ಹೊಸದಾಗಿ ಕೆರೆ ನಿರ್ಮಾಣ ಮಾಡುವುದಾಗಿ ತಿಳಿಸಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ರಂಭಾಪುರಿ ಮಠದಲ್ಲಿ ಪುಷ್ಕರಣಿ ಕಾಮಗಾರಿ ಮಾಡುತ್ತಿರುವ ಬಗ್ಗೆ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಾಮಾಜಿಕ ಹೋರಾಟಗಾರೋರ್ವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಹೊಸ ಕೆರೆ ನಿರ್ಮಾಣ ಮಾಡುವುದಾಗಿ ತಿಳಿಸಿದ್ದ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ಮಾರ್ಗಪಲ್ಲಟ ಮಾಡಿದ್ದಲ್ಲದೇ, ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿರುವ ರಂಭಾಪುರಿ ಮಠದಲ್ಲಿ ಪುಷ್ಕರಣಿ ಕಾಮಗಾರಿ ನಡೆಸುತ್ತಿದ್ದಾರೆ. ಆ ಮೂಲಕ ಅಧಿಕಾರಿಗಳೇ ಕೆಟಿಪಿಪಿ ಉಲ್ಲಂಘನೆ ಮಾಡಿದ್ದಾರೆ ಎಂದು ಮಂಜುನಾಥ್ ಹಿರೇಚೌಟಿ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಶಿವಮೊಗ್ಗ ಜಿಲ್ಲಾ ಸೊರಬ ತಾಲೂಕು ನಿವಾಸಿಯಾಗಿರುವ ದೂರುದಾರ ಮಂಜುನಾಥ್, ಸದ್ಯ ಬೆಂಗಳೂರಿನಲ್ಲಿದ್ದಾರೆ. ಕಳೆದ ನವೆಂಬರ್ 20ರಂದು ಕರ್ನಾಟಕ ಲೋಕಾಯುಕ್ತರಿಗೆ ದಾಖಲೆಗಳ ಸಹಿತ ದೂರು ನೀಡಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಕರ್ನಾಟಕ ಲೋಕಾಯುಕ್ಕೆ ಸಣ್ಣ ನೀರಾವರಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಸಣ್ಣ ನೀರಾವರಿ (ದಕ್ಷಿಣ) ಮತ್ತು ಅಂತರ್ಜಲ ಅಭಿವೃದ್ಧಿ ಬೆಂಗಳೂರು ಇದರ ಮುಖ್ಯ ಇಂಜಿನಿಯರ್, ಅಧೀಕ್ಷಕ ಇಂಜಿನಿಯರ್, ಕಾರ್ಯಪಾಲಕ ಅಭಿಯಂತರರಾದ ಎಚ್ ಎಲ್ ಮೂಡಲಗಿರಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್
ಭರತ್ ಎಚ್ ಎಂ ವಿರುದ್ಧ ದೂರು ದಾಖಲಿಸಿದ್ದಾರೆ.
ಸರ್ಕಾರಿ ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಂಡು ಮಾರ್ಗಪಲ್ಲಟ ಮಾಡಲು ಪ್ರೇರೇಪಿಸಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ತ್ವರಿತಗತವಾಗಿ ಕ್ರಮ ಜರುಗಿಸಿ ಎಂದು ಲೋಕಾಯುಕ್ತ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಈ ಬಗ್ಗೆ ಈ ದಿನ ಡಾಟ್ ಕಾಮ್ ಜೊತೆಗೆ ಮಾತನಾಡಿರುವ ದೂರುದಾರ ಮಂಜುನಾಥ್, “ವಿಶೇಷವಾಗಿ ಕೆಟಿಪಿಪಿ (Karnataka Transparency in Public Procurement) ಮಾದರಿ ಟೆಂಡರ್ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರಬೇಕು. ಅದರಂತೆ ಮಠ ಮಾನ್ಯಗಳಿಗೆ ಕೇವಲ 50 ಲಕ್ಷದವರೆಗೂ ಮಾತ್ರ ಅವಕಾಶವಿರುತ್ತದೆ. ಟೆಂಡರ್ ಪ್ರಕ್ರಿಯೆಯಲ್ಲಿ ಆದರೆ ರಾಜಕಾರಣಿಗಳು ಪ್ರಭಾವ ಬಳಸಿ ಅಧಿಕಾರಿಗಳು ಮುಖಾಂತರ ಈ ರೀತಿ ಕೋಟ್ಯಂತರ ರೂಪಾಯಿ ಅವ್ಯವಹಾರ ಹಾಗೂ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ಹೊಸದಾಗಿ ಕೆರೆ ನಿರ್ಮಾಣ ಮಾಡುವುದಾಗಿ ತಿಳಿಸಿ ಅಕ್ರಮವಾಗಿ ಮಾರ್ಗಪಲ್ಲಟ ಮಾಡಿಲಾಗಿದೆ. ಇದರಲ್ಲಿ ಪಾರದರ್ಶಕ ಇಲ್ಲದಾಗಿದೆ ಎಂದು ಆರೋಪಿಸಿದ್ದಾರೆ. ಹಾಗಾಗಿ ಕೂಡಲೇ ತನಿಖೆ ನಡೆಸಿ ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇದರ ಕುರಿತಾಗಿ ಮತ್ತೇನು ವಿಚಾರ ಹೊರಬರಲಿದೆ ಎಂಬುದು ನಿರೀಕ್ಷಿಸಬೇಕಿದೆ.

