ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ಕಲ್ಲಡ್ಕ ಪ್ರಭಾಕರ್ ಭಟ್ ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟ ದೂರು ದಾಖಲಿಸಿದೆ.
ಮಂಗಳೂರು ದಕ್ಷಿಣ ಠಾಣೆಯಲ್ಲಿ ಒಕ್ಕೂಟದ ಮುಖಂಡರು ದೂರು ದಾಖಲಿಸಿದ್ದಾರೆ. “ಪ್ರಭಾಕರ್ ಭಟ್ ಕೋಮು ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಮುಸ್ಲಿಂ ಸಮುದಾಯದ ವಿರುದ್ಧ ಮತೀಯ ಉದ್ವಿಗ್ನತೆ ಸೃಷ್ಠಿಸುತ್ತಿದ್ದಾರೆ. ಮತೀಯ ಗಲಭೆಗಳನ್ನು ಹುಟ್ಟು ಹಾಕುವ ರೀತಿಯ ಹೇಳಿಕೆ ನೀಡಿದ್ದಾರೆ” ಎಂದು ಆರೋಪಿಸಿದ್ದಾರೆ.
” ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಪೊಲೀಸರು,ಸರ್ಕಾರ ಮತ್ತು ಜಿಲ್ಲಾಡಳಿತ ಪ್ರಕರಣ ದಾಖಲಿಸಬೇಕು. ಪ್ರಕರಣ ದಾಖಲಿಸಲು ಹಿಂಜರಿದರೆ, ಅವರ ಹೇಳಿಕೆಗಳಿಂದಾಗಿ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆಗಳಿವೆ. ಇದಕ್ಕೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಹೊಣೆಯಾಗುತ್ತದೆ” ಎಂದು ಒಕ್ಕೂಟದ ಮುಖಂಡರು ಹೇಳಿದ್ದಾರೆ.
ದೂರು ದಾಖಲಿಸುವ ವೇಳೆ, ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ.ಅಶ್ರಫ್, ಅಬ್ದುಲ್ ಜಲೀಲ್,ಅಶ್ರಫ್ ಬದ್ರಿಯಾ, ಸಾಲಿಹ್ ಬಜ್ಪೆ, ಹಿದಾಯತ್ ಮಾರಿಪಲ್ಲ,ಹಿದಾಯತ್ ಕೃಷ್ಣಾಪುರ,ಮೊಹಮ್ಮದ್ ಹನೀಫ್.ಯು, ವಿ.ಏಚ್. ಕರೀಮ್, ಫಾರೂಕ್ ಮತ್ತಿತರು ಇದ್ದರು.