ್ನು ಹೆಣ್ಣು ಮಗುವಿಗೆ ಸಮರ್ಪಣೆ ಮಾಡಿರುವಂಥದ್ದು ಬಹಳ ವಿಶೇಷವಾದದ್ದು ಎಂದು ಸಿಎಂ ಸಿದ್ದರಾಮಯ್ಯ ಶ್ಲಾಘಿಸಿದರು.
ಮಹಿಳೆಯರಿಗೆ ಶಕ್ತಿ ತುಂಬಲೆಂದೇ ಉಚಿತ ಬಸ್ ಪ್ರಯಾಣ ನೀಡುವ ಶಕ್ತಿ ಯೋಜನೆ, ಮಾಸಿಕವಾಗಿ ಹಣ ನೀಡುವ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿದ್ದೇವೆ. ಹೆಣ್ಣು ಮಕ್ಕಳ ಕೈಯ್ಯಲ್ಲಿ ಹಣವಿದ್ದಲ್ಲಿ ಕುಟುಂಬಕ್ಕೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಬರುತ್ತದೆ. ಮಹಿಳೆಯರು ಹಣ ಉಳಿತಾಯ ಮಾಡಿ, ಅವರು ಕೂಡ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಚಿತ್ರಸಂತೆಯನ್ನು ‘ಹೆಣ್ಣು ಮಗುವಿಗೆ’ ಸಮರ್ಪಣೆ ಮಾಡುವ ಮೂಲಕ ಚಿತ್ರಕಲಾ ಪರಿಷತ್ ಉತ್ತಮ ಕೆಲಸ ಮಾಡಿದೆ ಎಂದು ತಿಳಿಸಿದರು.
‘ಕನ್ನಡ’ದಲ್ಲಿ ಸಹಿ
’22ನೇ ಚಿತ್ರಸಂತೆಯನ್ನು ಉದ್ಘಾಟಿಸಿದ್ದೇನೆ’ ಎಂದು ಬರೆದು, ‘ಸಿದ್ದರಾಮಯ್ಯ’ ಎಂದು ಕನ್ನಡದಲ್ಲಿ ಸಹಿ ಹಾಕುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಿತ್ರಸಂತೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಚಿವರಾದ ಬೈರತಿ ಸುರೇಶ್, ಡಿ.ಸುಧಾಕರ್, ಸಿಎಂ ಸಿದ್ದರಾಮಯ್ಯನವರ ಕಾನೂನು ಸಲಹೆಗಾರರಾದ ವಿರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಎ. ಎಸ್. ಪೊನ್ನಣ್ಣ, ಸಂಸದದರಾದ ಪಿ ಸಿ ಮೋಹನ್, ಕರ್ನಾಟಕ ಚಿತ್ರಕಲಾ ಪರಿಷತ್ ಬಿ ಎಲ್ ಶಂಕರ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಆರು ಲಕ್ಷ ಮಂದಿಯಿಂದ ಭೇಟಿಯ ನಿರೀಕ್ಷೆ
ಸಾವಿರಾರು ಕಲಾವಿದರ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುವ ಹಾಗೂ ಅವರು ರಚಿಸಿದ ಕಲಾಕೃತಿಗಳ ಮಾರಾಟಕ್ಕೆ ಅವಕಾಶ ಒದಗಿಸುವ 22ನೇ ‘ಚಿತ್ರಸಂತೆ’ಯನ್ನು ಕರ್ನಾಟಕ ಚಿತ್ರಕಲಾ ಪರಿಷತ್ತು ಭಾನುವಾರ ಕುಮಾರಕೃಪಾ ರಸ್ತೆಯಲ್ಲಿ ರಾತ್ರಿ 9 ಗಂಟೆಯವರೆಗೆ ಹಮ್ಮಿಕೊಂಡಿದೆ.
ಈ ಬಾರಿಯ ಚಿತ್ರಸಂತೆಗೆ ಐದು ಲಕ್ಷರಿಂದ ಆರು ಲಕ್ಷ ಮಂದಿ ಭೇಟಿ ನೀಡುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. ಚಿತ್ರಸಂತೆಯಲ್ಲಿ ವ್ಯಂಗ್ಯಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಕುಂಚ ಅಥವಾ ಪೆನ್ಸಿಲ್‌ಗಳಿಂದ ಕಲಾರಸಿಕರ ಭಾವಚಿತ್ರಗಳನ್ನು ಸ್ಥಳದಲ್ಲಿಯೇ ರಚಿಸಿಕೊಡುವ ಕಲಾವಿದರು ಇರುತ್ತಾರೆ.
ಈ ಬಾರಿಯ ಚಿತ್ರಸಂತೆಯನ್ನು ‘ಹೆಣ್ಣು ಮಗುವಿಗೆ’ ಸಮರ್ಪಣೆ ಮಾಡಲಾಗಿದೆ. ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಈ ಸಂತೆಗೆ ಪರಿಷತ್ತು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಪ್ರವೇಶ ದ್ವಾರದಲ್ಲಿಯೇ ಬಾಲಕಿಯ ಬೃಹದಾಕಾರದ ಕಲಾಕೃತಿ ನಿರ್ಮಿಸಲಾಗಿದೆ.
ದೇಶದ ವಿವಿಧ ಭಾಗಗಳಿಂದ 1,500 ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿ, ಕಲಾಕೃತಿಗಳನ್ನು ಪ್ರದರ್ಶಿಸುತ್ತಿದ್ದಾರೆ. ಕರ್ನಾಟಕದ ಜತೆಗೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ. ಪರಿಷತ್ತಿನ ಗ್ಯಾಲರಿಗಳಲ್ಲಿ ಹಿರಿಯ ಹಾಗೂ ಹೆಸರಾಂತ ಕಲಾವಿದರು ರಚಿಸಿದ ಕಲಾಕೃತಿಗಳ ಪ್ರದರ್ಶನ ನಡೆಯಲಿವೆ. ಚಿತ್ರಸಂತೆಯಲ್ಲಿ ₹100 ರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಲಾಕೃತಿಗಳು ಇರಲಿವೆ.
