ಬೀದರ ಜಿಲ್ಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವತಿಯಿಂದ ಕೈಗೊಂಡ ಎಲ್ಲ ಕಾಮಗಾರಿಗಳನ್ನು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸುವಂತೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಶನಿವಾರ ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಹಮ್ಮಿಕೊಂಡ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ʼ2018-19 ರಿಂದ 2023 ರವರೆಗೆ ವಿವಿಧ ಇಲಾಖೆಗಳಲ್ಲಿ ಕೆಕೆಆರ್‌ಡಿಬಿ ಕಾಮಗಾರಿಗಳು ಅಪೂರ್ಣ ಹಂತದಲ್ಲಿವೆ. ಮೆಕ್ರೋ ಹಾಗೂ ಮೈಕ್ರೋ ಯೋಜನೆಯ ಎಲ್ಲ ಕಾಮಗಾರಿಗಳನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಬರುವ ಮಾರ್ಚ್ ಒಳಗಾಗಿ ಪೂರ್ಣಗೊಳಿಸುವಂತೆʼ ಸೂಚಿಸಿದರು.
ʼಜಿಲ್ಲೆಯಲ್ಲಿ ಈವರೆಗೆ ಒಟ್ಟು 3,564 ಕಾಮಗಾರಿಗಳು ಪೂರ್ಣಗೊಂಡಿದ್ದು, 708 ಕಾಮಗಾರಿಗಳು ಪ್ರಗತಿಯಲ್ಲಿವೆ, 436 ಇನ್ನು ಆರಂಭಿಸಬೇಕಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು. ಎಲ್ಲ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹಾಗೂ ಜಿಲ್ಲಾ ಪಂಚಾಯತ ಸಿಇಒ ಡಾ.ಗಿರೀಶ ಬದೋಲೆ ಅವರಿಗೆ ಸಚಿವರು ಸೂಚಿಸಿದರು.
ವೈದ್ಯಕೀಯ ನಿರ್ದೇಶನಾಲಯಕ್ಕೆ 2020 ರಲ್ಲಿಯೇ ₹11 ಕೋಟಿ ನೀಡಿದ್ದು, ಈವರೆಗೆ ಖರ್ಚು ಮಾಡದಿರುವ ಹಣ ಮರಳಿಸಲು ಪತ್ರ ಬರೆಯುವಂತೆ ಸೂಚಿಸಿದರು. ನಿರ್ಮಿತಿ ಕೇಂದ್ರದಿಂದ 118 ಅಂಗನವಾಡಿ ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದವುಗಳು ಪ್ರಗತಿಯಲ್ಲಿವೆ. ಶಿಕ್ಷಣ ಇಲಾಖೆಗೆ ಮೈಕ್ರೋ ಯೋಜನೆಯಡಿ 2023 ರಲ್ಲಿ 37 ಕಾಮಗಾರಿಗಳಿಗೆ ₹4.65 ಕೋಟಿ ಅನುದಾನ ನೀಡಲಾಗಿದ್ದು ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರು.
ಆರೋಗ್ಯ ಇಲಾಖೆಗೆ 11 ಅಂಬುಲೆನ್ಸ್ ಒದಗಿಸಲಾಗಿದ್ದು, 11 ಚಾಲಕರನ್ನು ಸಹ ಕೆಕೆಆರ್‌ಡಿಬಿ ಅಡಿಯಲ್ಲಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು. ಎಲ್ಲ ಕೆಕೆಆರ್‌ಡಿಬಿ ಕಾಮಗಾರಿಗಳನ್ನು ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರಲ್ಲದೇ ಜಿಲ್ಲಾಧಿಕಾರಿಗಳು ಹಾಗೂ ಸಿಇಓ ಈ ಕಾಮಗಾರಿಳ ಗುಣಮಟ್ಟ ಪರೀಕ್ಷಿಸುವಂತೆ ತಿಳಿಸಿದರು.
ಎಸ್‌ಎಸ್‌ಎಲ್ ಸಿ ಫಲಿತಾಂಶ ಹೆಚ್ಚಿಸುವ ಕ್ರಮ:
ಇದೇ ಮಾರ್ಚ 21 ರಂದು ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜರುಗಲಿದ್ದು, ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಿಸಲು ಹಾಗೂ ಜಿಲ್ಲೆಯ ರ‍್ಯಾಂಕ್ ಹೆಚ್ಚಳಕ್ಕೆ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ ವಿಶೇಷ ಕಾರ್ಯಾಗಾರ ತರಬೇತಿ ತರಗತಿ ಹಮ್ಮಿಕೊಂಡ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ವಿವರಣೆ ಕೇಳಿದರು.
ಡಿಡಿಪಿಐ ಸಲೀಂ ಪಾಷ ಮಾತನಾಡಿ, ʼಈಗಾಗಲೇ ಎಲ್ಲ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಎರಡು ವಿಶೇಷ ತರಗತಿ, ಕಾರ್ಯಾಗಾರ ಹಮ್ಮಿಕೊಂಡು ಅಗತ್ಯವಿರುವ ಎಲ್ಲ ಪರೀಕ್ಷೆಗಳನ್ನು ಸಹ ಹಮ್ಮಿಕೊಳ್ಳಲಾಗಿದೆʼ ಎಂದರು.
ಎಲ್ಲ ಉಪವಿಭಾಗಾಧಿಕಾರಿಳು ಹಾಗೂ ತಹಸೀಲ್ದಾರರು ತಮ್ಮ ವ್ಯಾಪ್ತಿಯ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವಂತೆ ಸಚಿವರು ಸೂಚಿಸಿದರು.
ʼಬಸವಕಲ್ಯಾಣದಲ್ಲಿ ಗೋಶಾಲೆ ನಿರ್ಮಾಣಕ್ಕೆ ಸರಕಾರವು ₹50 ಲಕ್ಷ ಅನುದಾನ ನೀಡಿದ್ದು, ಕಾಮಗಾರಿ ಆರಂಭಿಸುವಂತೆ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಲಾಯಿತು. ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತಗಳಲ್ಲಿ 2023-24ನೇ ಸಾಲಿನ ಎಲ್ಲಾ ಯೋಜನಾ ಕಾರ್ಯಕ್ರಮಗಳನ್ನು ತಪ್ಪದೇ ಮಾರ್ಚ್ ಒಳಗಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸದರು. ಜಿಲ್ಲಾ ಪಂಚಾಯತನಲ್ಲಿ ಯಾವುದೇ ಕ್ರೀಯಾ ಯೋಜನೆ ಬಾಕಿ ಉಳಿಯದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ ಸಿಇಒ ಅವರಿಗೆ ಸೂಚಿಸಿದರು. ಇಲ್ಲವಾದಲ್ಲಿ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದುʼ ಎಂದು ಸಚಿವರು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ: ನಾಲ್ವರ ಬಂಧನ
ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಸಿಇಒ ಡಾ.ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ., ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಬೀದರ ಸಹಾಯಕ ಆಯುಕ್ತ ಎಂ.ಡಿ.ಶಖೀಲ್, ಬಸವಕಲ್ಯಾಣ ಸಹಾಯಕ ಆಯಕ್ತ ಮುಕುಲ್ ಜೈನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.