“ಉಡುಪಿ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ರಶ್ಮಿ ಸಮಂತ್ ಎಂಬ ಮಹಿಳೆ ತನ್ನ ಟ್ವೀಟರ್ ಖಾತೆಯಲ್ಲಿ ಬರೆದ ಪ್ರಚೋದನಾಕಾರಿ ಸಂದೇಶಗಳನ್ನು ರಿಟ್ವೀಟ್ ಮಾಡಿ ದೂರನ್ನು ಬರೆದು ಪೊಲೀಸರಿಗೆ ಹಾಗೂ ಜಿಲ್ಲಾಧಿಕಾರಿಗೆ ಟ್ಯಾಗ್ ಮಾಡಿದ್ದೆ. ಮರುದಿನವೇ ಆ ಟ್ವೀಟ್ ಡಿಲಿಟ್ ಆಗಿದೆ” ಎಂದು ಉಡುಪಿಯ ʼಸಹಬಾಳ್ವೆʼ ಅಧ್ಯಕ್ಷ ಅಮೃತ್ ಶೆಣೈ ದೂರಿದ್ದಾರೆ.
“ಈ ದಿನ”ದ ಜೊತೆ ಮಾತನಾಡಿದ ಅವರು, ನಾನು ಕೆಲವು ಸ್ಕ್ರೀನ್ ಶಾಟ್‌ಗಳನ್ನು ಲಗತ್ತೀಕರಿಸಿದ್ದೆ. ಅವರ ಟ್ವೀಟ್‌ಗಳಲ್ಲಿ ಅವರು ಉಡುಪಿ ಕಾಲೇಜಿನ ಪ್ರಕರಣದಲ್ಲಿ ಚಿತ್ರೀಕರಣ ಆದ ವೀಡಿಯೋ ನೋಡಿದ್ದೇನೆ ಎಂದೂ ಬರೆದಿದ್ದಾರೆ. ಎಸ್ ಪಿ ಯವರು ಸಾಮಾಜಿಕ ತಾಣದಲ್ಲಿದ್ದ ವಿಡಿಯೋ ಈ ಪ್ರಕರಣದ್ದು ಅಲ್ಲ ಎಂದು ಹೇಳಿದ್ದಾರೆ. ತದನಂತರ ಯೂಟ್ಯೂಬ್ ನಲ್ಲಿ ವೀಡಿಯೋ ಅಪ್ಲೋಡ್ ಮಾಡಿದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿದೆ. ಆ ಬಳಿಕವೂ ರಶ್ಮಿ ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿಲ್ಲ. ಅದಲ್ಲದೇ ಅವರು ಮಾಧ್ಯಮದವರಲ್ಲಿ ಹಾಗೂ ತನ್ನ ಟ್ವೀಟ್‌ಗಳಲ್ಲಿ ಪದೇ ಪದೇ ಉಡುಪಿ ಪೊಲೀಸರು ಅವರಿಗೆ ಕಿರುಕುಳ ನೀಡಿದ್ದಾರೆ ಆರೋಪ ಮಾಡಿದ್ದಾರೆ” ಎಂದು ಹೇಳಿದರು.

“ವೀಡಿಯೋ ರೆಕಾರ್ಡಿಂಗ್ ಮಾಡಿದ್ದರೆ, ಅದನ್ನು ನಾನೂ ವಿರೋಧಿಸುತ್ತೇನೆ. ಯಾವ ಧರ್ಮದವರೇ ಇರಲಿ, ತಪ್ಪು ತಪ್ಪೇ. ಆದರೆ ಪೊಲೀಸರು ತನಿಖೆ ನಡೆಸುವ ಮೊದಲೇ ತೀರ್ಪುನೀಡಿದ ರೀತಿಯಲ್ಲಿ ಟ್ವೀಟ್ ಮಾಡುವುದು ಕಾನೂನು ಬಾಹಿರ.
ಪ್ರಚೋದನಕಾರಿ ಹಾಗು ಸುಳ್ಳು ಆರೋಪ ಮಾಡಿರುವ ರಶ್ಮಿಯವರ ಮೇಲೂ ಪ್ರಕರಣ ದಾಖಲು ಮಾಡಬೇಕೆಂದು ಉಡುಪಿ ಪೊಲೀಸರಿಗೆ ಈ ಮೂಲಕ ಮನವಿ ಮಾಡುತ್ತೇನೆ. ಏಕೆಂದರೆ ಅವರಿಗೆ ಲಕ್ಷಾಂತರ ಫಾಲೊವರ್ಸ್ ಇದ್ದು, ಅವರು ಮಾಡಿದ ಟ್ವೀಟ್‌ಗಳು ಸಮಾಜದ ಶಾಂತಿಯನ್ನು ಕದಡುತ್ತವೆ ಎಂಬುದು ಮೇಲ್ನೋಟಕ್ಕೆ ತೋರುತ್ತದೆ” ಎಂದು ಅಮೃತ್ ಹೇಳಿದ್ದಾರೆ.